Asianet Suvarna News Asianet Suvarna News

ರೈತರಿಗೆ 5 ತಾಸು ನಿರಂತರ ವಿದ್ಯುತ್‌: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್‌ ಆದೇಶ

‘ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ತೀವ್ರ ಹೆಚ್ಚಾಗಿದ್ದು, ರೈತರಿಗೆ ಕೃಷಿ ಪಂಪ್ ಸೆಟ್‌ ಬಳಕೆಗೆ ನಿತ್ಯ ಐದು ಗಂಟೆಗಳ ತಡೆರಹಿತ 3-ಫೇಸ್ ವಿದ್ಯುತ್‌ ಪೂರೈಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

5 hours Continuous Electricity for farmers Says CM Siddaramaiah gvd
Author
First Published Oct 14, 2023, 3:00 AM IST | Last Updated Oct 14, 2023, 3:00 AM IST

ಬೆಂಗಳೂರು (ಅ.14): ‘ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ತೀವ್ರ ಹೆಚ್ಚಾಗಿದ್ದು, ರೈತರಿಗೆ ಕೃಷಿ ಪಂಪ್ ಸೆಟ್‌ ಬಳಕೆಗೆ ನಿತ್ಯ ಐದು ಗಂಟೆಗಳ ತಡೆರಹಿತ 3-ಫೇಸ್ ವಿದ್ಯುತ್‌ ಪೂರೈಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ತೀವ್ರ ವಿದ್ಯುತ್‌ ಬರ ಉಂಟಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಅವರು, ಲಭ್ಯವಿರುವ ವಿದ್ಯುತ್‌ ದಕ್ಷವಾಗಿ ಹಂಚಿಕೆಯಾಗಬೇಕು. 

ಈ ನಿಟ್ಟಿನಲ್ಲಿ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಹೆಚ್ಚಿನ ನಿಗಾ ವಹಿಸಿ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲೆಗೊಬ್ಬರು ಮುಖ್ಯ ಎಂಜಿನಿಯರ್‌ಗಳನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿ, ನಿತ್ಯ ನಿರಂತರ 5 ಗಂಟೆ ವಿದ್ಯುತ್‌ ಪೂರೈಕೆ ಯಾವುದೇ ಅಡಚಣೆ ಇಲ್ಲದೆ ಆಗುತ್ತಿರುವ ಬಗ್ಗೆ ಖಾತರಿಪಡಿಸಬೇಕು. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಇಂದಿನ ಸಭೆಯ ತೀರ್ಮಾನಗಳ ಪಾಲನೆ ಆಗುತ್ತಿರುವುದನ್ನು ಖಾತರಿಪಡಿಸಿ ವರದಿ ನೀಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

ಪ್ರಧಾನಿ ಮೋದಿಗೆ ಸರ್ವಾಧಿಕಾರದ ಅಮಲು: ಮುಖ್ಯಮಂತ್ರಿ ಚಂದ್ರು

ಬೇರೆ ರಾಜ್ಯಕ್ಕೆ ವಿದ್ಯುತ್‌ ಮಾರಾಟವಿಲ್ಲ: ರಾಜ್ಯದಲ್ಲಿನ ವಿದ್ಯುತ್‌ ಉತ್ಪಾದಕರಿಂದ ವಿದ್ಯುತ್‌ ಪಡೆಯಲು ರಾಷ್ಟ್ರೀಯ ವಿಪತ್ತಿನಡಿಯಲ್ಲಿ ವಿದ್ಯುತ್‌ ಕಾಯ್ದೆಯ ಸೆಕ್ಷನ್‌ 11ನ್ನು ಜಾರಿಗೊಳಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿ ಉತ್ಪಾದನೆ ಮಾಡುವ ವಿದ್ಯುತ್ತನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡದಂತೆ ಕಡಿವಾಣ ವಿಧಿಸಲಾಗಿದ್ದು, ಇದರಿಂದ 800 ಮೆ.ವ್ಯಾಟ್‌ ವಿದ್ಯುತ್‌ ಲಭ್ಯವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.

