Gujarat Election Result 2022: ಕಾಂಗ್ರೆಸ್ ಹೀನಾಯ ಸೋಲಿಗೆ ಪಂಚ ಕಾರಣಗಳು
ಬಿಜೆಪಿಯಿಂದ ಏಟಿನ ಮೇಲೆ ಏಟು ತಿಂದು ಹೈರಾಣಾಗಿದ್ದ ಕಾಂಗ್ರೆಸ್, ಗುಜರಾತ್‌ನಿಂದ ಏನಾದರೂ ನಿರೀಕ್ಷೆ ಮಾಡುವ ಹಾದಿಯಲ್ಲಿತ್ತು. ಆದರೆ, ಗುಜರಾತ್ ಚುನಾವಣೆಯ ಅಭಿಯಾನದ ಪೂರ್ತಿ ಗ್ರ್ಯಾಂಡ್ ಓಲ್ಡ್ ಪಾರ್ಟಿ, ಓಲ್ಡ್ ಆಗಿ ಕಂಡಿದ್ದು ಬಿಟ್ಟರೆ, ಮತ್ತೇನೂ ಆಗಿರಲಿಲ್ಲ. ಒಂದು ಕಾಲದಲ್ಲಿ ಅಧಿಕಾರದ ಶಕ್ತಿ ಕೇಂದ್ರವಾಗಿದ್ದ ರಾಜ್ಯದಲ್ಲಿ ಈಗ ಕಾಂಗ್ರೆಸ್ ಹೇಳಹೆಸರಿಲ್ಲದಂತಾಗಿದೆ. ಇದಕ್ಕೆ ಕಾರಣ ಬಿಜೆಪಿಯೂ ಅಲ್ಲ, ಹೊಸ ಪಕ್ಷ ಆಪ್ ಕೂಡ ಇಲ್ಲ. ತನ್ನದೇ ತಪ್ಪುಗಳಿಂದ ಕಾಂಗ್ರೆಸ್ ಈ ಹಂತಕ್ಕೆ ಇಳಿದಿದೆ.
ಅಹಮದಾಬಾದ್ (ಡಿ 8): ಗುಜರಾತ್ ಚುನಾವಣೆಯ ಮತ ಎಣಿಕೆ ಆರಂಭವಾದ ಒಂದೇ ಗಂಟೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೊಂದು ಚುನಾವಣಾ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು. ಪ್ರಸ್ತುತ ಇರುವ ಟ್ರೆಂಡ್‌ಗಳ ಪ್ರಕಾರ ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಗುಜರಾತ್ ವಿಧಾನಸಭೆಯಲ್ಲಿ ಕೇವಲ 16 ಸ್ಥಾನಗಳಲ್ಲಿ ಮಾತ್ರವೇ ಮುಂದಿದೆ. ಬಹುಶಃ ಬಿಜೆಪಿ ಗುಜರಾತ್ ಅನ್ನು ಕ್ಲೀನ್‌ಸ್ವೀಪ್ ಮಾಡಿದೆ ಎಂದರೂ ತಪ್ಪಾಗಲಾರದು. ಆಪ್, ಕಾಂಗ್ರೆಸ್‌ನಿಂದ ತ್ರಿಕೋನ ಪೈಪೋಟಿಯಾಗಿ ಮಾರ್ಪಟ್ಟಿದ್ದ ಗುಜರಾತ್ ವಿಧಾನಸಭೆ ಕಣ ಈಗ ಬಿಜೆಪಿ ಅತೀ ದೊಡ್ಡ ಚುನಾವಣಾ ಗೆಲುವಿನ ವೇದಿಕೆ ಎನಿಸಿದೆ. 150ಕ್ಕಿಂತ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಕಂಡುಕೊಂಡಿದೆ. ಆದರೆ, ಕಾಂಗ್ರೆಸ್ ಪಾಲಿಗೆ ಮಾತ್ರ ಚುನಾವಣಾ ಸೋಲುಗಳು ಬೆನ್ನು ಬಿಟ್ಟು ಹೋಗುವಂತೆ ಕಾಣುತ್ತಿಲ್ಲ. 2014ರಲ್ಲಿ ಕೇಂದ್ರದಿಂದ ಅಧಿಕಾರ ಕಳೆದಕೊಂಡ ಕ್ಷಣದಿಂದಲೂ ಭಾರತದಲ್ಲಿ ಒಂದು ರೀತಿ ಕಾಂಗ್ರೆಸ್ ಮುಕ್ತ ಭಾರತದ ವಾತಾವರಣವೇ ಕಾಣುತ್ತಿದೆ. ಚುನಾವಣಾ ಕಣದಲ್ಲಿ ಮೇಲೆದ್ದು ಬರುವ ಹಂಬಲದಲ್ಲಿದ್ದ ಕಾಂಗ್ರೆಸ್, ಗುಜರಾತ್ ಮತದಾರರು ಸೆಳೆಯುವಲ್ಲಿ ವಿಫಲವಾಗಿದೆ ಎನ್ನುವುದು ಸ್ಷಷ್ಟವಾಗಿ ಗೊತ್ತಾಗಿದೆ.
