ಅವ ಹೇಳಿದ್ದು ತಿಳೀಲಿಲ್ಲ! ಇವ ಹೇಳಿದ್ದು ನಂಬಂಗಿಲ್ಲ: ಆಸೆಪಟ್ಟವರ ಮೇಲೆ ಹೂ ಬಾಣ
ಭಾಷಣ ಅನ್ನುವುದು ಒಂದು ಕಲೆ. ಅದರಲ್ಲೂ ಅಗ್ರೆಸ್ಸಿವ್ ಭಾಷಣ ಎನ್ನುವುದಂತೂ ಕೋಟಿಗೊಬ್ಬರಿಗೆ ಒಲಿಯುವ ವಿಶೇಷ ಕಲೆ. ಈ ಕಲೆ ಇಲ್ಲದೆಯೇ ಧಮ್ ಇದ್ದರೆ... ತಾಕತ್ ಇದ್ದರೆ... ಎಂದು ಅಬ್ಬರಿಸಿದರೆ ಹೂಂ ಹುಂ... ನೋ ಯೂಸ್!
ಹುಬ್ಬಳ್ಳಿ (ಏ.10): ಭಾಷಣ ಅನ್ನುವುದು ಒಂದು ಕಲೆ. ಅದರಲ್ಲೂ ಅಗ್ರೆಸ್ಸಿವ್ ಭಾಷಣ ಎನ್ನುವುದಂತೂ ಕೋಟಿಗೊಬ್ಬರಿಗೆ ಒಲಿಯುವ ವಿಶೇಷ ಕಲೆ. ಈ ಕಲೆ ಇಲ್ಲದೆಯೇ ಧಮ್ ಇದ್ದರೆ... ತಾಕತ್ ಇದ್ದರೆ... ಎಂದು ಅಬ್ಬರಿಸಿದರೆ ಹೂಂ ಹುಂ... ನೋ ಯೂಸ್! ಇದಕ್ಕೊಂದು ಲೇಟೆಸ್ಟ್ ಉದಾಹರಣೆ ನಮ್ಮ ಹುಬ್ಬಳ್ಳಿಯಲ್ಲಿ ಮೊನ್ನೆ ಸಿಕ್ತು. ಪ್ರಮುಖ ಪಕ್ಷದ ಪ್ರಧಾನ ಹುದ್ದೆಯಲ್ಲಿರುವ ಯುವ ನೇತಾರರೊಬ್ಬರು ಭಾಷಣಕ್ಕೆ ಬಂದಿದ್ದರು. ಬೃಹತ್ ಸಮಾವೇಶದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ನೋಡಿ ಅವರಿಗೆ ಹುಮ್ಮಸ್ಸು ಕಟ್ಟೆಯೊಡೆದು ಬಂದಿತ್ತು. ಇರೋ ಬರೋ ಶಕ್ತಿಯೆನ್ನಲ್ಲ ಧಂ ಕಟ್ಟಿಅಬ್ಬರಿಸುತ್ತಿದ್ದೇನೆ ಎಂದು ಭಾವಿಸಿಕೊಂಡು ಜೋರು ಭಾಷಣ ಮಾಡಿದರು.
