ನೀರು ಬಿಟ್ಟ ಕಳ್ಳರು ಸೇರಿ ನಡೆಸಿದ ಸಭೆ ಸರ್ವಪಕ್ಷ ಸಭೆಯಲ್ಲ: ಮುಖ್ಯಮಂತ್ರಿ ಚಂದ್ರು
ನಾಡು, ನುಡಿ, ಗಡಿ, ನೀರಿನ ವಿಚಾರವಾಗಿ ಕನ್ನಡ ಚಿತ್ರರಂಗ, ಕಿರುತೆರೆ, ರಂಗಭೂಮಿ ಕಲಾವಿದರು ಮೊದಲು ಹೋರಾಟಕ್ಕಿಳಿಯಬೇಕಿತ್ತು. ಈ ವಿಚಾರದಲ್ಲಿ ಬೇಜವಾಬ್ದಾರಿ ಪ್ರದರ್ಶಿಸುತ್ತಿರುವುದು ಸರಿಯಲ್ಲ ಎಂದು ಕಾವೇರಿ ಹೋರಾಟಕ್ಕಿಳಿಯದ ಚಿತ್ರರಂಗದವರನ್ನು ತರಾಟೆಗೆ ತೆಗೆದುಕೊಂಡ ನಟ ಮುಖ್ಯಮಂತ್ರಿ ಚಂದ್ರು
ಮಂಡ್ಯ(ಸೆ.03): ಸರ್ವಪಕ್ಷ ಸಭೆ ಅಂದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಾತ್ರನಾ? ನೀರು ಬಿಟ್ಟಕಳ್ಳರೆಲ್ಲರೂ ಒಟ್ಟಿಗೆ ಸೇರಿಕೊಂಡು ಮಾಡುವ ಸಭೆ ಸರ್ವಪಕ್ಷ ಸಭೆಯಾಗಲ್ಲ. ಅದೊಂದು ಕಣ್ಣೊರೆಸುವ ಸಭೆಯಷ್ಟೇ ಎಂದು ನಟ ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವ್ಯಂಗ್ಯವಾಡಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ ಇವರ ಸಭೆಗೆ ರೈತ ಹೋರಾಟಗಾರರು, ಅವರಿಗೆ ಬೆಂಬಲಕೊಟ್ಟ ಸಂಘಟನೆಯವರು ಹಾಗೂ ಸಣ್ಣ ಸಣ್ಣ ಪಕ್ಷಗಳನ್ನು ಆಹ್ವಾನಿಸಬೇಕಿತ್ತು. ಅವರಿಗೆ ನೀರಿನ ಸಮಸ್ಯೆಯ ಸೂಕ್ಷ್ಮತೆಯ ಅರಿವಿತ್ತು. ಅದನ್ನೆಲ್ಲ ಬಿಟ್ಟು ಉದ್ಧಟತನ, ಉದಾಸೀನ ಪ್ರದರ್ಶಿಸಿದ್ದಾರೆ. ಕಳ್ಳರು ಸಭೆ ನಡೆಸಿ ಮತ್ತೆ ಒಳ್ಳೆಯದು, ಅನ್ಯಾಯವಾಗದಂತೆ ನೋಡಿಕೊಳ್ಳೋಣ ಎಂದರೆ ಅದು ದರೋಡೆ ಆಗುತ್ತದೆ ಅಷ್ಟೇ ಎಂದು ಕಿಡಿಕಾರಿದರು.
