Asianet Suvarna News Asianet Suvarna News

ರಾಜ್ಯಸಭೆಯ 4ನೇ ಸ್ಥಾನಕ್ಕೆ 3 ಪಕ್ಷಗಳಿಂದ ಪೈಪೋಟಿ..!

*   ಕುತೂಹಲ ಮೂಡಿಸಿದ ಮತಗಳ ಲೆಕ್ಕಾಚಾರ
*  ಅಭ್ಯರ್ಥಿ ಕಣಕ್ಕಿಳಿಸಿದರೆ ಬಿಜೆಪಿ ಗೆಲುವು ಸಾಧ್ಯ: ತಜ್ಞರು
*  ಕಾಂಗ್ರೆಸ್‌ಗೆ 2ನೇ, ಜೆಡಿಎಸ್‌ಗೆ 1ನೇ ಅಭ್ಯರ್ಥಿ ಗೆಲುವು ಕಷ್ಟ
 

3 Parties Contesting for Rajya Sabha 4th Seat grg
Author
Bengaluru, First Published May 31, 2022, 4:38 AM IST

ಬೆಂಗಳೂರು(ಮೇ.31):  ರಾಜ್ಯಸಭೆಯ ನಾಲ್ಕನೇ ಸ್ಥಾನವನ್ನು ಪಡೆಯಲು ಯಾವುದೇ ಒಂದು ಪಕ್ಷಕ್ಕೆ ಅಗತ್ಯ ಮತಗಳ ಬಲ ಇಲ್ಲದಿರುವುದರಿಂದ ಆ ಸ್ಥಾನ ಯಾರ ಪಾಲಾಗುತ್ತದೆ ಎಂಬ ಕುತೂಹಲ ತೀವ್ರವಾಗಿದೆ.

ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್‌ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಜೆಡಿಎಸ್‌ ಮಂಗಳವಾರ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬಹುತೇಕ ನಿಶ್ಚಿತವಾಗಿದೆ. ಈ ನಡುವೆ ಆಡಳಿತಾರೂಢ ಬಿಜೆಪಿಯೂ ತನ್ನ ಮೂರನೇ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಚಿಂತನೆ ನಡೆಸಿರುವುದರಿಂದ ಸಂಖ್ಯಾಬಲದ ಲೆಕ್ಕಾಚಾರ ಪ್ರಾರಂಭವಾಗಿದೆ.

ಒಟ್ಟು ನಾಲ್ಕು ಸ್ಥಾನಗಳ ಪೈಕಿ ಬಿಜೆಪಿ ಎರಡು, ಕಾಂಗ್ರೆಸ್‌ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಲಿವೆ. ಆದರೆ, ನಾಲ್ಕನೇ ಸ್ಥಾನಕ್ಕೆ ಮೂರು ಪಕ್ಷಗಳಿಗೂ ಅಗತ್ಯ ಮತಗಳು ಇಲ್ಲವಾಗಿದೆ. ಬಿಜೆಪಿಯು ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದರೆ ಮತಗಳ ಮೌಲ್ಯದ ಆಧಾರದ ಮೇಲೆ ಗೆಲುವು ಸಾಧಿಸಬಹುದು. ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಗೆಲುವು ಸಾಧ್ಯವಿಲ್ಲ ಎಂಬುದು ರಾಜಕೀಯ ತಜ್ಞರ ಅಭಿಮತವಾಗಿದೆ.

Rajya Sabha Election: ಕಾಂಗ್ರೆಸ್‌ನಿಂದ ಜೈರಾಂ, ಮನ್ಸೂರ್‌ ನಾಮಪತ್ರ!