ನೆರೆದಿದ್ದ ಜನ ಧಮ್ ಕಟ್ಟಿಯುವ ನೇತಾರ ಕೂಗುವುದನ್ನು ಕುತೂಹಲದಿಂದ ನೋಡಿದರು, ಕೇಳಿದರು. ಆದರೆ, ಅದ್ಯಾಕೋ ಅವರಿಗೆ ಭಾಷಣದ ತಿರುಳು ಅರ್ಥವಾಗಲಿಲ್ಲ. ಆದರೂ, ಯುವ ನೇತಾರ ಧಮ್ ಕಟ್ಟಿದ ಶೈಲಿಗೆ ಶಭಾಶ್‌ಗಿರಿ ಕೊಟ್ಟಸಭಿಕನೊಬ್ಬ, ಮಸ್ತ್ ಮಾತಾಡಕತ್ತಾನ್‌ರೀ... ಆದ್ರ ಅವ ಹೇಳಿದ್ದ ಏನಾರ ನಿಮಗ ತಿಳೀತಾ ಎಂದು ಪಕ್ಕದಲ್ಲಿದ್ದವರನ್ನು ಕೇಳಿದ. ಪಕ್ಕದಲ್ಲಿದ್ದಾತ ಹುಂ. ತಿಳೀತು... ಆದ್ರ ನನಗ ಏನ್ ತಿಳಿತೋ ಅದನ್ನ ಅವ ಹೇಳಿದ್ನಾ ಅಥವಾ ಬೇರೆ ಏನಾರ ಹೇಳಕತ್ತಾನ ಅನ್ನೋದು ತಿಳೀತಿಲ್ಲ ನೋಡಪ್ಪ ಎಂದುಬಿಡುವುದೇ. ಖರೇ ಬಿಡು ದೋಸ್ತ. ನನಗೂ ಪೂರ ತಿಳೀಲಿಲ್ಲ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟ?: ಅಭ್ಯರ್ಥಿ ಅಂತಿಮಗೊಳಿಸಲು ಮೋದಿ 2 ಗಂಟೆ ಕಸರತ್ತು
ಯಾರಾದರೂ ಭಾಷಾಂತರ ಮಾಡಿದ್ರ ಚಲೋ ಇತ್ತು ಎಂದು ಸಭಿಕ ಮಾರುತ್ತರಿಸಿದಾಗ ಇಬ್ಬರೂ ನಗತೊಡಗಿದರು. ಈ ನಗು ವೇದಿಕೆಯಲ್ಲಿದ್ದ ಹಿರಿಯ ನಾಯಕರೊಬ್ಬರಿಗೆ ಕಂಡಿತು ಅಂತ ಕಾಣುತ್ತದೆ. ಆ ಸಾಹೇಬರು ಭಾಷಣದ ತಮ್ಮ ಸರದಿ ಬಂದಾಗ ಅಬ್ಬರಿಸಿ, ಬೊಬ್ಬಿಡುವ ಭಾಷಣ ಶೈಲಿ ಅನುಕರಿಸದೆ ಸರಾಗ ಹರಿಯೋ ನದಿಯಂತೆ ಮಾತನಾಡಿದರು. ಇದ ಕೇಳಿದ ಸಭಿಕರು, ಇವ ಹೇಳಿದ್ದು ಅರ್ಥ ಆಯ್ತು ನೋಡ್ರಿ. ಆದ್ರ, ಈತ ಹೇಳಿದ್ದೆಲ್ಲ ಖರೇ ಅಂತ ನಂಬಿಕೆ ಬರುವಲ್ದು... ಎಂದು ಬಿಡುವುದೇ!
ಆಸೆಪಟ್ಟವರ ಮೇಲೆ ಹೂ ಬಾಣ!
ಮಂಗಳೂರು: ಆಸೆ ಯಾರನ್ನೂ ಬಿಟ್ಟಿಲ್ಲ. ರಾಜಕಾರಣಿಗಳಂತೂ ಆಸೆ, ಪಾಸೆ, ದುರಾಸೆಯಂತಹ ಎಲ್ಲ ಗಡಿಗಳನ್ನು ದಾಟಿಬಿಟ್ಟಿರುತ್ತಾರೆ. ರಾಜಕಾರಣಿಗಳಿಗೆ ಇರುವುದು ಒಂದೇ ತವಕ. ಅದು ತಾವಿರುವ ತನಕ ಸೀಟಿನ ಮೇಲೆ ವಿರಾಜಮಾನವಾಗಿರಬೇಕು ಎಂಬುದು. ಈ ಆಸೆ ಈಡೇರಬೇಕು ಎಂದರೆ ಬರೇ ಅಭಿವೃದ್ಧಿ ಕೆಲಸ ಮಾಡಿದರೆ ಸಾಲದು, ಜನಸಂಪರ್ಕವೂ ಬೇಕು. ಕಾರ್ಯಕರ್ತರೊಂದಿಗೆ ಸಂಬಂಧವೂ ಬೇಕು. ಬಹುತೇಕ ರಾಜಕಾರಣಿಗಳು ಇದರಲ್ಲಿ ಸಿದ್ಧಹಸ್ತರಾಗಿರುತ್ತಾರೆ. ಆದರೆ, ಕೆಲ ರಾಜಕಾರಣಿಗಳಿಗೆ ನಾನು ಏನೇ ಮಾಡಿದರೂ ನನಗೇ ಟಿಕೆಟ್ ಸಿಗೋದು. ನಾನೇ ಗೆಲ್ಲೋದು ಅಂತ ಅತಿ ಆತ್ಮವಿಶ್ವಾಸ ಇರುತ್ತದೆ.
