ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ್‌ ಶೆಟ್ಟರ್‌ ಸೇರಿದಂತೆ ಘಟಾನುಘಟಿಗಳು ಉಮೇದುವಾರಿಕೆ ಸಲ್ಲಿಸಿದರು. ಶಿಗ್ಗಾವಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೃಹತ್‌ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ಬೆಂಗಳೂರು(ಏ.20):  ಜಿದ್ದಾಜಿದ್ದಿನ ಅಖಾಡವಾಗಿರುವ ಚುನಾವಣಾ ಕಣದಲ್ಲಿ ಭರ್ಜರಿಯಾಗಿ ನಾಮಪತ್ರಗಳು ಸಲ್ಲಿಕೆಯಾಗುತ್ತಿದ್ದು, ಉಮೇದುವಾರಿಕೆ ಸಲ್ಲಿಕೆಯ ಕೊನೆಯ ದಿನಕ್ಕೂ ಮುನ್ನ 935 ಅಭ್ಯರ್ಥಿಗಳು 1110 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.

ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ್‌ ಶೆಟ್ಟರ್‌ ಸೇರಿದಂತೆ ಘಟಾನುಘಟಿಗಳು ಉಮೇದುವಾರಿಕೆ ಸಲ್ಲಿಸಿದರು. ಶಿಗ್ಗಾವಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೃಹತ್‌ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಟಿಕೆಟ್‌ ಸಿಗದ ಕಾರಣಕ್ಕೆ ಬೇಸರಗೊಂಡು ಬಿಜೆಪಿ ತೊರೆದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹುಬ್ಬಳ್ಳಿ ಕೇಂದ್ರದಿಂದ ನಾಮಪತ್ರ ಸಲ್ಲಿಸಿದರು. ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಸತಿ ಸಚಿವ ವಿ.ಸೋಮಣ್ಣ, ಶಿಕಾರಿಪುರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಕೆ ಮಾಡಿದರು.

ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಶಕ್ತಿ ಪ್ರದರ್ಶನ, ವರುಣಾದಲ್ಲಿ ಸಿದ್ದು ಅದ್ದೂರಿ ಕಾರ್ಯಕ್ರಮ!

ಇನ್ನುಳಿದಂತೆ ಬಿಜೆಪಿಯಿಂದ ಸಚಿವರಾದ ಸಿ.ಸಿ.ಪಾಟೀಲ್‌, ಹಾಲಪ್ಪ ಆಚಾರ್‌, ಸುನಿಲ್‌ಕುಮಾರ್‌, ಬಾಲಚಂದ್ರ ಜಾರಕಿಹೊಳಿ, ಎಸ್‌.ಆರ್‌.ವಿಶ್ವನಾಥ್‌, ಸಚಿವ ಆನಂದ್‌ ಸಿಂಗ್‌ ಪುತ್ರ ಸಿದ್ಧಾರ್ಥ ಸಿಂಗ್‌, ಅರುಣ್‌ ಕುಮಾರ್‌ ಗುಟ್ಟೂರು, ಮಂಜುನಾಥ್‌ಗೌಡ, ಕಾಂಗ್ರೆಸ್‌ನಿಂದ ಡಾ.ಜಿ. ಪರಮೇಶ್ವರ್‌, ರಹೀಂಖಾನ್‌, ರಘುನಾಥ್‌ ನಾಯ್ಡು, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೃಷ್ಣಯ್ಯ ಶೆಟ್ಟಿ, ಹಂಸ ರವಿಕುಮಾರ್‌, ಜೆಡಿಎಸ್‌ನಿಂದ ರಘು ಆಚಾರ್‌, ಎಎಪಿಯಿಂದ ಬ್ರಿಜೇಶ್‌ ಕಾಳಪ್ಪ, ಕೆ.ಮಥಾಯಿ ಸೇರಿದಂತೆ ಇತರರು ಉಮೇದುವಾರಿಕೆ ಸಲ್ಲಿಸಿದರು.

ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುವ ಹಿನ್ನೆಲೆಯಲ್ಲಿ ಉಳಿದೆಲ್ಲಾ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಕೆ ಮಾಡಲಿದ್ದಾರೆ. ಚುನಾವಣೆ ಕಚೇರಿಯೂ ಭರ್ತಿಯಾಗುವ ಸಾಧ್ಯತೆ ಇದೆ. ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ. ಮೂರು ಗಂಟೆಯೊಳಗೆ ಚುನಾವಣಾಧಿಕಾರಿಗಳ ಕಚೇರಿಯೊಳಗೆ ಇರಬೇಕು. ಅಂತಹವರಿಗೆ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ನಂತರ ಬರುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇರುವುದಿಲ್ಲ.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ಕಾರ್ಯಕರ್ತರು, ಬೆಂಬಲಿಗರ ಜತೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಹಲವು ಅಭ್ಯರ್ಥಿಗಳು 2-3 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸೇರಿದಂತೆ ಒಟ್ಟು ಐವರಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಲು ಅವಕಾಶ ಇದೆ. 100 ಮೀಟರ್‌ ವ್ಯಾಪ್ತಿಯಲ್ಲಿ ಮೂರು ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.