ಹಾಲಿ ಶಾಸಕರಾಗಿರುವ ಈ 8 ಜನರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಅದರ ಬೆನ್ನಲ್ಲೇ ಅವರೆಲ್ಲಾ ಇದೀಗ ರಾಜೀನಾಮೆ ಪ್ರಕಟಿಸಿದ್ದಾರೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆ.5ರಂದು ಚುನಾವಣೆ ನಡೆಯಲಿದ್ದು, ಫೆ.8ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 

ನವದೆಹಲಿ(ಫೆ.01): ದೆಹಲಿ ವಿಧಾನಸಭೆ ಚುನಾವಣೆಗೆ ಕೇವಲ 5 ದಿನ ಬಾಕಿ ಇರುವ ಹೊತ್ತಿನಲ್ಲಿಯೇ ಆಡಳಿತಾರೂಢ ಆಮ್ ಆತ್ಮ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿ 8 ಶಾಸಕರು ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಹಾಲಿ ಶಾಸಕರಾಗಿರುವ ಈ 8 ಜನರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಅದರ ಬೆನ್ನಲ್ಲೇ ಅವರೆಲ್ಲಾ ಇದೀಗ ರಾಜೀನಾಮೆ ಪ್ರಕಟಿಸಿದ್ದಾರೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆ.5ರಂದು ಚುನಾವಣೆ ನಡೆಯಲಿದ್ದು, ಫೆ.8ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಕೇಜ್ರಿ ವಿಷಯುದ್ಧ: ಯಮುನೆಗೆ ಪಾಯ್ಸನ್‌ ಆರೋಪಕ್ಕೆ ನಿರ್ದಿಷ್ಟ ಉತ್ತರ ಕೊಡಿ, ಚುನಾವಣಾ ಆಯೋಗ

ನಂಬಿಕೆ ಇಲ್ಲ: 

ಪಕ್ಷದಲ್ಲಿ ಮಲತಾಯಿ ಧೋರಣೆ ಹೆಚ್ಚಾಗಿದೆ. ವರ್ಷಾನುವರ್ಷದಿಂದ ಪಕ್ಷಕ್ಕಾಗಿ ನಿಯತ್ತಿನಿಂದ ದುಡಿದವರನ್ನು ಕಡೆಗಣಿಸಲಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಧೈಯದೊಂದಿಗೆ ಅಧಿಕಾರಕ್ಕೆ ಬಂದ ಆಪ್, ಈಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವದಲ್ಲಿ ವಿಶ್ವಾಸ ಹೋಗಿದೆ. ಶೀಘ್ರವಾಗಿ ನಮ್ಮ ಮುಂದಿನ ನಿರ್ಧಾರವನ್ನು ತಿಳಿಸಲಿದ್ದೇವೆ ಎಂದು ಶಾಸಕರು ಹೇಳಿದ್ದಾರೆ.

ಆಪ್ ಕಿಡಿ

8 ಶಾಸಕರು ರಾಜೀನಾಮೆ ಸಲ್ಲಿಸಿರುವ ಬಗ್ಗೆ ಆಪ್ ವಕ್ತಾರೆ ರೀನಾ ಗುಪ್ತಾ ಕಿಡಿಕಾರಿದ್ದು, ನಮ್ಮ ಆಂತರಿಕ ಸಮೀಕ್ಷೆಯಲ್ಲಿ ಈ ಶಾಸಕರ ವಿರುದ್ಧ ಜನರ ಅಸಮಾಧಾನ ಹೆಚ್ಚಿತ್ತು. ಹೀಗಾಗಿ ಇವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ ಇವರು ರಾಜೀನಾಮೆ ಕೊಟ್ಟು ಬೇರೆ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ. 

