ಹೊಸ ಸರ್ಕಾರದ ಬಜೆಟ್‌ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಭರಪೂರ ಅನುದಾನ ನೀಡುವ ನಿರೀಕ್ಷೆ ಜತೆಗೆ, ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ ನಿರ್ಮಾಣದ ಘೋಷಣೆ ಸಾಧ್ಯತೆ ಇದೆ. 

ಬೆಂಗಳೂರು (ಜು.07): ಹೊಸ ಸರ್ಕಾರದ ಬಜೆಟ್‌ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಭರಪೂರ ಅನುದಾನ ನೀಡುವ ನಿರೀಕ್ಷೆ ಜತೆಗೆ, ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ ನಿರ್ಮಾಣದ ಘೋಷಣೆ ಸಾಧ್ಯತೆ ಇದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಆಗಿರುವುದರಿಂದ ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಜೆಟ್‌ ಭರಪೂರ ಅನುದಾನ ದೊರೆಯುವ ನಿರೀಕ್ಷೆ ಇದೆ. ಈ ಹಿಂದಿನ ಬಿಜೆಪಿ ಸರ್ಕಾರ 2023-24ನೇ ಸಾಲಿನ ಆಯವ್ಯಯದಲ್ಲಿ .9 ಸಾವಿರ ಕೋಟಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳನ್ನು ಕೈಗೊಳ್ಳುವುದಾಗಿ ಘೋಷಣೆ ಮಾಡಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರವೂ .9 ಸಾವಿರ ಕೋಟಿ ಆಸುಪಾಸಿನ ಮೊತ್ತವನ್ನು ನಗರದ ಅಭಿವೃದ್ಧಿ ಯೋಜನೆಗೆ ನೀಡುವ ನಿರೀಕ್ಷೆ ಇದೆ.

ಇಂದಿರಾ ಕ್ಯಾಂಟೀನ್‌ಗೆ ಸಿಗುತ್ತಾ 200 ಕೋಟಿ?: ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ಹಾಗೂ ಹೊಸ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಸರ್ಕಾರ ಹಣ ನೀಡುವ ಸಾಧ್ಯತೆ ಇದೆ. ಸುಮಾರು .200 ಕೋಟಿ ಬೇಕಾಗಲಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡಿಸಲಾದ ಬಜೆಟ್‌ನಲ್ಲಿಯೇ ನಗರದಲ್ಲಿ ಹಳೇ ನೀರು ಶುದ್ಧಿಕರಣ ಘಟಕಗಳ ಉನ್ನತ್ತೀಕರಣಕ್ಕೆ .1,200 ಕೋಟಿ ಹಾಗೂ ಕೊಳವೆ ಬಾವಿಗಳ ವಿದ್ಯುತ್‌ ಬಾಕಿ ಬಿಲ್‌ ಪಾವತಿಗೆ .300 ಕೋಟಿ ಸೇರಿ ಒಟ್ಟು .1,500 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅನುದಾನ ನೀಡಿರಲಿಲ್ಲ. ಈ ಸರ್ಕಾರವಾದರೂ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬಜೆಟ್‌ನಲ್ಲಿ ಜನರಿಗೆ ತೆರಿಗೆ ಬರೆ ಬೇಡ: ಮಾಜಿ ಸಿಎಂ ಬೊಮ್ಮಾಯಿ

ಟನಲ್‌ ರಸ್ತೆಗೆ ಮುಹೂರ್ತ?: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಸರ್ಕಾರವು ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟುಪ್ರಯತ್ನಿಸುತ್ತಿದ್ದು, ಈಗಾಗಲೇ ಸುರಂಗ ರಸ್ತೆ ನಿರ್ಮಾಣ ಸಂಸ್ಥೆಗಳೊಂದಿಗೆ ಡಿ.ಕೆ.ಶಿವಕುಮಾರ್‌ ಸಭೆ ನಡೆಸಿದ್ದಾರೆ. ಜತೆಗೆ, ಸುರಂಗ ರಸ್ತೆ ನಿರ್ಮಾಣದಿಂದ ನಗರದ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ. ಈ ಬಗ್ಗೆ ಬಜೆಟ್‌ನಲ್ಲಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ, ನಗರದ ಸುರಂಗ ರಸ್ತೆ ನಿರ್ಮಾಣಕ್ಕೆ ಶುಕ್ರವಾರ ಮುಹೂರ್ತ ನಿಗದಿ ಆಗುವ ಸಾಧ್ಯತೆ ದಟ್ಟವಾಗಿದೆ.