ಇದಕ್ಕೆ ಸಿದ್ದರಾಮಯ್ಯ, ರಾಜ್ಯದಲ್ಲಿ ವಿದ್ಯುತ್‌ಗೆ ತೀವ್ರ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡಲು ನಿರ್ಬಂಧ ವಿಧಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಲ್ಲಿ ಯಾವುದೇ ಲೋಪ ಆಗಬಾರದು. ರಾಜ್ಯದಲ್ಲಿ ಕಳೆದ ವರ್ಷ ಈ ವೇಳೆಗೆ ಕೇವಲ 9 ಸಾವಿರ ಮೆ.ವ್ಯಾಟ್‌ ವಿದ್ಯುತ್ ಬೇಡಿಕೆ ಇತ್ತು. ಅದು ಈಗ 15-16 ಸಾವಿರ ಮೆ.ವ್ಯಾಟ್‌ಗೆ ಏರಿಕೆಯಾಗಿದೆ. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ವಿದ್ಯುತ್‌ ಉತ್ಪಾದನೆ ಪ್ರಮಾಣ ಮಾತ್ರ ಹೆಚ್ಚಾಗಿಲ್ಲ. ಕಲ್ಲಿದ್ದಲು ವ್ಯತ್ಯಯ, ಜಲ ವಿದ್ಯುತ್‌ ಉತ್ಪಾದನೆಗೆ ನೀರಿನ ಕೊರತೆ ಮತ್ತಿತರ ಕಾರಣಗಳಿಂದ ವಿದ್ಯುತ್‌ ಅಭಾವ ಸೃಷ್ಟಿಯಾಗಿದೆ. ಇದನ್ನು ಹೇಗೆ ಬಗೆಹರಿಸಬೇಕು ಎಂಬುದರ ಬಗ್ಗೆ ತ್ವರಿತಗತಿ ಕ್ರಮಗಳನ್ನು ಕೈಗೊಳ್ಳಿ ಎಂದು ತಾಕೀತು ಮಾಡಿದರು.

ತಕ್ಷಣದ ಪರಿಹಾರವೇನು?: ವಿದ್ಯುತ್‌ ಕೊರತೆ ನೀಗಿಸಲು ತಕ್ಷಣದ ಕ್ರಮವಾಗಿ ನವೆಂಬರ್‌ನಿಂದ ಉತ್ತರ ಪ್ರದೇಶದಿಂದ 300 ಮೆ.ವ್ಯಾ., ಪಂಜಾಬ್‌ ನಿಂದ 600 ಮೆ.ವ್ಯಾ. ವಿದ್ಯುತ್‌ ಪಡೆಯಲಾಗುವುದು. ಕೆ.ಇ.ಆರ್.ಸಿ.. ಅನುಮೋದನೆಯೊಂದಿಗೆ 1500 ಮೆಗಾವ್ಯಾಟ್‌ ಅಲ್ಪಾವಧಿ ವಿದ್ಯುತ್‌ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಜತೆಗೆ ಕಬ್ಬಿನ ಬೆಳೆಗೆ ನೀರು ಹಾಯಿಸಲು ಕೆಲವು ಜಿಲ್ಲೆಗಳಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಬ್ಬಿನ ಕಟಾವು, ಅರೆಯುವಿಕೆ ಪ್ರಾರಂಭವಾದ ಕೂಡಲೇ ಬೇಡಿಕೆ ಇಳಿಕೆಯಾಗಲಿದ್ದು, ಕಬ್ಬು ಅರೆಯುವಿಕೆಯೊಂದಿಗೆ ಕೋ-ಜೆನರೇಶನ್‌ನಿಂದ ವಿದ್ಯುತ್‌ ಲಭ್ಯವಾಗುತ್ತದೆ. 

ಈಗಾಗಲೇ ಹಲವು ಸಕ್ಕರೆ ಕಾರ್ಖಾನೆಗಳಲ್ಲಿ ಕೋ-ಜನರೇಶನ್‌ ಮೂಲಕ ವಿದ್ಯುತ್‌ ಉತ್ಪಾದಿಸುವ ಘಟಕಗಳಿವೆ. ಅವುಗಳಿಂದ ವಿದ್ಯುತ್‌ ಲಭ್ಯವಾದರೆ ಮತ್ತಷ್ಟು ಕೊರತೆ ನೀಗಲಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಸಿದ್ದರಾಮಯ್ಯ, ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ವಿದ್ಯುತ್‌ ಕೊರತೆ ತೀವ್ರವಾಗಿದೆ. ಪ್ರತಿ ವರ್ಷ ನೀವು ಕಂಟಿಂಜೆನ್ಸಿ ಪ್ಲಾನ್‌ ಹೊಂದಿರಬೇಕು. ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂಬಂತೆ ಕಾರ್ಯಪ್ರವೃತ್ತರಾದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಎಚ್ಚರಿಸಿದರು.