ಹೀಗಾದಾಗಲೇ ಸಮಸ್ಯೆ ಹುಟ್ಟಿಕೊಳ್ಳೋದು. ದಕ್ಷಿಣ ಕನ್ನಡ ಜನಪ್ರತಿನಿಧಿಯೊಬ್ಬರಿಗೆ ಈ ಅನುಭವ ಆಗಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಸ್ಪರ್ಧೆಗೆ ಬಹಳ ಉತ್ಸಾಹದಲ್ಲಿದ್ದರು. ಅಲ್ಲಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರು. ಆದರೆ, ಕಾರ್ಯಕರ್ತರನ್ನು ಹತ್ತಿರ ಸುಳಿಯಲು ಬಿಡಲಿಲ್ಲ. ಕಾರ್ಯಕರ್ತರೂ ಚುನಾವಣೆ ಬಂದಾಗ ಪಾಠ ಕಲಿಸುತ್ತೇವೆ ಎಂದು ಒಳಗೊಳಗೇ ಹಲ್ಲು ಮಸೆಯುತ್ತಾ ಸಮಯ ಕಾಯುತ್ತಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಜಾಲತಾಣಗಳಲ್ಲಿ ತಮ್ಮದೇ ಪ್ರತ್ಯೇಕ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಕಾರ್ಯಕರ್ತರು ಅಭಿಯಾನ ಶುರು ಮಾಡಿದರು.
ಆದರೆ, ಅದೇನೂ ಅಷ್ಟುಎಫೆಕ್ಟಿವ್ ಆಗಲಿಲ್ಲ. ಹೀಗಾಗಿ ಜನಪ್ರತಿನಿಧಿಯು ತಲೆ ಕೆಡಿಸಿಕೊಳ್ಳಲಿಲ್ಲ. ಅದೇ ಆಗಿದ್ದು ಎಡವಟ್ಟು. ಏನಾಯ್ತು ಎಂದರೆ, ಸಾಹೇಬರಿಗೆ ಟಿಕೆಟ್ ಸಿಕ್ಕೇ ಬಿಡ್ತು ಎನ್ನುವಾಗ, ಜಾಲತಾಣಗಳಲ್ಲಿ ಲಲ್ಲೆಗರೆಯುವ ‘ಹೂ ಬಾಣ’ದ ಫೋಟೋಗಳು ಹರಿದಾಟಿಬಿಟ್ಟವು. ಅದು ನೇರವಾಗಿ ತಗಲಿದ್ದು ಜನಪ್ರತಿನಿಧಿಯ ಚಾರಿತ್ರ್ಯಕ್ಕೆ. ಜನಪ್ರತಿನಿಧಿಗಳ ಚಾರಿತ್ರ್ಯ ಕೆಡಿಸಿದರೆ ಮತ್ತೆ ಟಿಕೆಟ್ ಸಿಗುವುದು ಸುಲಭವಲ್ಲ ಎಂಬುದು ತಂತ್ರಗಾರರಿಗೂ ಗೊತ್ತಿದೆ. ಈ ತಂತ್ರ ಹಾಲಿ ಜನಪ್ರತಿನಿಧಿಯೊಬ್ಬರಿಗೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಾ ಅನ್ನೋದು ಇನ್ನು ಕೆಲ ಕಾಲದಲ್ಲೇ ಗೊತ್ತಾಗಲಿದೆ.
