ಕಾಂಗ್ರೆಸ್‌ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ರಾಜ್ಯದ ಜನರಿಗೆ ಯಾವುದೇ ಸಂಶಯ ಬೇಡ. ಈ ಯೋಜನೆಗಳ ಜಾರಿಗೆ ಅಗತ್ಯವಿರುವ ಮಾಹಿತಿ ಸಂಗ್ರಹಿಸಲು ಹೇಳಿದ್ದೇನೆ.

ಬೆಂಗಳೂರು (ಮೇ.22): ಕಾಂಗ್ರೆಸ್‌ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ರಾಜ್ಯದ ಜನರಿಗೆ ಯಾವುದೇ ಸಂಶಯ ಬೇಡ. ಈ ಯೋಜನೆಗಳ ಜಾರಿಗೆ ಅಗತ್ಯವಿರುವ ಮಾಹಿತಿ ಸಂಗ್ರಹಿಸಲು ಹೇಳಿದ್ದೇನೆ. ಅದು ಮುಗಿದ ಕೂಡಲೇ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ ಅವತ್ತಿನಿಂದಲೇ ಜಾರಿಗೆ ಬರುವಂತೆ ಆದೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಐದು ಗ್ಯಾರಂಟಿಗಳ ಬಗ್ಗೆ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಹೇಳಿದ್ದಾರೆ. ಮಿಸ್ಟರ್‌ ಬೊಮ್ಮಾಯಿ ಅವರೇ ನಿಮಗೂ ಯಾವುದೇ ಅನುಮಾನ ಬೇಡ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಐದೂ ಗ್ಯಾರಂಟಿಗಳನ್ನು ಮತ್ತೊಮ್ಮೆ ಸ್ಥಿರೀಕರಿಸಿ ಅಂದಿನಿಂದಲೇ ಜಾರಿಗೊಳಿಸುತ್ತೇವೆ ಎಂದು ತಿರುಗೇಟು ನೀಡಿದರು.

ಮಂತ್ರಿ ಸ್ಥಾನಕ್ಕಾಗಿ ಸಿಎಂ, ಡಿಸಿ​ಎಂಗೆ ಮನವಿ ಮಾಡು​ವೆ: ಭದ್ರಾವತಿ ಶಾಸಕ ಸಂಗ​ಮೇ​ಶ್ವ​ರ್‌

3 ಜನ ಸಿಎಂ ಆದ್ರೆ ಆಗುತ್ತಾ?: ರಾಜ್ಯದ ಜನ ಸ್ಪಷ್ಟಬಹುಮತದೊಂದಿಗೆ ನಮಗೆ ಆಶೀರ್ವಾದ ಮಾಡಿದ್ದಾರೆ. ಸ್ಥಿರ ಸರ್ಕಾರ ಬಂದಿದೆ. 2004, 2008, 2018ರಲ್ಲಾಗಲಿ ಸ್ಥಿರ ಸರ್ಕಾರ ಇರಲಿಲ್ಲ. ಆ ಎಲ್ಲಾ ಸರ್ಕಾರಗಳಲ್ಲಿ ಮೂರು ಮೂರು ಜನ ಮುಖ್ಯಮಂತ್ರಿಗಳಾದರು. ಆ ರೀತಿ ಮೂರು ಮೂರು ಜನ ಮುಖ್ಯಮಂತ್ರಿಗಳಾದರೆ ಜನರಿಗೆ ಕೊಟ್ಟ ಭರವಸೆ ಈಡೇರಿಸೋಕೆ ಆಗುತ್ತಾ. ಜನರ ಆಶಯದಂತೆ ನಡೆಯಲಾಗದ ಮೇಲೆ ಯಾಕೆ ಆಡಳಿತ, ರಾಜಕಾರಣ ಮಾಡಬೇಕು. 2013ರ ನಂತರ ಈಗ ಮತ್ತೊಮ್ಮೆ ನಮ್ಮ ಮೇಲೆ ಸಂಪೂರ್ಣ ನಿರೀಕ್ಷೆ ಇಟ್ಟು ಜನ ಸ್ಪಷ್ಟಬಹುಮತದೊಂದಿಗೆ ಸ್ಥಿರ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ನಾವು ನಮ್ಮ ಪಕ್ಷದ ಐದೂ ಗ್ಯಾರಂಟಿಗಳ ಜತೆಗೆ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನೂ ಈಡೇರಿಸಿ ನುಡಿದಂತೆ ನಡೆಯುತ್ತೇವೆ ಎಂದು ಹೇಳಿದರು.

