ರಾಜ್ಯದಲ್ಲಿ ಅಡ್ಡಮತದಾನ ಇದೇ ಮೊದಲಲ್ಲ. ಈ ಹಿಂದೆ 2016ರಲ್ಲಿ ಜೆಡಿಎಸ್‌ನ ಎಂಟು ಶಾಸಕರು ಅಂದಿನ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡಮತ ಚಲಾಯಿಸಿ ಯಾವುದೇ ಸಂಕಷ್ಟಕ್ಕೆ ಸಿಲುಕದೇ ಪಾರಾಗಿದ್ದನ್ನು ಗಮನಿಸಬೇಕು.
ಬೆಂಗಳೂರು(ಫೆ.28): ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡ ಮತದಾನ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಅಡ್ಡಮತದಾನ ಇದೇ ಮೊದಲಲ್ಲ. ಈ ಹಿಂದೆ 2016ರಲ್ಲಿ ಜೆಡಿಎಸ್‌ನ ಎಂಟು ಶಾಸಕರು ಅಂದಿನ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡಮತ ಚಲಾಯಿಸಿ ಯಾವುದೇ ಸಂಕಷ್ಟಕ್ಕೆ ಸಿಲುಕದೇ ಪಾರಾಗಿದ್ದನ್ನು ಗಮನಿಸಬೇಕು.
ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರಿಗೆ ಮತ ಹಾಕುವಂತೆ ಜೆಡಿಎಸ್ ವಿಪ್ ಜಾರಿ ಮಾಡಿತ್ತು. ಇದನ್ನು ಲೆಕ್ಕಿಸದೇ ಆಗ ಜೆಡಿಎಸ್ ಶಾಸಕರಾಗಿದ್ದ ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಕೆ.ಗೋಪಾಲಯ್ಯ, ಇಕ್ಬಾಲ್ ಅನ್ಸಾರಿ, ಎಚ್.ಸಿ.ಬಾಲಕೃಷ್ಣ ಹಾಗೂ ಭೀಮಾ ನಾಯಕ್ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು.
ಈ ವೇಳೆ ಈ ಬಂಡಾಯ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಇವರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ಅಂದಿನ ಜೆಡಿಎಸ್ ಶಾಸಕರಾದ ಬಿ.ಬಿ.ನಿಂಗಯ್ಯ ಮತ್ತು ಸಿ.ಎನ್.ಬಾಲಕೃಷ್ಣ ಅವರು ವಿಧಾನಸಭೆಯ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ದೂರು ನೀಡಿದ್ದರು. ಈ ದೂರು ಅರ್ಜಿ ವಿಚಾರಣೆ ಮಾಡಿದ ಸ್ಪೀಕರ್, ಶಾಸಕರಿಬ್ಬರಿಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು. ಬಳಿಕ ಇಬ್ಬರು ಶಾಸಕರು ಸ್ಪೀಕರ್‌ಗೆ ವಿವರಣೆ ನೀಡಿದ್ದರು.
ಸುಮಾರು ಎರಡು ವರ್ಷಗಳ ಕಾಲ ಈ ಶಾಸಕರ ಅನರ್ಹತೆ ಅರ್ಜಿ ಸಂಬಂಧ ಯಾವುದೇ ಕ್ರಮ ಆಗಲಿಲ್ಲ. ಈ ನಡುವೆ 2018ರ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ವಿಧಾನಸಭೆ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಶಾಸಕರ ಅನರ್ಹತೆ ಅರ್ಜಿಗೆ ಸಾಂವಿಧಾನಿಕ ಮೌಲ್ಯವಿಲ್ಲ ಎಂದು ಸ್ಪೀಕರ್ ಕೋಳಿವಾಡ ಆ ಅರ್ಜಿಯನ್ನು ವಜಾಗೊಳಿಸಿದರು. ಬಳಿಕ ಆ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಚುನಾವಣೆಗೆ ಸ್ಪರ್ಧಿಸಿದರು.
