ಗುರುವಾರ ಮಧ್ಯರಾತ್ರಿ 2.30ರಿಂದ ಶುಕ್ರವಾರ ಮಧ್ಯರಾತ್ರಿ 2.30ರವರೆಗೆ ಕೇವಲ 24 ಗಂಟೆಯಲ್ಲಿ ಬರೋಬ್ಬರಿ ಆರು ಸಾವಿರ ಕೋಟಿ ರು. ಮೊತ್ತದ 1830 ಅಲ್ಪಾವಧಿ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದೆ. ಒಟ್ಟು 15ರಿಂದ 20 ಸಾವಿರ ಕೋಟಿ ರು. ಮೊತ್ತದ ವಿವಿಧ ಟೆಂಡರ್‌ಗಳನ್ನು ಕರೆಯಲಾಗಿದೆ. 

ಬೆಂಗಳೂರು(ಫೆ.26): ರಾಜ್ಯ ಸರ್ಕಾರವು ಕೇವಲ 24 ಗಂಟೆಗಳ ಅಂತರದಲ್ಲಿ ಬರೋಬ್ಬರಿ 1,830 ಟೆಂಡರ್‌ಗಳಿಗೆ ಆಹ್ವಾನ ನೀಡಿ ಕೆಲವೇ ದಿನಗಳ ಕಾಲಾವಕಾಶ ನೀಡಿದೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಗಂಭೀರವಾಗಿ ಆಪಾದಿಸಿದ್ದಾರೆ. ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ತಮ್ಮ ಆರೋಪ ಸಂಬಂಧ 462 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಗುರುವಾರ ಮಧ್ಯರಾತ್ರಿ 2.30ರಿಂದ ಶುಕ್ರವಾರ ಮಧ್ಯರಾತ್ರಿ 2.30ರವರೆಗೆ ಕೇವಲ 24 ಗಂಟೆಯಲ್ಲಿ ಬರೋಬ್ಬರಿ ಆರು ಸಾವಿರ ಕೋಟಿ ರು. ಮೊತ್ತದ 1830 ಅಲ್ಪಾವಧಿ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದೆ. ಒಟ್ಟು 15ರಿಂದ 20 ಸಾವಿರ ಕೋಟಿ ರು. ಮೊತ್ತದ ವಿವಿಧ ಟೆಂಡರ್‌ಗಳನ್ನು ಕರೆಯಲಾಗಿದೆ ಎಂಬ ಮಾಹಿತಿ ಇದೆ. ಪ್ರಸ್ತುತ ನಮಗೆ ಆರು ಸಾವಿರ ಕೋಟಿ ರು. ಮೊತ್ತದ ಟೆಂಡರ್‌ಗಳ ಮಾಹಿತಿ ಮಾತ್ರ ಸಿಕ್ಕಿದೆ. ಕೇವಲ 24 ಕೋಟಿಯಲ್ಲಿ ದಿಢೀರ್‌ ಆಗಿ ಅಲ್ಪಾವಧಿ ಟೆಂಡರ್‌ಗಳನ್ನು ಕರೆಯುವ ಅಗತ್ಯವೇನಿತ್ತು? ಕೆಲವೇ ದಿನಗಳಲ್ಲಿ ಚುನಾವಣೆ ನಡೆಯುವುದರಿಂದ ಈ ಟೆಂಡರ್‌ಗಳ ಹೊರೆ ಮುಂಬರುವ ಸರ್ಕಾರದ ಮೇಲಾಗಲಿದೆ ಎಂದು ತಿಳಿಸಿದರು.