ಪ್ರಸ್ತುತ ಕಾಂಗ್ರೆಸ್ ಪಕ್ಷವೀಗ ರಾಜಸ್ಥಾನ ಹಾಗೂ ಛತ್ತೀಸ್‌ಗಢಗಳಲ್ಲಿ ಮಾತ್ರವೇ ಅಧಿಕಾರದಲ್ಲಿ. ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೇರುವುದು ನಿಶ್ಚಿತವಾಗಿದೆ. ಉಳಿದೆಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದ್ದು ಸೋಲು ಮಾತ್ರ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಅಧಿಕಾರದ ಶಕ್ತಿ ಕೇಂದ್ರವಾಗಿದ್ದ ಗುಜರಾತ್‌ನಲ್ಲೀಗ ಕಾಂಗ್ರೆಸ್ ಬೆರಳೆಣಿಕೆಯಷ್ಟು ಕ್ಷೇತ್ರಗಳಲ್ಲಿ ಮಾತ್ರವೇ ಉಳಿದುಕೊಂಡಿದೆ. ಹಾಗಾದರೆ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವೇನು ಅನ್ನೋದರ ರಿಪೋರ್ಟ್
ಮೋದಿ ಅಲೆ: ಗುಜರಾತ್‌ನಲ್ಲಿ ಬಿಜೆಪಿ ಗೆಲುವಿನಲ್ಲಿ ಮೋದಿ ಅಲೆ ದೊಡ್ಡ ಪಾತ್ರ ವಹಿಸಿರುವುದು ನಿಜ. ರೋಡ್‌ಶೋಗಳು, ಸಮಾವೇಶಗಳು, ಸಾರ್ವಜನಿಕ ಸಮಾವೇಶಗಳು ಎಲ್ಲದರಲ್ಲೂ ಬಿಜೆಪಿ ಹಾಗೂ ನರೇಂದ್ರ ಮೋದಿ ಮುಂದಿದ್ದರು. ಚುನಾವಣೆಯ ಪ್ರಚಾರದಲ್ಲಿ ಒಂದು ದಿನವೂ ಬಿಜೆಪಿ ಸೈಡ್‌ಲೈನ್ ಆದ ಉದಾಹರಣೆ ಇಲ್ಲ. ಮೋದಿ ಅಲೆ ಎನ್ನುವುದು ನಿಜ. ಮೋದಿ ಇಂದಿಗೂ ಕೂಡ ಭಾರತದ ಪಾಪ್ಯುಲರ್ ಫೇಸ್ ಅನ್ನೋದು ನಿಜ ಎನ್ನುವುದು ಗುಜರಾತ್ ಫಲಿತಾಂಶದ ಬಳಿಕ ಗೊತ್ತಾಗಿದೆ.
ಕಾಂಗ್ರೆಸ್‌ಗಿಲ್ಲ ಪ್ರಮುಖ ನಾಯಕರ ಫೇಸ್: ಕಾಂಗ್ರೆಸ್ ಇಂದಿಗೂ ಕೂಡ ಗಾಂಧಿ ಹಾಗೂ ಅವರ ಪರಂಪರೆಯನ್ನೇ ನೆಚ್ಚಿಕೊಂಡು ಮತ ಕೇಳುತ್ತಿದೆ. ಅದರಿಂದ ಹೊರತಾಗಿ ಕಾಂಗ್ರೆಸ್‌ನಲ್ಲಿ ಪ್ರಮುಖ ನಾಯಕರು ಕಾಣುತ್ತಲೇ ಇಲ್ಲ. ಮೊದಲೇ ಹೇಳಿದಂತೆ ಪಕ್ಷದಲ್ಲಿ ಅಮೂಲಾಗ್ರವಾಗಿ ದೊಡ್ಡ ಬದಲಾವಣೆ ಆಗಬೇಕಿದೆ. ಪ್ರಸ್ತುತ ತನ್ನ ಕಾರ್ಯಕರ್ತರಿಂದಾಗಿಯೇ ಕಾಂಗ್ರೆಸ್ ದೇಶದಲ್ಲಿ ಉಳಿದುಕೊಂಡಿದೆ. ಪ್ರಮುಖ ನಾಯಕರು ಪ್ರಚಾರಕ್ಕೆ ಇಲ್ಲದೇ ಇರುವುದು ಕಾಂಗ್ರೆಸ್‌ಗೆ ಗುಜರಾತ್‌ನಲ್ಲಿ ದೊಡ್ಡ ಹೊಡೆತ ನೀಡಿದೆ.
