Asianet Suvarna News Asianet Suvarna News

6 ಕೋಟಿ ಅಕ್ರಮ ಹಣದ ಆರೋಪಿಗೆ ಅದ್ಧೂರಿ ಮೆರವಣಿಗೆ ಬೇಕೇ.?: ಮಾಡಾಳ್ ವಿರುಪಾಕ್ಷಪ್ಪನಿಂದ ಬಿಜೆಪಿಗೆ ಮುಜುಗರ

ಲೋಕಾಯುಕ್ತ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಹೈಕೋರ್ಟ್‌ ಜಾಮೀನು ಸಿಕ್ಕಿದ ಕೆಲವೇ ನಿಮಿಷಗಳಲ್ಲಿ ಜನರ ಮುಂದೆ ಸ್ವಕ್ಷೇತ್ರದಲ್ಲಿ ಪತ್ತೆಯಾಗಿದ್ದಾರೆ. ಅದ್ಧೂರಿ ಮೆರವಣಿಗೆ ಮಾಡಿಸಿಕೊಂಡು ಮನೆಗೆ ಹೋಗಿದ್ದು, ಬಿಜೆಪಿಗೆ ಭಾರಿ ಮುಜುಗರ ಉಂಟಾಗಿದೆ.

6 crore illegal money accused Modal Virupakshappa needs a grand procession Embarrassment to BJP sat
Author
First Published Mar 7, 2023, 4:39 PM IST

ದಾವಣಗೆರೆ (ಮಾ.07): ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಂಡು 6 ದಿನಗಳ ಕಾಲ ಅವಿತು ಕುಳಿತಿದ್ದ ಕೆಎಸ್‌ಡಿಎಲ್‌ ಅಧ್ಯಕ್ಷ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಹೈಕೋರ್ಟ್‌ ಜಾಮೀನು ಸಿಕ್ಕ ಕೆಲವೇ ನಿಮಿಷಗಳಲ್ಲಿ ಜನರ ಮುಂದೆ ಪ್ರತ್ಯಕ್ಷವಾಗಿದ್ದಾರೆ. ತನಗೆ 74 ವರ್ಷವಾಗಿದ್ದು, ಹೃದಯ ಸಂಬಂಧಿ ಕಾಯಿಲೆಯಿದೆ ಎಂದು ಜಾಮೀನು ಪಡೆದ ಶಾಸಕರ ಆರೋಗ್ಯ ಮೆರವಣಿಗೆ ವೇಳೆಗೆ ಸರಿ ಹೋಗುತ್ತೇ.? ಇದರಿಂದ ಬಿಜೆಪಿಗೆ ಮುಜುಗರ ಆಗಲಿಲ್ಲವೇ.?

ಕಳೆದ ಆರು ದಿನಗಳ ಹಿಂದೆ ಲೋಕಾಯುಕ್ತ ದಾಳಿಯ ವೇಳೆ 6 ಕೋಟಿ ರೂ. ದಾಖಲೆಯಿಲ್ಲದ ಹಣ ಸಿಕ್ಕಿದ ಕೂಡಲೇ ಬಂಧನದಿಂದ ತಪ್ಪಿಸಿಕೊಳ್ಳಲು ಸ್ವಕ್ಷೇತ್ರ ಚನ್ನಗಿರಿಯಲ್ಲೇ ಆರು ದಿನಗಳ ಕಾಲ ಅವಿತು ಕುಳಿತಿದ್ದ ಕೆಎಸ್‌ಡಿಎಲ್‌ ಅಧ್ಯಕ್ಷ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಇಂದು ಪ್ರತ್ಯಕ್ಷವಾಗಿದ್ದಾರೆ. ತನಗೆ 74 ವರ್ಷವಾಗಿದ್ದು, ಹೃದಯ ಸಂಬಂಧಿ ಕಾಯಿಲೆಯಿದೆ ಎಂದು ನೆಪವೊಡ್ಡಿ ಜಾಮೀನು ಪಡೆದವರು ಶಾಸಕ ಕಾರ್ಯಕರ್ತರ ಅದ್ಧೂರಿ ಮೆರವಣಿಗೆ ಮೂಲಕ ಮನೆಗೆ ಆಗಮಿಸುತ್ತಿರುವಾಗ ಅನಾರೋಗ್ಯ ಸರಿ ಹೋಗಿದೆಯೇ.? ಎಂಬುದು ರಾಜ್ಯದ ಜನತೆಯ ಯಕ್ಷ ಪ್ರಶ್ನೆಯಾಗಿದೆ.

