ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ 10 ಸಂಖ್ಯೆಯ ಸಚಿವ ಸಂಪುಟದಲ್ಲಿ ಕುರುಬ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 

ಬೆಂಗಳೂರು(ಮೇ.21): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ಸಚಿವ ಸಂಪುಟದಲ್ಲಿ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ಕಲ್ಪಿಸಲು ಯತ್ನಿಸಲಾಗಿದ್ದು, ಲಿಂಗಾಯತ, ಒಕ್ಕಲಿಗ, ಕುರುಬ, ಹಿಂದುಳಿದ ವರ್ಗಗಳು, ಮುಸ್ಲಿಂ, ಕ್ರಿಶ್ಚಿಯನ್‌ ಸಮುದಾಯಕ್ಕೂ ಪ್ರಾಶಸ್ತ್ಯ ನೀಡಲಾಗಿದೆ. ಆದರೆ ಸಂಖ್ಯಾಬಲ ಪರಿಗಣಿಸಿದರೆ ಪ್ರಥಮ ಸುತ್ತಿನಲ್ಲಿ ಪರಿಶಿಷ್ಟ ಜಾತಿಗೆ ಒತ್ತು ನೀಡಲಾಗಿದೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ 10 ಸಂಖ್ಯೆಯ ಸಚಿವ ಸಂಪುಟದಲ್ಲಿ ಕುರುಬ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನುಳಿದಂತೆ ಡಾ.ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ, ಪ್ರಿಯಾಂಕ್‌ ಖರ್ಗೆ ಪರಿಶಿಷ್ಟಜಾತಿಗೆ ಸೇರಿದ್ದು ಈ ಸಮುದಾಯಕ್ಕೆ ಹೆಚ್ಚು ಸ್ಥಾನ ನೀಡಲಾಗಿದೆ. ಇದರಲ್ಲಿ ಪರಿಶಿಷ್ಟಬಲಗೈ ಸಂಪುಟದಿಂದ ಪರಮೇಶ್ವರ್‌ ಹಾಗೂ ಪ್ರಿಯಾಂಕ ಖರ್ಗೆ ಅವರಿಗೆ ಅವಕಾಶ ದೊರೆತಿದ್ದರೆ, ಎಡಗೈ ಸಮುದಾಯದಿಂದ ಮುನಿಯಪ್ಪ ಅವರು ಸಂಪುಟ ಸೇರ್ಪಡೆಯಾಗಿದ್ದಾರೆ.

ಇವರೆ ನೋಡಿ ಸಿದ್ದರಾಮಯ್ಯ ಸರ್ಕಾರದ ನೂತನ ಸಚಿವರು..!

ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್‌, ರೆಡ್ಡಿ ಒಕ್ಕಲಿಗ ಸಮುದಾಯದ ರಾಮಲಿಂಗಾರೆಡ್ಡಿ, ಪರಿಶಿಷ್ಟಪಂಗಡದಿಂದ ಸತೀಶ್‌ ಜಾರಕಿಹೊಳಿ, ಕ್ರಿಶ್ಚಿಯನ್‌ ಸಮುದಾಯದಿಂದ ಕೆ.ಜೆ.ಜಾರ್ಜ್‌, ಮುಸ್ಲಿಂ ಸಮುದಾಯದಿಂದ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಯಾವ ಜಾತಿಗೆ ಎಷ್ಟು?

ಕುರುಬ- 1
ಒಕ್ಕಲಿಗ -1
ಪರಿಶಿಷ್ಟಎಡಗೈ -1
ಪರಿಶಿಷ್ಟಬಲಗೈ -2
ಎಸ್‌.ಟಿ. (ನಾಯಕ)-1
ಲಿಂಗಾಯತ -1
ಮುಸ್ಲಿಂ-1
ಕ್ರೈಸ್ತ-1
ರೆಡ್ಡಿ ಸಮುದಾಯ -1