ಮೊದಲ ದಿನವೇ ಜನಪರ ಕಾರ್ಯಗಳಲ್ಲಿ ಸಿಎಂ ಸಕ್ರಿಯ: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರದ ಮೊದಲ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಮಳೆಯಿಂದ ಮೃತರಾದ ಯುವತಿ ಸಂಬಂಧಿಕರಿಗೆ ಖುದ್ದಾಗಿ ತೆರಳಿ ಸಾಂತ್ವನ ತಿಳಿಸಿದ್ದಲ್ಲದೇ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಶನಿವಾರ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ಭಾನುವಾರ ಬೆಳಗ್ಗೆ ತಮ್ಮ ನಿವಾಸದ ಬಳಿಗೆ ಆಗಮಿಸಿದ ನಾಯಕರೊಂದಿಗೆ ಚರ್ಚಿಸಿದರು. 

ಈ ವೇಳೆ ಹಿರಿಯ ನಾಯಕರಾದ ಟಿ.ಬಿ. ಜಯಚಂದ್ರ, ಬಸವರಾಜ ರಾಯರೆಡ್ಡಿ, ದಿನೇಶ್‌ ಗುಂಡೂರಾವ್‌ ಸೇರಿದಂತೆ ಹಲವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದರು ಎಂದು ತಿಳಿದುಬಂದಿದೆ. ಬಳಿಕ ಬಳಿಕ ಮೊಮ್ಮಗ ಧವನ್‌ ರಾಕೇಶ್‌ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಪಿಯುಸಿ ಮುಗಿಸಿದ ಮೊಮ್ಮಗನಿಗೆ ಶುಭ ಹಾರೈಸಿದರು. ಬಳಿಕ ಕೆಪಿಸಿಸಿ ಕಚೇರಿಯಲ್ಲಿನ ರಾಜೀವ್‌ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾದರು.

ಮಳೆ ಹಾನಿ ಸ್ಥಳಕ್ಕೆ ಭೇಟಿ: ಮಧ್ಯಾಹ್ನ ಸುರಿದ ಅಬ್ಬರದ ಮಳೆಯಿಂದಾಗಿ ಕೆ.ಆರ್‌. ವೃತ್ತದ ಕೆಳಸೇತುವೆಯಲ್ಲಿ ನೀರು ತುಂಬಿಕೊಂಡು ಕಾರು ಮುಳುಗಡೆಯಾಗಿ ಯುವತಿಯೊಬ್ಬರು ಮೃತಪಟ್ಟಿದ್ದರು. ವಿಷಯ ಅರಿತು ಕೂಡಲೇ ಸ್ಥಳಕ್ಕೆ ದಾವಿಸಿದ ಅವರು ಕೆ.ಆರ್‌. ವೃತ್ತದಲ್ಲಿ ತುಂಬಿಕೊಂಡಿದ್ದ ನೀರು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ತೆರಳಿ ಯುವತಿಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಜತೆಗೆ ಮೃತರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ಘೋಷಿಸಿದರು.

ಡಿ.ಕೆ.​ಶಿ​ವ​ಕು​ಮಾರ್‌ ಡಿಸಿಎಂ: ರಾಮನಗರ ಜಿಲ್ಲೆಯಲ್ಲಿ ಮೂಡಿದ ಅಭಿ​ವೃದ್ಧಿ ನಿರೀಕ್ಷೆಗಳು

ಅಧಿಕಾರಿಗಳೊಂದಿಗೆ ಸಭೆ: ನಂತರ ಮಳೆ ಹಾನಿಯೊಂದ ಸಮಸ್ಯೆಗಳು ಪುನರಾವರ್ತನೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚಿಸಿದರು. ಈ ವೇಳೆ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಕೆಲಸ ಮಾಡುವಂತೆ ಸೂಚನೆ ನೀಡಿದರು.