ಬಳ್ಳಾರಿಯಲ್ಲಿ ಕುಬೇರನ ಎಲೆಕ್ಷನ್
ಬಳ್ಳಾರಿ: ಗಣಿನಾಡಿನ ಖ್ಯಾತಿಯ ಬಳ್ಳಾರಿಯಲ್ಲಿ ಚುನಾವಣೆ ಬಂತೆಂದರೆ ಭಾರೀ ಹಣದ ಹೊಳೆ ಹರಿಯುತ್ತದೆ ಎಂಬುದು ಕನ್ನಡ ನಾಡಿಗೇ ಗೊತ್ತು. ಈ ಬಾರಿಯೂ ತುಂಗಭದ್ರಾ ಜಲಾಶಯ ತುಂಬಿ ಕಾಲುವೆಗಳಿಗೆ ಭರ್ತಿ ನೀರು ಬಿಟ್ಟಂತೆ ಮತದಾರರ ಮನೆಯ ಕಡೆ ಹಣದ ಹೊಳೆಯೇ ಹರಿದುಬಿಡುತ್ತದೆ ಎಂಬ ನಂಬಿಕೆ ಕ್ಷೇತ್ರದಲ್ಲಿದೆ. ಏಕೆಂದರೆ, ಈ ಬಾರಿ ಬಳ್ಳಾರಿಯಿಂದ ಎಂಎಲ್‌ಎ ಆಗಿಯೇ ಬಿಡೋಣ ಎಂದು ಕಾಂಗ್ರೆಸ್, ಬಿಜೆಪಿ ಹಾಗೂ ಕೆಆರ್‌ಪಿಪಿಯಿಂದ ಸ್ಪರ್ಧಿಸಲು ಬಂದವರು ಅಂತಿಂಥ ಮಂದಿಯಲ್ಲ. ಎಲ್ಲ ಕುಬೇರನ ವಂಶಸ್ಥರು. ಚುನಾವಣೆಗಂತಾನೇ ನೂರಾರು ಕೋಟಿ ಹಣ ತೆಗೆದಿಟ್ಟುಕೊಂಡಿರುವ ಲಕ್ಷ್ಮೇಪುತ್ರರು. ಮೂರು ಪಕ್ಷದೋರು ಸೇರಿ ಐನೂರು ಕೋಟಿ ಖರ್ಚು ಮಾಡಲು ತಯಾರಿದ್ದಾರೆ ಎಂಬುದು ಕ್ಷೇತ್ರದ ಜನರಾಡಿಕೊಳ್ಳುವ ಮಾತು.
ಕುಸ್ತಿಗೆ ಕರೆದ ಸಿಎಂ ಬೊಮ್ಮಾಯಿಯನ್ನು ಸೋಲಿಸ್ತೇವೆ: ಕಾಂಗ್ರೆಸ್ಸಿಗರ ಶಪಥ
ಕುಕ್ಕರ್ ಸೀರೆ... ಎಲ್ಲ ಈಗಾಗಲೇ ಮುಗಿದು ಹೋಗಿದೆ. ಇನ್ನೇನಿದ್ದರೂ ಗರಿ ಗರಿ ನೋಟುಗಳದ್ದೆ ಚರ್ಚೆ. ಈ ಬಾರಿ ಕನಿಷ್ಠ .5ರಿಂದ 6 ಸಾವಿರ ನಗದು ನೇರವಾಗಿ ಕೈಸೇರುತ್ತದೆ ಎಂಬ ಲೆಕ್ಕಾಚಾರ ನಡೆದಿದೆ. ಹೀಗಾಗಿ ಬಳ್ಳಾರಿಯಲ್ಲೇ ನೆಲೆಸಿದ್ದರೂ ಇನ್ನೂ ತಮ್ಮ ಹಳ್ಳಿಗಳಲ್ಲೇ ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರು ಬದಲಾಯಿಸದ ಮಂದಿ ಈಗ ಕಡೆ ಕ್ಷಣದಲ್ಲಿ ತಮ್ಮ ಮತದಾರರ ಚೀಟಿಯನ್ನು ಬಳ್ಳಾರಿಗೆ ವರ್ಗಾಯಿಸಿಕೊಳ್ಳಲು ಮುಗಿ ಬಿದ್ದಿದ್ದಾರಂತೆ! ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
- ಶಿವಾನಂದ ಗೊಂಬಿ
- ಆತ್ಮಭೂಷಣ್
- ಕೆ.ಎಂ.ಮಂಜುನಾಥ್