ಕಾವೇರಿ ಕಿಚ್ಚಿಗೆ ಜೆಡಿಎಸ್ ಸಾಥ್: ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ
ಒಕ್ಕೂಟ ವ್ಯವಸ್ಥೆಯಲ್ಲಿ ಸಮಪಾಲು ಇಲ್ಲ:
ಕಾವೇರಿ ನೀರಿನ ವಿಚಾರದಲ್ಲಿ ತೊಂದರೆ ಇದ್ದದ್ದು ನಮಗೆ. ಹಾಗಾಗಿ ನಾವೇ ಮೊದಲೇ ಅರ್ಜಿ ಹಾಕಬೇಕಿತ್ತು. ಅಧಿಕಾರದ ಅಮಲು, ಸ್ವಾರ್ಥ ರಾಜಕಾರಣಕ್ಕೋಸ್ಕರ ನೀರಿನ ಸೂಕ್ಷ್ಮತೆಯನ್ನೇ ಅರಿಯದ ಕಾಂಗ್ರೆಸ್ ಸರ್ಕಾರ ಧಾರಾಳವಾಗಿ ನೀರು ಹರಿಸುತ್ತಿದೆ. ರೈತರು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಬೆಳೆ ಬೆಳೆಯಲಾಗುತ್ತಿಲ್ಲ. ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಬುಡಕ್ಕೆ ಬೆಂಕಿ ಬಿದ್ದಾದ ಮೇಲೆ ಎದ್ದರೆ ಏನು ಪ್ರಯೋಜನ. ಸರ್ಕಾರದ ಬೇಜವಾಬ್ದಾರಿತನವೇ ಇಂದಿನ ಈ ಸ್ಥಿತಿಗೆ ಕಾರಣ. ಒಕ್ಕೂಟ ವ್ಯವಸ್ಥೆಯಲ್ಲಿ ಸರ್ವರಿಗೆ ಸಮಪಾಲು ಎಂಬುದಿದೆ. ತಾರತಮ್ಯ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಗುಲಾಮಗಿರಿಯಲ್ಲಿ ಬಿಜೆಪಿ ಸಂಸದರು:
ತಮಿಳುನಾಡಿನವರು ಮೂರು ಬೆಳೆಗಾಗುವಷ್ಟು ನೀರನ್ನೂ ಸಂಗ್ರಹಿಸಿಟ್ಟುಕೊಂಡು ಕಾವೇರಿಯಿಂದ ಹೆಚ್ಚಿನ ನೀರನ್ನೂ ಕೇಳುತ್ತಿದ್ದಾರೆ. ಕೇಂದ್ರದ ಮೇಲೆ ರಾಜಕೀಯ ಒತ್ತಡವನ್ನೂ ತರುತ್ತಿದ್ದಾರೆ. ಆದರೆ, ಇಲ್ಲಿನ ಸಂಸದರು ಏನು ಮಾಡುತ್ತಿದ್ದಾರೆ. ಬಿಜೆಪಿಯ 26 ಮಂದಿ ಸಂಸದರು ಗುಲಾಮಗಿರಿಯಲ್ಲಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವಂತೆ ಮನವಿಯನ್ನೂ ಮಾಡುತ್ತಿಲ್ಲ. ನ್ಯಾಯಾಲಯದಿಂದ ಪ್ರಕರಣವನ್ನು ಹೊರಗೆ ತಂದು ಎರಡೂ ಸರ್ಕಾರಗಳೊಂದಿಗೆ ಕುಳಿತು ಚರ್ಚಿಸಿ ತೀರ್ಮಾನ ಮಾಡುವಂತೆ ಒತ್ತಾಯಿಸುತ್ತಲೂ ಇಲ್ಲ. ಅವರೂ ರಾಜಕೀಯ ದೊಂಬರಾಟದಲ್ಲಿ ತೊಡಗಿದ್ದಾರೆ. ಇನ್ನು ಅಧಿಕಾರದಲ್ಲಿರುವವರು ಜನರಿಗೆ, ರೈತರಿಗೆ ತೊಂದರೆಯಾದರೂ ಪರವಾಗಿಲ್ಲ ಕಾಂಗ್ರೆಸ್ ಹೈಕಮಾಂಡ್‌ನ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಚಿತ್ರರಂಗ, ಕಿರುತೆರೆಯವರ ಬೇಜವಾಬ್ದಾರಿತನ
ನಾಡು, ನುಡಿ, ಗಡಿ, ನೀರಿನ ವಿಚಾರವಾಗಿ ಕನ್ನಡ ಚಿತ್ರರಂಗ, ಕಿರುತೆರೆ, ರಂಗಭೂಮಿ ಕಲಾವಿದರು ಮೊದಲು ಹೋರಾಟಕ್ಕಿಳಿಯಬೇಕಿತ್ತು. ಈ ವಿಚಾರದಲ್ಲಿ ಬೇಜವಾಬ್ದಾರಿ ಪ್ರದರ್ಶಿಸುತ್ತಿರುವುದು ಸರಿಯಲ್ಲ ಎಂದು ನಟ ಮುಖ್ಯಮಂತ್ರಿ ಚಂದ್ರು ಕಾವೇರಿ ಹೋರಾಟಕ್ಕಿಳಿಯದ ಚಿತ್ರರಂಗದವರನ್ನು ತರಾಟೆಗೆ ತೆಗೆದುಕೊಂಡರು.