ಶೇ.13ರಷ್ಟು ವಿದ್ಯುತ್‌ ಸೋರಿಕೆ, ಸಿಎಂ ತರಾಟೆ: ಶೇ.13ರಷ್ಟು ವಿದ್ಯುತ್‌ ವಿತರಣಾ ನಷ್ಟವಾಗುತ್ತಿದೆ. ವಿದ್ಯುತ್‌ ಕಳವು ಗೃಹ ಜ್ಯೋತಿಯಿಂದ ಕಡಿಮೆಯಾಗಿದೆ. ಕೈಗಾರಿಕಾ ವಿದ್ಯುತ್‌ ಕಳವು ಅತಿ ಕಡಿಮೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಆದರೂ ಶೇ.13ರಷ್ಟು ಸೋರಿಕೆ ಆಗುತ್ತಿದೆ ಎಂದರೆ ಕಾರಣವೇನು? ವಿಚಕ್ಷಣಾ ದಳದಲ್ಲಿ ಎಷ್ಟು ಮಂದಿ ಎಸ್.ಪಿ.ಗಳಿದ್ದೀರಿ? ಎಷ್ಟು ಸಿಬ್ಬಂದಿ ಇದ್ದೀರಿ ನಿಮ್ಮ ಕೆಲಸವೇನು? ಎಂದು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ಗುಪ್ತಾ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಸೇರಿ ಹಲವರು ಹಾಜರಿದ್ದರು.

ಬಿಜೆಪಿಗೆ ವಸ್ತುಸ್ಥಿತಿ ತಿಳಿದಿಲ್ಲ: ಸಭೆ ಆರಂಭಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿದ್ಯುತ್‌ ಕೊರತೆ ಬಗ್ಗೆ ಬಿಜೆಪಿಯವರು ವಸ್ತುಸ್ಥಿತಿ ಅರಿವಿಲ್ಲದೆ ಮಾತನಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷದಿಂದ ವಿದ್ಯುತ್‌ ಉತ್ಪಾದನೆ ಪ್ರಮಾಣ ಹೆಚ್ಚಳ ಮಾಡದೆ ಬಿಜೆಪಿಯವರು ನಿರ್ಲಕ್ಷ್ಯ ವಹಿಸಿದ್ದರು. ಅದರ ಪರಿಣಾಮವನ್ನು ಜನರು ಎದುರಿಸುವಂತಾಗಿದೆ. ಮಳೆ ಇಲ್ಲದೆ ಬರಗಾಲ ಬಂದು ತೊಂದರೆಯಾಗಿದೆ. ಆದರೂ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಅವರು ಹೇಳಿದಂತೆ ಸಂಪೂರ್ಣ ಲೋಡ್ ಶೆಡ್ಡಿಂಗ್ ಆಗಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಬಿಜೆಪಿ ಕೊಟ್ಟ ಅನುದಾನವೆಷ್ಟು: ಸಚಿವ ರಾಮಲಿಂಗಾರೆಡ್ಡಿ

ಎಸ್ಕಾಂಗಳಿಗೆ ಸಿಎಂ ನೀಡಿದ ಸೂಚನೆಗಳು
- ಬರಗಾಲದ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ, ಅದನ್ನು ನಿಭಾಯಿಸಿ
- ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ 5 ಗಂಟೆ ತಡೆರಹಿತ ವಿದ್ಯುತ್‌ ಪೂರೈಸಿ
- ಪ್ರತಿ ಜಿಲ್ಲೆಗೆ ಒಬ್ಬ ಮುಖ್ಯ ಎಂಜಿನಿಯರ್‌ ನೋಡಲ್‌ ಅಧಿಕಾರಿಯಾಗಿ ನೇಮಿಸಿ
- ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಈ ಆದೇಶ ಪಾಲಿಸಿ
- ಬೇರೆ ರಾಜ್ಯಗಳಿಗೆ ವಿದ್ಯುತ್‌ ಮಾರಾಟ ನಿಲ್ಲಿಸುವ ನಿರ್ಧಾರ ಕಟ್ಟುನಿಟ್ಟಾಗಿ ಪಾಲಿಸಿ
- ವಿದ್ಯುತ್‌ ಅಭಾವ ಪರಿಹಾರಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಯೋಜನೆ ರೂಪಿಸಿ
- ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡಬೇಡಿ, ಆಪತ್ಕಾಲಕ್ಕೆ ಬೇರೆ ಪ್ಲಾನ್‌ ಇಟ್ಟುಕೊಳ್ಳಿ
- ಈಗಲೂ ಶೇ.13ರಷ್ಟು ವಿದ್ಯುತ್‌ ಸೋರಿಕೆಗೆ ಕಾರಣವೇನು? ಕೂಡಲೇ ಪತ್ತೆಹಚ್ಚಿ
- ವಿತರಣೆ ವೇಳೆ ವಿದ್ಯುತ್‌ ಸೋರಿಕೆ ತಡೆಯಲು ವಿಚಕ್ಷಣಾ ದಳಕ್ಕೆ ಚುರುಕು ಮುಟ್ಟಿಸಿ

Latest Videos
Follow Us:
Download App:
  • android
  • ios