ಹೈಕಮಾಂಡ್ ನಿರಾಸಕ್ತಿ: ಇನ್ನು ಗುಜರಾತ್ ಚುನಾವಣೆಗೆ ಹೈಕಮಾಂಡ್ ದೊಡ್ಡ ಮಟ್ಟಿಗೆ ನಿರಾಸಕ್ತಿ ತೋರಿಸಿತು. ಕಾಂಗ್ರೆಸ್‌ನ ಹಿರಿಯ ನಾಯಕರು ಗುಜರಾತ್‌ಗೆ ಪ್ರಚಾರದ ಭೇಟಿ ಕೂಡ ನೀಡಿರಲಿಲ್ಲ. ರಾಹುಲ್ ಗಾಂಧಿ ಇಡೀ ಅಭಿಯಾನದಲ್ಲಿ ಕೇವಲ 2 ಸಮಾವೇಶಗಳನ್ನಷ್ಟೇ ಮಾಡಿದರು. ಅದಕ್ಕೆ ಹೋಲಿಸಿದರೆ ಮೋದಿ 36 ಸಮಾವೇಶ ಮಾಡಿದ್ದರು. ರಾಹುಲ್ ಗಾಂಧಿಗೆ ಗುಜರಾತ್‌ಗಿಂತ ಭಾರತ್ ಜೋಡೋ ಯಾತ್ರೆಯೇ ಪ್ರಮುಖವಾಗಿತ್ತು. ಹಿರಿಯ ನಾಯಕರ ನಿರಾಸಕ್ತಿ ಪಕ್ಷದ ಮತ್ತೊಂದು ಹೀನಾಯ ಸೋಲಿಗೆ ಕಾರಣವಾಗಿದೆ.
Gujarat Election Results 2022 Live: ಗುಜರಾತ್‌ನಲ್ಲಿ ಮೋದಿ ಮೋಡಿ, ನಿರೀಕ್ಷೆಗೂ ಮೀರಿ ಗೆಲುವು
ಪ್ರಮುಖ ನಾಯಕರ ವಿದಾಯ: ಕಾಂಗ್ರೆಸ್ ಪಕ್ಷಕ್ಕೆ ತನ್ನ ಪ್ರಮುಖ ನಾಯಕರ ರಾಜೀನಾಮೆ ಕೂಡ ಪೆಟ್ಟು ನೀಡಿತು. ಪಕ್ಷ ನಿಷ್ಠರಾಗಿದ್ದ ಗುಲಾಮ್ ನಬಿ ಆಜಾದ್, ಆರ್‌ಪಿಎನ್ ಸಿಂಗ್, ಜೇವಿಯರ್ ಶೇರ್ಗಿಲ್, ಸುನೀಲ್ ಝಕ್ಕರ್, ಕಪಿಲ್ ಸಿಬಲ್ ಸೇರಿದಂತೆ ಇನ್ನೂ ಕೆಲವು ಪ್ರಮುಖ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದರು. ಇನ್ನು ಗುಜರಾತ್‌ನಲ್ಲಿ ಪಕ್ಷವು 11 ಬಾರಿಯ ಶಾಸಕ ಮೋಹನ್ ಸಿನ್ಹಾ ರಥವಾ, ಭಾವೇಶ್ ಖತಾರಾ, ಹಿಮಾಂಶು ವ್ಯಾಸ್, ಹಾರ್ದಿಕ್ ಪಟೇಲ್ ಸೇರಿದಂತೆ ಇನ್ನೂ ಕೆಲವರು ಪಕ್ಷವನ್ನು ತೊರೆದು ಬೇರೆ ಬೇರೆ ಪಕ್ಷಗಳನ್ನು ಸೇರಿದ್ದರು.