ಹೈಕೋರ್ಟ್‌ ಜಾಮೀನು ಬೆನ್ನಲ್ಲೇ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಪ್ರತ್ಯಕ್ಷ: ಅದ್ಧೂರಿ ಸ್ವಾಗತ

ಶಾಸಕರ ಅಜ್ಞಾತ ಸ್ಥಳ ಎಲ್ಲಿದೆ? : ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಬೆಂಗಳೂರಿನ ಖಾಸಗಿ ಕಚೇರಿ ಎಂ.ಸ್ಟೂಡಿಯೋದಲ್ಲಿ ಶಾಸಕರ ಪುತ್ರ ಪ್ರಶಾಂತ್‌ ಮಾಡಾಳ್‌ 40 ಲಕ್ಷ ರೂ. ಹಣ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದರು. ಇನ್ನು ಈ ಹಣ ಕೆಎಸ್‌ಡಿಎಲ್‌ನ ಟೆಂಡರ್‌ ಹಂಚಿಕೆಯ ಕುರಿತಾದ ಲಂಚದ ಹಣವೆಂದು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಎ.1 ಆರೋಪಿಯಾಗಿ ಅದರ ಅಧ್ಯಕ್ಷ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರನ್ನು ಬಂಧಿಸಲು ವಾರೆಂಟ್‌ ಸಿದ್ಧಗೊಳಿಸಲಾಗಿತ್ತು. ಆದರೆ, ಅವರು ಆರು ದಿನಗಳ ಕಾಲ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಆದರೆ, ಇಂದು ಜಾಮೀನು ಸಿಕ್ಕಿದ ಬೆನ್ನಲ್ಲೇ ಕೆಲವೇ ನಿಮಿಷಗಳಲ್ಲಿ ಸ್ವಕ್ಷೇತ್ರದಲ್ಲಿನ ಮನೆಗೆ ಅದ್ಧೂರಿ ಮೆರವಣಿಗೆ ಮೂಲಕ ವಾಪಸ್‌ ಬಂದಿದ್ದಾರೆ. ಅಂದರೆ, ಅವರು ಅವಿತುಕೊಂಡಿದ್ದ ಅಜ್ಞಾತ ಸ್ಥಳ ಚನ್ನಗಿರಿ ಎಂದೇ ಸ್ಪಷ್ಟವಾಗಿ ಊಹಿಸಬಹುದಾಗಿದೆ.

ಕೆಲವೇ ಗಂಟೆಗಳಲ್ಲಿ ಜನರ ಮುಂದೆ ಹಾಜರ್: ಲೋಕಾಯುಕ್ತ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಆರೋಪಿ ನಂ.1 ಮಾಡಾಳ್‌ ವಿರುಪಾಕ್ಷಪ್ಪ ಚನ್ನಗಿರಿಯಲ್ಲೇ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಹೈಕೋರ್ಟ್​ನಿಂದ ಜಾಮೀನು ಸಿಗುತ್ತಿದ್ದಂತೆ ವಿರೂಪಾಕ್ಷಪ್ಪ ಪ್ರತ್ಯಕ್ಷವಾಗಿದ್ದಾರೆ. ಹೈಕೋರ್ಟ್ ಆದೇಶ ಬಂದ ಕೆಲವೇ ಗಂಟೆಯಲ್ಲಿ ಹೊರ ಬಂದಿದ್ದಾರೆ. ಮಧ್ಯಾಹ್ನ 12.30ಕ್ಕೆ ಹೈಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಆದೇಶ ಹೊರಬಂದಿದ್ದು, ಆದೇಶ ಬಂದ ಕೇವಲ ಎರಡೂವರೆ ಗಂಟೆಯಲ್ಲಿ ಜನರ ಮುಂದೆ ಪ್ರತ್ಯಕ್ಷರಾಗಿದ್ದಾರೆ. 