ನಗರದಲ್ಲಿ 17 ಹೊಸ ಫ್ಲೈಓವರ್‌ ನಿರ್ಮಾಣ?: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಗರದ 17 ಜಂಕ್ಷನ್‌ಗಳಲ್ಲಿ ಫ್ಲೈಓವರ್‌ ನಿರ್ಮಾಣ ಬಗ್ಗೆ ಬಿಬಿಎಂಪಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿದೆ. ಈ ಬಗ್ಗೆ ಪರಿಶೀಲಿಸಿರುವ ಸರ್ಕಾರ, ಬಜೆಟ್‌ನಲ್ಲಿ ಫ್ಲೈಓವರ್‌ ನಿರ್ಮಾಣದ ಬಗ್ಗೆ ಘೋಷಿಸುವ ನಿರೀಕ್ಷೆ ಇದೆ.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಿಸಿ ಸರ್ಕಾರದಿಂದ ಕ್ರಿಯಾ ಯೋಜನೆ ಅನುಮೋದನೆ ಪಡೆದ ಅಮೃತ್‌ ನಗರೋತ್ಥಾನ ಯೋಜನೆ, ವೈಟ್‌ಟಾಪಿಂಗ್‌ ಹಾಗೂ ರಾಜಕಾಲುವೆ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು .7 ಸಾವಿರ ಕೋಟಿಯನ್ನು ಗುತ್ತಿಗೆದಾರರಿಗೆ ಪಾವತಿ ಮಾಡಬೇಕಿದೆ. ಆ ಮೊತ್ತವನ್ನು ಬಜೆಟ್‌ನಲ್ಲಿ ನೀಡುವಂತೆ ಬಿಬಿಎಂಪಿ ಮನವಿ ಮಾಡಿದೆ. ಸರ್ಕಾರದ ಈ ಬಗ್ಗೆ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡ ಬಿಬಿಎಂಪಿಯ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಬಜೆಟ್‌ನಲ್ಲಿ ಅನುದಾನ ನೀಡುವ ಸಾಧ್ಯತೆ ಇದೆ.

ಹೊಸ 3 ಮೆಟ್ರೋ ಮಾರ್ಗ, ಸಬ್‌ಅರ್ಬನ್‌ ರೈಲಿಗೆ ಹಣ?: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿಗಾಗಿ ಘೋಷಿಸಿದ್ದ ಅಭಿವೃದ್ಧಿ ಯೋಜನೆಯಡಿ ನಮ್ಮ ಮೆಟ್ರೋ ಹಾಲಿ ಯೋಜನೆಗಳಿಗೆ ಒಟ್ಟು .2,500 ಕೋಟಿ ಅನುದಾನ ನೀಡುವುದಾಗಿ ಅವರು ತಿಳಿಸಿದ್ದರು. ಕೆಲ ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಿಎಂಆರ್‌ಸಿಎಲ್‌ ಜೊತೆಗೆ ನಡೆಸಿದ್ದ ಸಭೆಯಲ್ಲಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಹೊಸದಾಗಿ ಮೂರು ಮಾರ್ಗಗಳ ಪ್ರಸ್ತಾವ ಮಾಡಿದ್ದರು.

ಅಧಿಕಾರವಿಲ್ಲದೆ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿರುವ ಎಚ್‌ಡಿಕೆ: ಚಲುವರಾಯಸ್ವಾಮಿ

ಬಿಎಂಆರ್‌ಸಿಎಲ್‌ ಪ್ರಕಾರ, ವೈಟ್‌ಫಿಲ್ಡ್‌ನಿಂದ ಹೊಸಕೋಟೆವರೆಗಿನ 17 ಕಿ.ಮೀ., ಒಳ ವರ್ತುಲ ರಸ್ತೆ ಸಮೀಪ ಒಟ್ಟು 35 ಕಿ.ಮೀ. ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಮಾರತ್ತಹಳ್ಳಿ ಅಂಡರ್‌ಪಾಸ್‌-ಕಾಡುಗೋಡಿವರೆಗೆ ಸುಮಾರು 25 ಕಿ.ಮೀ. ಉದ್ದದ ನೂತನ ಮೂರು ಮೆಟ್ರೋ ಮಾರ್ಗ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳುವ ಉದ್ದೇಶವನ್ನು ನಮ್ಮ ಮೆಟ್ರೋ ಹೊಂದಿದೆ. ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಗಳಿಗೆ ಬಜೆಟ್‌ನಲ್ಲಿ ಅನುದಾನ ಸಿಗುವ ಬಗ್ಗೆ ನಿರೀಕ್ಷೆಯಿದೆ. ಸಬ್‌ಅರ್ಬನ್‌ ರೈಲನ್ನು ಈಗಿನ ನಾಲ್ಕು ಮಾರ್ಗಗಳ ಜೊತೆಗೆ ಬೆಂಗಳೂರು ಸುತ್ತಲಿನ ಜಿಲ್ಲೆಗಳ ನಗರಗಳಿಗೆ ವಿಸ್ತರಿಸುವ ಬಗ್ಗೆ ಈಚೆಗೆ ನಡೆದ ಸಭೆಯಲ್ಲಿ ಕೆ-ರೈಡ್‌ ಅಧಿಕಾರಿಗಳ ವಲಯದಲ್ಲಿ ಚರ್ಚೆಯಾಗಿದೆ. ಸಚಿವ ಎಂ.ಬಿ.ಪಾಟೀಲ್‌ ಕೂಡ ಈ ಬಗ್ಗೆ ಸಲಹೆ ನೀಡಿದ್ದರು. ಹೀಗಾಗಿ ಈ ಮಾರ್ಗಗಳ ಕಾರ್ಯಯೋಜನೆಗೂ ಹೊಸ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಡುವ ಸಾಧ್ಯತೆಗಳಿವೆ.