Gujarat Election Result 2022: ಮೋದಿ-ಅಮಿತ್ ಶಾ ತವರಲ್ಲಿ ಅರಳಿದ ಕಮಲ, ಆರೆಸ್ಸೆಸ್ ತಂತ್ರಗಾರಿಕೆ ಸಿಕ್ಕ ಫಲ!
ಸ್ಪಷ್ಟವಾದ ಚುನಾವಣಾ ಅಭಿಯಾನವಿರಲಿಲ್ಲ; ಪಕ್ಷದ ಅಸ್ತಿತ್ವ ನಡುಗುವಾಗ ಅದನ್ನು ಗಟ್ಟಿ ಮಾಡುವ ಯಾವ ಪ್ರಯತ್ನವೂ ಕಾಂಗ್ರೆಸ್‌ನಲ್ಲಿ ಕಾಣಲಿಲ್ಲ. ಚುನಾವಣಾ ನಿರತ ರಾಜ್ಯದಲ್ಲಿ ಸ್ಪಷ್ಟವಾದ ಅಭಿಯಾನದ ಕೊರತೆ ಕಾಂಗ್ರೆಸ್ ಪಕ್ಷದಲ್ಲಿ ಎದ್ದು ಕಂಡಿತು. ಎಲೆಲ್ಲಿ ಕಾಂಗ್ರೆಸ್‌ನ ಅಭಿಯಾನ ವಿಫಲವಾಗಿದೆಯೋ ಅಲ್ಲೆಲ್ಲಾ ಬಿಜೆಪಿ ಜಯ ಕಂಡಿದೆ. ಒಟ್ಟಾರೆ, ಗುಜರಾತ್‌ಅನ್ನು ಬಿಜೆಪಿಯಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಅಂದುಕೊಂಡಿತ್ತು. ಇನ್ನೇನು ಲೋಕಸಭಾ ಚುನಾವಣೆಯೂ ಹತ್ತಿರದಲ್ಲಿರುವ ಸಮಯದಲ್ಲಿ ಕಾಂಗ್ರೆಸ್ ಚುನಾವಣಾ ಅಭಿಯಾನದಲ್ಲಿ ಇನ್ನಷ್ಟು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.
ಇವೆಲ್ಲದರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿ ಅವರನ್ನು ರಾವಣ ಎಂದು ಕರೆದಿದ್ದು ಕೂಡ ಬಿಜೆಪಿಗೆ ಲಾಭವಾಗಿದೆ. ಗುಜರಾತ್ ಎನ್ನುವುದು ಬಿಜೆಪಿಯ ಹಿಂದುತ್ವದ ಪ್ರಯೋಗಾಲಯ ಇದ್ದಂತೆ. ಖರ್ಗೆ ಹೇಳಿದ ರಾವಣ ಕಾಮೆಂಟ್‌ಅನ್ನು ಅಷ್ಟೇ ಸೂಕ್ಷ್ಮವಾಗಿ ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಎಂದೂ ರಾಮನನ್ನು ನಂಬೋದಿಲ್ಲ. ಅದಕ್ಕೆ ರಾವಣನ ಹೆಸರು ಹೇಳಿದೆ ಎಂದಿದ್ದರು. ಆದರೆ, ನೇರವಾಗಿ ಖರ್ಗೆಯನ್ನು ಟೀಕೆ ಮಾಡಿದರೆ ಅಗಬಹುದಾದ ಹಿನ್ನಡೆಯ ಅರಿವಿದ್ದ ಮೋದಿ, ಈ ಮಾತನ್ನು ಖರ್ಗೆ ಹೇಳಿದ್ದಲ್ಲ ಎನ್ನುವುದು ನನಗೆ ಗೊತ್ತಿದೆ. ನನ್ನ ಮೇಲೆ ಅವರಿಗೆ ಅಭಿಮಾನವಿದೆ. ಖರ್ಗೆ ಅವರಿಂದ ಹೈಕಮಾಂಡ್ ಹೇಳಿಸಿರಬಹುದು ಎಂದಿದ್ದು ಚುನಾವಣೆಯಲ್ಲಿ ಲಾಭ ತಂದಿದೆ.
ಗುಜರಾತ್‌ನಲ್ಲಿ ಬಿಜೆಪಿ ಗೆದ್ದಿದ್ದೇಕೆ..?