ಪೊಲೀಸರ ಕಾರ್ಯವೈಖರಿ ಮೇಲೆ ಅನುಮಾನ:  ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಲಂಚದ ಕೇಸ್ ಆರೋಪಿ ಮಾಡಾಳ್‌ ವಿರುಪಾಕ್ಷಪ್ಪ ಚನ್ನಗಿರಿಯಲ್ಲೇ ಇದ್ದರೂ ಪೊಲೀಸರಿಗೆ ಸಿಗದೇ ಹೇಗೆ ತಪ್ಪಿಸಿಕೊಂಡಿದ್ದರು.? ಚನ್ನಗಿರಿಯಲ್ಲೇ ಇದ್ದರೂ ಮಾಡಾಳ್ ಬಗ್ಗೆ ಪೊಲೀರಿಗೆ ಮಾಹಿತಿ ಸಿಕ್ಕಿರಲಿಲ್ವಾ..? ಲೋಕಾಯುಕ್ತ ದಾಳಿಯ ಮರುದಿನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಮಾಡಾಳ್ ವಿರುಪಾಕ್ಷಪ್ಪ ಚನ್ನಗಿರಿಗೆ ಹೋಗಿದ್ಯಾವಾಗ..? ಮಾಡಾಳ್ ಓಡಾಟದ ಬಗ್ಗೆ ಪೊಲೀಸರಿಗೆ ಮಾಹಿತಿಯೇ ಸಿಕ್ಕಿರಲಿಲ್ವಾ..? ಇದರ ಹಿಂದೆ ಷಡ್ಯಂತ್ರವೇನಾದರೂ ಇದೆಯೇ ಎಂಬ ಅನುಮಾನಗಳು ಮೂಡುತ್ತಿವೆ.

ಶಾಸಕ ಮಾಡಾಳು ವಿರುಪಾಕ್ಷಪ್ಪಗೆ ಬಿಗ್‌ ರಿಲೀಫ್‌: ಜಾಮೀನು ಮಂಜೂರು ಮಾಡಿದ ಕೋರ್ಟ್

ರಾಜ್ಯ ಬಿಜೆಪಿಗೆ ಭಾರಿ ಮುಜುಗರ: ಇನ್ನು ಶಾಸಕ ಮಾಡಾಳು ವಿರುಪಾಕ್ಷಪ್ಪ ಲೋಕಾಯುಕ್ತ ಪೊಲೀಸರಿಂದ ತಲೆ ಮರೆಸಿಕೊಂಡು ಒಬ್ಬ ಆರೋಪಿಯಾಗಿ ಜಾಮೀನು ಪಡೆದು ಮನೆಗೆ ಹೋಗುತ್ತಿರುವ ವೇಳೆ ಅದ್ಧೂರಿ ಮೆರವಣಿಗೆ ಮಾಡಿಸಿಕೊಳ್ಳುತ್ತಿರುವುದು ರಾಜ್ಯ ಬಿಜೆಪಿಗೆ ಭಾರಿ ಪ್ರಮಾಣದ ಮುಜುಗರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳಿಂದ ಮುಜುಗರ ತಪ್ಪಿಸಿಕೊಳ್ಳಲು ಮೆರವಣಿಗೆ ಮಾಡದಂತೆ ರಾಜ್ಯ ಬಿಜೆಪಿ ನಾಯಕರು ಶಾಸಕರಿಗೆ ಸೂಚನೆ ನೀಡಿದ್ದಾರೆ. ಕೂಡಲೇ, ಮೆರವಣಿಗೆ ಮಾಡುವುದನ್ನು ನಿಲ್ಲಿಸಿ ಪಕ್ಷಕ್ಕೆ ಮತ್ತಷ್ಟು ಮುಜುಗರ ಆಗವುದನ್ನು ತಪ್ಪಿಸುವಂತೆ ಸೂಚನೆ ನೀಡಿದೆ.

Follow Us:
Download App:
  • android
  • ios