ವಿಧಾನಸಭೆಯ ಸಂಖ್ಯಾಬಲವು 225 ಇದೆ. ಈ ಪೈಕಿ ನಾಮನಿರ್ದೇಶನಗೊಂಡವರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತದಾನದ ಅಧಿಕಾರ ಇಲ್ಲ. 224ರಲ್ಲಿ ಬಿಜೆಪಿ 119, ಕಾಂಗ್ರೆಸ್‌ 69, ಜೆಡಿಎಸ್‌ 32, ಬಿಎಸ್‌ಪಿ 1, ಪಕ್ಷೇತರರು 2, ಸ್ಪೀಕರ್‌ ಮತ 1 ಇದೆ. ಈ ಪೈಕಿ ಬಿಎಸ್‌ಪಿ 1 (ಎನ್‌.ಮಹೇಶ್‌) ಮತ್ತು ಪಕ್ಷೇತರ 1 (ನಾಗೇಶ್‌) ಮತ ಬಿಜೆಪಿಗೆ ಹಾಕುವುದರಿಂದ ಒಟ್ಟು 121 ಮತಗಳಾಗಿವೆ. ಪಕ್ಷೇತರ 1 (ಶರತ್‌ ಬಚ್ಚೇಗೌಡ) ಮತ ಕಾಂಗ್ರೆಸ್‌ ಪಡೆಯುವುದರಿಂದ ಒಟ್ಟು 70 ಮತಗಳಾಗಲಿವೆ. ಚುನಾವಣೆಗೆ ಒಬ್ಬ ಅಭ್ಯರ್ಥಿ ಜಯಗಳಿಸಲು ಕನಿಷ್ಠ 45 ಮತಗಳ ಅಗತ್ಯ ಇದೆ. ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಲು 90ಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಳ್ಳಲಿದೆ. ಇನ್ನುಳಿದ 31 ಮತಗಳನ್ನು ಚಲಾಯಿಸಿದ ಬಳಿಕ ಎರಡನೇ ಪ್ರಾಶಸ್ತ್ಯ ದ ಮತಗಳಿಗೆ ಅವಕಾಶ ನೀಡಲಾಗುತ್ತದೆ.

ಒಂದು ವೇಳೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಎರಡನೇ ಪ್ರಾಶಸ್ತ್ಯದಲ್ಲಿ ಪಕ್ಷದ ಸದಸ್ಯರು ಮತ ಚಲಾಯಿಸಲಿದ್ದು, ಮತಗಳ ಮೌಲ್ಯದ ಆಧಾರದ ಮೇಲೆ ಜಯಗಳಿಸಬಹುದಾಗಿದೆ. ಕಾಂಗ್ರೆಸ್‌ಗೆ 70 ಮತಗಳಲ್ಲಿ 45 ಮತ್ತು 25 ಮತಗಳು ಮೊದಲ ಪ್ರಾಶಸ್ತ್ಯದಲ್ಲಿ ಸಿಗಲಿವೆ. ಈಗಾಗಲೇ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಎರಡನೇ ಪ್ರಾಶಸ್ತ್ಯದ ಮತದ ಮೌಲ್ಯಯು ಬಿಜೆಪಿಗಿಂತ ಕಡಿಮೆಯಾಗಲಿದೆ. ಅಲ್ಲದೆ, ಜೆಡಿಎಸ್‌ನಲ್ಲಿ 32 ಶಾಸಕರ ಮೊದಲ ಪ್ರಾಶಸ್ತ್ಯದ ಮತಗಳನ್ನು ಮಾತ್ರ ಪಡೆದು ಅಭ್ಯರ್ಥಿ ಗೆಲುವು ಸಾಧಿಸುವುದು ಕಷ್ಟಕರವಾಗಲಿದೆ. ಒಂದು ವೇಳೆ ಜೆಡಿಎಸ್‌ ಸದಸ್ಯರು ಅಡ್ಡಮತದಾನ ಮಾಡಿದರೆ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಗೆಲುವು ಸಾಧಿಸುವ ಅವಕಾಶ ಸಿಗಲಿದೆ ಎಂದು ಮೂಲಗಳು ಹೇಳಿವೆ.
 

Follow Us:
Download App:
  • android
  • ios