- ಪ್ರಧಾನಿ ಮೋದಿ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆ
- ಮೋದಿ ಜತೆಗೆ ಅಮಿತ್ ಶಾ ಅವರ ಸಂಘಟನಾ ಶಕ್ತಿ
- ಭೂಪೇಂದ್ರ ಪಟೇಲ್ರನ್ನ ಸಿಎಂ ಮಾಡಿ ಆಡಳಿತ ವಿರೋಧಿ ಅಲೆಗೆ ಬ್ರೇಕ್
- 5 ಸಚಿವರು ಸೇರಿ 42 ಶಾಸಕರು ಕೈತಪ್ಪಿಸಿದ್ದೇ ಗೆಲುವಿನ ಮಾನದಂಡ
- ಆಡಳಿತ ವಿರೋಧಿ ಅಲೆಯ ಲಾಭವನ್ನ ಕಾಂಗ್ರೆಸ್ ಪಡೆಯದೇ ಇದ್ದಿದ್ದು
- 2017ರಲ್ಲಿ ಸೋತಿದ್ದ ಕ್ಷೇತ್ರಗಳಲ್ಲಿ ಅತಿಹೆಚ್ಚು ಪ್ರಚಾರ ಮಾಡಿದ್ದು
- ಎಎಪಿ ಸ್ಪರ್ಧೆಯಿಂದಾಗಿ ಉಂಟಾದ ತ್ರಿಕೋನ ಸ್ಪರ್ಧೆ ಬಿಜೆಪಿಗೆ ಲಾಭ
ಗುಜರಾತ್‌ನಲ್ಲಿ ‘ಕೈ’ ಸುಟ್ಟುಕೊಂಡಿದ್ದೇಕೆ..?
- ಹೈಕಮಾಂಡ್ ನಿರಾಸಕ್ತಿ ಕಾರಣಕ್ಕೆ ರಾಜ್ಯ ಘಟಕಕ್ಕಿಲ್ಲವಾಯ್ತು ಆಸಕ್ತಿ
- ಚುನಾವಣೆಗಿಂತ ರಾಹುಲ್ಗೆ ಜೋಡೋ ಯಾತ್ರೆ ಮುಖ್ಯವಾಗಿದ್ದು
- ಹಿಮಾಚಲ ಪ್ರದೇಶಕ್ಕಷ್ಟೇ ಸೀಮಿತವಾದ ಪ್ರಿಯಾಂಕ ಗಾಂಧಿ
- ಅಹ್ಮದ್ ಪಟೇಲ್ ಕೊರತೆ, ಗುಜರಾತ್ ಬಗ್ಗೆ ಆಸಕ್ತಿ ತೋರದ ಗೆಹ್ಲೋಟ್
- ರಾಹುಲ್ ಯಾತ್ರೆಯಲ್ಲಿ ಮೇಧಾ ಪಾಟ್ಕರ್ ಭಾಗಿಯಾಗಿದ್ದನ್ನ ಟೀಕಿಸಿದ್ದ ಮೋದಿ
- ಕಾಂಗ್ರೆಸ್‌ನ ಪ್ರಮುಖ ನಾಯಕರು ಬಿಜೆಪಿಗೆ ಸೇರಿದ್ದು
- ಮತದಾನದ ಸಮಯದಲ್ಲಿ ಮೋದಿಯನ್ನ ರಾವಣ ಎಂದು ಕರೆದಿದ್ದ ಖರ್ಗೆ
ಕಾಂಗ್ರೆಸ್ ಸೋಲಿಸಿ.. ಬಿಜೆಪಿ ಗೆಲ್ಲಿಸಿದ ಆಪ್
- ಕಾಂಗ್ರೆಸ್ ಮತಗಳನ್ನಷ್ಟೇ ಪಡೆಯಲು ಆಪ್ ಯಶಸ್ವಿ
- ನಗರ ಪ್ರದೇಶದಲ್ಲಿ ಮಾತ್ರ CM ಕೇಜ್ರಿವಾಲ್ ಪ್ರಚಾರ
- ಉಚಿತ ಘೋಷಣೆಗಳಿಗೆ ಮಣೆ ಹಾಕದ ಗುಜರಾತಿಗಳು
- ಮೋದಿ ಜನಪ್ರಿಯತೆಗೆ ಸಾಟಿಯಾಗಲಿಲ್ಲ ಕೇಜ್ರಿವಾಲ್