Assembly election: ಕಾಂಗ್ರೆಸ್‌ ಶಾಸಕನ ಸಹೋದರಿ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರ್ನಾಟಕಕ್ಕೆ ಬಂದು ಬಿಜೆಪಿ ಶೇ.100ರಷ್ಟುಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತದೆ ಎಂದಿದ್ದಾರೆ. 40 ಪರ್ಸೆಂಟ್‌ ಆಡಳಿತದ ಬದಲು 100 ಪರ್ಸೆಂಟ್‌ ಆಡಳಿತ ಬರುತ್ತದೆ ಎಂದು ಹೇಳುವ ಬದಲು ಆ ರೀತಿಯಾಗಿ ಹೇಳಿರಬಹುದು. ರಾಜ್ಯಾದ್ಯಂತ ಸೀರೆ, ಕುಕ್ಕರ್‌, ಚಿನ್ನ, ಬೆಳ್ಳಿ, ಟಿವಿ ಮುಂತಾದವುಗಳನ್ನು ಮತದಾರರಿಗೆ ಹಂಚುತ್ತಿರುವುದಕ್ಕೆ ಬಿಜೆಪಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದನ್ನು ಎಎಪಿ ದಾಖಲೆಸಹಿತ ಬಹಿರಂಗಪಡಿಸುತ್ತಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಅಲ್ಪಾವಧಿ ಟೆಂಡರ್‌ಗಳನ್ನು ಕರೆಯಲಾಗುತ್ತದೆ. ಆದರೆ, ಈಗ ಅಂತಹ ಯಾವುದೇ ಸನ್ನಿವೇಶ ಇಲ್ಲದಿದ್ದರೂ ಚುನಾವಣೆಗಾಗಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಟೆಂಡರ್‌ ಕೆರೆಯಲಾಗಿದೆ ಎಂದರು.

ನಗರದ ಸ್ವಾತಂತ್ರ್ಯ ಉದ್ಯಾನವನ ಸೇರಿದಂತೆ ರಾಜ್ಯದ ವಿವಿಧೆಡೆ ಶಿಕ್ಷಕರು, ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿ ಮುಂತಾದವರು ನ್ಯಾಯಯುತವಾಗಿ ಬರಬೇಕಾದ ವೇತನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಬಳಿ ಹಣವಿಲ್ಲವೆಂದು ಅವರಿಗೆಲ್ಲಾ ಸರ್ಕಾರ ಸಬೂಬು ನೀಡುತ್ತಿದೆ. ಆದರೆ, ಗುತ್ತಿಗೆ ಕಾಮಗಾರಿಗಳಿಗೆ ಟೆಂಡರ್‌ ಕರೆಯಲು ಮಾತ್ರ ಸರ್ಕಾರದ ಬಳಿ ಹಣ ಇದೆಯೇ? ಎಲ್ಲೆಲ್ಲಿ ಕಮಿಷನ್‌ ಹೊಡೆಯಲು ಅವಕಾಶವಿದೆಯೋ ಅಲ್ಲಿಗೆ ಮಾತ್ರ ಸರ್ಕಾರ ಖರ್ಚು ಮಾಡಲು ಮುಂದಾಗಿದೆ ಎಂದು ಹೇಳಿದರು.

ಪಕ್ಷದ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಮಾತನಾಡಿ, ಎಲ್ಲಾ ಟೆಂಡರ್‌ಗಳ ಸಲ್ಲಿಕೆಯ ದಿನಾಂಕವು ಮಾ.15ರೊಳಗೆ ಇದೆ. ಬೀದರ್‌ನಿಂದ ಚಾಮರಾಜನಗರದವರೆಗೆ ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳ ಟೆಂಡರ್‌ಗಳು ಇದರಲ್ಲಿವೆ. ಒಂದೇ ಬಾರಿ ಇಷ್ಟುಟೆಂಡರ್‌ ಕರೆದಿರುವುದು ಜಗತ್ತಿನಲ್ಲಿಯೇ ಇದೇ ಮೊದಲಿರಬಹುದು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಟೆಂಡರ್‌ ಗೋಲ್‌ಮಾಲ್‌ ಮಾಡಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಸುರೇಶ್‌ ರಾಥೋಡ್‌, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ ಉಪಸ್ಥಿತರಿದ್ದರು.