'ನಿರಾಣಿ ಕುಟುಂಬದ 3ನೇ ವ್ಯಕ್ತಿ ರಾಜಕೀಯಕ್ಕೆ ಬರಲ್ಲ'
* ಪ್ರತಿ 100 ಕಿಮೀಗೆ ವಿಮಾನ ನಿಲ್ದಾಣ
* ಮೊದಲ ಸ್ಥಾನದಲ್ಲಿ ಕರ್ನಾಟಕ
* ರಾಯಚೂರಿನಲ್ಲಿ ಒಂದು ಸಾವಿರ ಕೋಟಿ ವೆಚ್ಚದಲ್ಲಿ ಮೆಗಾ ಡ್ರಗ್ ಪಾರ್ಕ್ ಸ್ಥಾಪನೆ
ಬೆಳಗಾವಿ(ಜೂ.01): ಪ್ರಧಾನ ಮಂತ್ರಿ ಮೋದಿ ಸೇರಿದಂತೆ ಪಕ್ಷದ ವರಿಷ್ಠರು ಹೇಳಿದಂತೆ ಕುಟುಂಬ ರಾಜಕಾರಣ ಮಾಡುವುದಿಲ್ಲ. ನಿರಾಣಿ ಕುಟುಂಬದಿಂದ ಈಗಾಗಲೇ ಇಬ್ಬರು ರಾಜಕಾರಣದಲ್ಲಿದ್ದು, ನನ್ನ ಗಮನಕ್ಕೆ ಇಲ್ಲದೇ ಮೂರನೇ ವ್ಯಕ್ತಿ ರಾಜಕಾರಣಕ್ಕೆ ಬಂದಲ್ಲಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಸ್ಪಷ್ಟಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ, ಪಕ್ಷದ ವರಿಷ್ಠರ ಸೂಚನೆ ಹಾಗೂ ಪಕ್ಷದ ಸಿದ್ಧಾಂತಕ್ಕೆ ನಿರಾಣಿ ಕುಟುಂಬ ಬದ್ಧವಾಗಿದೆ. ಈಗಾಗಲೇ ನಾನು ಹಾಗೂ ನನ್ನ ಸಹೋದರ ಹಣಮಂತ ನಿರಾಣಿ ಸಕ್ರಿಯವಾಗಿ ರಾಜಕಾರಣದಲ್ಲಿದ್ದೇವೆ. ಇನ್ನು ನಮ್ಮ ಕುಟುಂಬದಿಂದ ಮೂರನೇ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಲು ಬಿಡುವುದಿಲ್ಲ. ಒಂದು ವೇಳೆ ನನ್ನ ಗಮನಕ್ಕೆ ಇಲ್ಲದೇ ಅಥವಾ ನನ್ನ ಸೂಚನೆ ಮೀರಿ ರಾಜಕೀಯಕ್ಕೆ ಬಂದಲ್ಲಿ ಆ ಕ್ಷಣವೇ ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.
Belagavi: ಸುವರ್ಣ ವಿಧಾನಸೌಧ ಎದುರು 'ಶಾವಿಗೆ' ಒಣಹಾಕಿದ ಮಹಿಳೆ: ಫೋಟೋ ವೈರಲ್
ವಿಪ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರು ನಿರ್ಧರಿಸಿ ಶಿಕ್ಷಕರ ಕ್ಷೇತ್ರದಿಂದ ಅರುಣ ಶಹಾಪೂರ ಅವರನ್ನು ಮೂರನೇ ಬಾರಿಗೆ ಹಾಗೂ ಪದವೀಧರ ಕ್ಷೇತ್ರದಿಂದ ಹಣಮಂತ ನಿರಾಣಿ ಅವರನ್ನು ಎರಡನೇ ಬಾರಿಗೆ ಕಣಕ್ಕಿಳಿಸಿದ್ದಾರೆ. ಹಣಮಂತ ನಿರಾಣಿ ಅವರು ಕ್ಷೇತ್ರದ ಎಲ್ಲ ಕಡೆಗಳಲ್ಲಿಯೂ ಸಂಪರ್ಕ ಸಾಧಿಸಿ, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜತೆಗೆ ಒಂದು ಲಕ್ಷ ಮತದಾರರು ನೋಂದಣಿ ಮಾಡಿಸಿದ್ದು, ಈ ಪೈಕಿ 60 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡು ಬಹುಮತದಿಂದ ಆಯ್ಕೆ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ ಶಿಕ್ಷಕರ ಕ್ಷೇತ್ರದಿಂದ ಅರುಣ ಶಹಾಪೂರ ಅವರು, ಪರಿಷತ್‌ನಲ್ಲಿ ಶಿಕ್ಷಕರ ಸಮಸ್ಯೆ ಕುರಿತು ಧ್ವನಿ ಎತ್ತಿದ್ದಾರೆ. ಜತೆಗೆ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದ್ದರಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೊದಲ ಸ್ಥಾನದಲ್ಲಿ ಕರ್ನಾಟಕ:
ವರ್ಡ್ ಎಕಾನಮಿ ಫೋರಂನವರು ಮತ್ತು ಎಫ್‌ಡಿಐನವರು ಮಾಡಿದ ಸರ್ವೆಯಲ್ಲಿ ನಾಲ್ಕು ತ್ರೈಮಾಸಿಕದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದೇವೆ. ಇದರಲ್ಲಿ ಶೇ.42ರಷ್ಟುನಮ್ಮ ಶೇರ್ ಇದೆ. ಇನ್ನುಳಿದ ಶೇ.58ರಷ್ಟು ಶೇರ್‌ನಲ್ಲಿ 30 ರಾಜ್ಯಗಳ ಪಾಲುದಾರಿಕೆ ಇದೆ. ಕಾಂಗ್ರೆಸ್‌ನವರು ಇದ್ದಾಗ ಉದ್ಯಮಗಳಿಗೆ ನಿಗದಿಪಡಿಸಲಾಗಿದ್ದ ಜಾಗವನ್ನು ಡಿನೋಟಿಫೈ ಮಾಡಿದ್ದರಿಂದ ಉದ್ಯಮಿಗಳು ರಾಜ್ಯದ ಕಡೆಗೆ ಆಸಕ್ತಿ ಹೊಂದಿರಲಿಲ್ಲ. ಇದರಿಂದ ಕಳೆದ ಐದು ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಕಿಡಿಕಾರಿದರು.
ಕಲ್ಯಾಣ ಕರ್ನಾಟಕ ಭಾಗದ ರಾಯಚೂರಿನಲ್ಲಿ ಒಂದು ಸಾವಿರ ಕೋಟಿ ವೆಚ್ಚದಲ್ಲಿ ಮೆಗಾ ಡ್ರಗ್ ಪಾರ್ಕ್ ಸ್ಥಾಪಿಸಲಾಗುವುದು. ಜತೆಗೆ ವಿಜಯಪುರ ಅಥವಾ ಕಲಬುರ್ಗಿಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಎರಡು ಜಿಲ್ಲೆಗಳ ಪೈಕಿ ಒಂದು ಜಿಲ್ಲೆಗಾದರೂ ಮಂಜೂರು ಸಿಗಲಿದೆ. ಕೈಗಾರಿಕೆಗಾಗಿ ನವೆಂಬರ್‌ದೊಳಗೆ ರಾಜ್ಯ ಸರ್ಕಾರದ ಬಳಿ 50 ಸಾವಿರ ಎಕರೆ ಭೂಮಿ ಇರಲಿದೆ ಎಂದರು.
ಕಾಂಗ್ರೆಸ್‌ನ್ನೇ ನಪುಂಸಕವನ್ನಾಗಿ ಮಾಡಿದ ದೇಶದ ಜನ: ಈರಣ್ಣಾ ಕಡಾಡಿ
ದಾವೋಸ್ ಪ್ರವಾಸದ ಕುರಿತು ಮಾಹಿತಿ ನೀಡಿದ ಸಚಿವರು, ಸಿಎಂ ಮತ್ತು ನಾವು ಹಿರಿಯ ಅಧಿಕಾರಿಗಳೊಂದಿಗೆ ದಾವೋಸ್ ಆರ್ಥಿಕ ಶೃಂಗ ಸಭೆಯಲ್ಲಿ ಭಾಗವಹಿಸಿದ್ದೆವು. ಇಲ್ಲಿ .65 ಸಾವಿರ ಕೋಟಿ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. .80 ಸಾವಿರ ಕೋಟಿಗಿಂತಲೂ ಹೆಚ್ಚಿನ ಹೂಡಿಕೆ ಬಗ್ಗೆ ಚರ್ಚೆಯಾಗಿದೆ. ಇನ್ನು ನ.2, 3, 4ರಂದು ಮೂರು ದಿನಗಳಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಜಗತ್ತಿನ 400ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ಸಾಧ್ಯತೆಯಿದೆ. ಬೆಂಗಳೂರು ಹೊರತುಪಡಿಸಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಆರಂಭಿಸಿದ್ದೇವೆ. ಇದರಿಂದ ಸಾಕಷ್ಟುನಿರುದ್ಯೋಗ ಸಮಸ್ಯೆ ಕಡಿಮೆಯಾಗಲಿದೆ ಎಂದರು.
ಪ್ರತಿ 100 ಕಿಮೀಗೆ ವಿಮಾನ ನಿಲ್ದಾಣ!
ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆ ಇದೆ. ಆಮದು ಮತ್ತು ರಫ್ತು ಮಾಡುವ ನಿಟ್ಟಿನಲ್ಲಿ ಪ್ರತಿ 100 ಕಿಮೀಗೆ ಒಂದರಂತೆ ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಈಗಾಗಲೇ 9 ಕಡೆಗಳಲ್ಲಿ ವಿಮಾನ ನಿಲ್ದಾಣ ಇವೆ. ಬಾದಾಮಿ, ರಾಯಚೂರ ಹಾಗೂ ಚಿಕ್ಕಮಗಳೂರಿಗೆ ವಿಮಾನ ನಿಲ್ದಾಣ ಸ್ಥಾಪಿಸಿದ್ದಲ್ಲಿ ರಾಜ್ಯದಲ್ಲಿ ಒಟ್ಟು 12 ವಿಮಾನ ನಿಲ್ದಾಣಗಳಾಗುತ್ತವೆ. ಅಲ್ಲದೇ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಿದಲ್ಲಿ ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆ, ನಗರಗಳಿಗೆ ಉತ್ತಮ ಸಂಪರ್ಕ ಸಾಧಿಸುವ ಜತೆಗೆ ಕೈಗಾರಿಕಾ ಕ್ಷೇತ್ರಕ್ಕೂ ಸಹಕಾರಿಯಾಗಲಿದೆ. ಆದ್ದರಿಂದ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸಿದ್ದು, ಸರ್ಕಾರವೂ ಆಸಕ್ತಿ ಹೊಂದಿದೆ ಎಂದು ತಿಳಿಸಿದರು.