ರಾಜೀನಾಮೆ ನೀಡಿದವರು: 

ಮೆಹೌಲಿಯ ನರೇಶ್ ಯಾದವ್, ತ್ರಿಲೋಕಪುರಿಯ ರೋಹಿತ್ ಕುಮಾರ್, ಜನಕ್‌ಪುರಿ ಶಾಸಕ ರಾಜೇಶ್ ರಿಷಿ, ಕಸ್ತೂರಬಾ ನಗರದ ಮದನ್ ಲಾಲ್, ಆದರ್ಶನ ನಗರ ಶಾಸಕ ಪವನ್ ಶರ್ಮಾ, ಪಲಂನ ಶಾಸಕಿ ಭಾವನಾ ಗೌರ್ ಮತ್ತು ಬಿಜ್ವಾಸನ್‌ನ ಬಿ.ಎಸ್. ಜೂನ್ ರಾಜೀನಾಮೆ ಸಲ್ಲಿಸಿದ ಶಾಸಕರು.

ವಿಷ ಎಂದಿದ್ದು ಅಮೋನಿಯಕ್ಕೆ: ಚು.ಆಯೋಗಕ್ಕೆ ಕೇಜಿ ಉತ್ತರ

ನವದೆಹಲಿ: ದೆಹಲಿಯತ್ತ ಹರಿಯುವ ಯಮುನಾ ನದಿಗೆ ಹರ್ಯಾಣದ ಬಿಜೆಪಿ ಸರ್ಕಾರ ವಿಷ ಬೆರೆಸಿ ನರಮೇಧ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ 2ನೇ ನೋಟಿಸ್‌ಗೆ ಸ್ವತಃ ಆಯೋಗದ ಕಚೇರಿಗೆ ತೆರಳಿ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಉತ್ತರ ನೀಡಿದ್ದಾರೆ.

ಕೇಜ್ರಿವಾಲ್‌ ವಿಷ ಯುದ್ಧ, ನಾನು ಕುಡಿವ ನೀರಿಗೆ ಬಿಜೆಪಿಗರು ಪಾಯ್ಸನ್‌ ಹಾಕ್ತಾರಾ?: ಮೋದಿ

ಅದರಲ್ಲಿ 'ನಾನು ವಿಷ ಎಂದದ್ದು ನೀರಿನಲ್ಲಿರುವ ಅಮೋನಿ ಯಾಕ್ಕೆ. ಫೆ.5ರಂದು ನಡೆಯಲಿರುವ ದೆಹಲಿ ಚುನಾವಣೆಯ ಮೇಲೆ ಪ್ರಭಾವ ಬೀರಲು ಹರ್ಯಾಣ ಸಿಎಂ ನಯಾಬ್ ಸಿಂಗ್ ಸೈನಿ ಯಮುನಾ ನದಿಗೆ ಅಮೋನಿಯಾ ಬೆರೆಸುವ ಮೂಲಕ ಸಾಮೂಹಿಕ ನರಮೇಧದ ಆರೋಪವನ್ನು ಆಪ್‌ನ ಮೇಲೆ ಹೊರಿಸುವ ಸಂಚು ರೂಪಿಸಿದ್ದರು' ಎಂದು ಅರವಿಂದ್ ಕೇಜ್ರಿವಾಲ್ ತಾವು ಸಲ್ಲಿಸಿದ 6 ಪುಟಗಳ ದೂರಿನಲ್ಲಿ ಆರೋಪಿಸಿದ್ದಾರೆ. 

ಕೇಜ್ರಿವಾಲ್‌ಗೆ ಸಿಎಂ ಆತಿಶಿ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಸಾಥ್ ನೀಡಿದ್ದು, ಈ ವೇಳೆ ಅಮೋನಿಯಾ ಬೆರೆತ ನೀರಿನ 6 ಬಾಟಲಿಗಳನ್ನೂ ಕೊಂಡೊಯ್ದಿದ್ದರು. ಈ ವೇಳೆ ಮಾತನಾಡಿದ ಆಪ್‌ ಸಂಸದ ಸಂಜಯ್ ಸಿಂಗ್, 'ಬಿಜೆಪಿಗರು ಮಾಡಿರುವ ಸಂಚು ಎಂದು ಕಿಡಿಕಾರಿದ್ದಾರೆ.