ಸಿನಿಮಾದ ಬಹುತೇಕ ಕಲಾವಿದರು ಜನಪ್ರಿಯರಾಗಿರುವುದು ಸಾರ್ವಜನಿಕರ ತೆರಿಗೆ ಹಣದಿಂದ. ಅದರಿಂದಲೇ ನಾವು ಬದುಕುತ್ತಿದ್ದೇವೆ. ನಮ್ಮ ಕುಟುಂಬ ಚೆನ್ನಾಗಿದೆ, ನಾನು ಚೆನ್ನಾಗಿದ್ದೇನೆ ಎಂದರೆ ಅದಕ್ಕೆ ಜನರೇ ಪ್ರಮುಖ ಕಾರಣರು. ಅವರ ಹಿತಕ್ಕೆ ಧಕ್ಕೆಯಾದಾಗ ಆದ್ಯತೆ ಮೇಲೆ ಅವರೊಂದಿಗೆ ನಿಲ್ಲಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಇಲ್ಲಿನವರೇ ಎಂಪಿಯಾಗಿದ್ದುಕೊಂಡು ಸಿನಿಮಾದಲ್ಲಿದ್ದುಕೊಂಡು ಇದೇ ಜಿಲ್ಲೆಯವರಾಗಿ ಜನರಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಕ್ಕಾಗಿ ಏನೇನೋ ಹೋರಾಟ ಮಾಡುತ್ತಿದ್ದಾರೆಂದರೆ ಬೇರೆಯವರ ಕತೆ ಏನು ಎಂದು ಸಂಸದೆ ಸುಮಲತಾ ಹೆಸರೇಳದೆ ಟೀಕಿಸಿದರು.
ಕಾವೇರಿ ಹೋರಾಟಕ್ಕೆ ಧುಮುಕದ ಕನ್ನಡ ಚಿತ್ರರಂಗ: ರೈತರ ಆಕ್ರೋಶ
ಸಿನಿಮಾದವರು ನಿತ್ಯ ಬಂದು ಹೋರಾಟ ಮಾಡಬೇಕಿಲ್ಲ. ಕನಿಷ್ಠ ಪಕ್ಷ ಬೆಂಬಲವನ್ನಾದರೂ ಸೂಚಿಸಬಹುದಲ್ಲವೇ. ನೀರಿನ ಹೋರಾಟಕ್ಕೆ ಕಲಾವಿದರು, ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಸ್ಪಂದಿಸದಿದ್ದರೆ ಇದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ರಾಜ್ಯದ ಜನರಿಂದ ಅನುಕೂಲ ಪಡೆದುಕೊಂಡು ಅನ್ಯಾಯ ಮಾಡುತ್ತಿದ್ದೀರಿ ಎಂದು ದೂಷಿಸಿದರು.
ಸಿನಿಮಾ, ಕಿರುತೆರೆ, ರಂಗಭೂಮಿ ಕಲಾವಿದರಿಗೆ ನೀರಿಲ್ಲದೆ ರೈತರ ಸಂದಿಗ್ಧ ಪರಿಸ್ಥಿತಿ, ಜನರು ಎದುರಿಸುತ್ತಿರುವ ಸಂಕಷ್ಟ, ಜಾನುವಾರುಗಳು, ನೀರಿನ ಸಮಸ್ಯೆಯ ಅರಿವೇ ಇರುವುದಿಲ್ಲ. ಆ ರೀತಿಯ ಅನುಕೂಲದಲ್ಲಿ ಅವರೆಲ್ಲರೂ ಇದ್ದಾರೆ. ಹಾಗಾಗಿ ಅವರಲ್ಲಿ ಉದಾಸೀನ, ತಾತ್ಸಾರ ಮನೋಭಾವವಿದೆ. ಈಗಲಾದರೂ ಎಚ್ಚೆತ್ತುಕೊಂಡು ಹೋರಾಟಕ್ಕೆ ಧುಮುಕುವಂತೆ ಮನವಿ ಮಾಡಿದರು.