ಗಾಂಧಿನಗರ[ಮಾ.17]: ರಾಜ್ಯಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ, ಗುಜರಾತ್‌ ಕಾಂಗ್ರೆಸ್‌ ಶಾಸಕನೋರ್ವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಭಾನುವಾರ ಆರಂಭವಾದ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಪರ್ವ 5ಕ್ಕೆ ಏರಿದೆ.

ಅಲ್ಲದೆ, ಐವರು ಕಾಂಗ್ರೆಸ್‌ ಶಾಸಕರ ರಾಜೀನಾಮೆಯನ್ನು ಅನುಮೋದಿಸಿದ್ದಾಗಿ ಗುಜರಾತ್‌ ವಿಧಾನಸಭಾ ಸ್ಪೀಕರ್‌ ರಾಜೇಂದ್ರ ತ್ರಿವೇದಿ ಅವರು ಸದನಕ್ಕೆ ತಿಳಿಸಿದ್ದಾರೆ. ಈ ಮೂಲಕ ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ 3 ಸ್ಥಾನಗಳನ್ನು ಗೆಲ್ಲಬೇಕೆಂಬ ಬಿಜೆಪಿ ಹಾದಿ ಸುಗಮವಾಗಿದೆ.

ಗುಜರಾತ್‌ ಶಾಸಕರ ಸಂಖ್ಯಾಬಲದ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 2 ಸ್ಥಾನ ಗೆಲ್ಲುವ ಸಾಮರ್ಥ್ಯ ಹೊಂದಿದ್ದವು. ಆದರೆ, ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲಬೇಕಾದರೆ, ಕಾಂಗ್ರೆಸ್‌ನ 5 ಶಾಸಕರನ್ನು ತನ್ನತ್ತ ಸೆಳೆಯಬೇಕಿತ್ತು ಅಥವಾ ಶಾಸಕರ ರಾಜೀನಾಮೆ ಕೊಡಿಸಿ ಕಾಂಗ್ರೆಸ್‌ ಸಂಖ್ಯಾಬಲ ಕುಗ್ಗಿಸಬೇಕಿತ್ತು. ಕಾಂಗ್ರೆಸ್‌ನ ಐವರು ಶಾಸಕರ ರಾಜೀನಾಮೆ ಮೂಲಕ ಬಿಜೆಪಿಯ ಹಾದಿ ಸುಗಮವಾಗಿದೆ.