ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲಲೇಬೇಕು. ಇಷ್ಟೆಲ್ಲಾ ಮಾಡಿಯೂ ಗೆಲ್ಲದೆ ಹೋದರೆ ಅದು ನಮಗೆ ಹಿನ್ನಡೆಯಾಗಲಿದೆ. 28 ಸ್ಥಾನಕ್ಕೆ ಕನಿಷ್ಠ 26 ಸೀಟು ಗೆಲ್ಲಬೇಕು. ಜನರ ನಾಡಿ ಮಿಡಿತ ನಮ್ಮ ಪರವಾಗಿರುವುದರಿಂದ ಅಪಪ್ರಚಾರದಿಂದ ನಾವು ಯಾರೂ ಹತಾಶರಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ಬೆಂಗಳೂರು (ಜ.13): ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲಲೇಬೇಕು. ಇಷ್ಟೆಲ್ಲಾ ಮಾಡಿಯೂ ಗೆಲ್ಲದೆ ಹೋದರೆ ಅದು ನಮಗೆ ಹಿನ್ನಡೆಯಾಗಲಿದೆ. 28 ಸ್ಥಾನಕ್ಕೆ ಕನಿಷ್ಠ 26 ಸೀಟು ಗೆಲ್ಲಬೇಕು. ಜನರ ನಾಡಿ ಮಿಡಿತ ನಮ್ಮ ಪರವಾಗಿರುವುದರಿಂದ ಅಪಪ್ರಚಾರದಿಂದ ನಾವು ಯಾರೂ ಹತಾಶರಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

4.5 ಕೋಟಿ ಫಲಾನುಭವಿಗಳಿಗೆ ಶೀಘ್ರ ಗ್ಯಾರಂಟಿ ಸ್ಮಾರ್ಟ್‌ಕಾರ್ಡ್‌: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಟ್ರಂಪ್‌ ಕಾರ್ಡ್‌ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಸಲುವಾಗಿ 4.5 ಕೋಟಿ ಫಲಾನುಭವಿಗಳಿಗೆ ಗ್ಯಾರಂಟಿ ಸ್ಮಾರ್ಟ್‌ ಕಾರ್ಡ್ ವಿತರಣೆ ಸೇರಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಲು ಕಾಂಗ್ರೆಸ್‌ ಪಕ್ಷ ನಿರ್ಧಾರ ಮಾಡಿದೆ. ಜತೆಗೆ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ, ಜಿಲ್ಲಾ ಹಾಗೂ ವಿಧಾನಸಭಾ ಮಟ್ಟದ ಗ್ಯಾರಂಟಿ ಯೋಜನಾ ಫಲಾನುಭವಿಗಳ ಸಮಾವೇಶ ನಡೆಸುವುದು. 

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಸೋಲು: ಜನಾರ್ದನ ರೆಡ್ಡಿ

ಪ್ರತಿ ಮನೆ-ಮನೆಗೂ ಕಾಂಗ್ರೆಸ್‌ ಸಾಧನೆಗಳನ್ನು ತಲುಪಿಸುವ ‘ಮನೆ-ಮನೆಗೆ ಕಾಂಗ್ರೆಸ್‌’ ಕಾರ್ಯಕ್ರಮ ರೂಪಿಸುವುದು, ಸೂಕ್ತ ಅಭ್ಯರ್ಥಿ ಆಯ್ಕೆಗೆ ಮೂರು ಹಂತದ ಸಮೀಕ್ಷೆ ನಡೆಸುವುದು ಸೇರಿ ಹಲವು ಮಹತ್ವದ ನಿರ್ಧಾರ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.

4.5 ಕೋಟಿ ಸ್ಮಾರ್ಟ್‌ ಕಾರ್ಡ್ ವಿತರಣೆ: ಪ್ರಸಕ್ತ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದೆ 38,000 ಕೋಟಿ ರು. ಹಣವನ್ನು ನೇರವಾಗಿ 4.30 ಕೋಟಿ ಜನ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಯುವನಿಧಿ ಅನುಷ್ಠಾನದ ಬಳಿಕ 4.50 ಕೋಟಿ ಜನ ಫಲಾನುಭವಿಗಳಿಗೆ ಯೋಜನೆ ತಲುಪಲಿದ್ದು, ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನೇ ಟ್ರಂಪ್‌ ಕಾರ್ಡ್‌ ಆಗಿ ಇಟ್ಟುಕೊಂಡು ಜನರ ಮುಂದೆ ಹೋಗಬೇಕು ಎಂದು ನಿರ್ಧರಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಗ್ಯಾರಂಟಿ ಯೋಜನೆಗಳ ಲಾಭವನ್ನು ಪಕ್ಷಕ್ಕೆ ತಲುಪಿಸಲು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸ್ಮಾರ್ಟ್ ಗುರುತಿನ ಚೀಟಿ ನೀಡಲು ಚರ್ಚಿಸಿದ್ದೇವೆ. ಅದನ್ನು ಕಾರ್ಯಕರ್ತರ ಕೈಯಿಂದಲೇ ಹಂಚಿಕೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಘೋಷಿಸಿದರು.

ಮನೆ-ಮನೆಗೆ ಕಾಂಗ್ರೆಸ್‌: ಜತೆಗೆ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಮನೆ-ಮನೆಗೂ ತಲುಪಿಸಲು ಮನೆ-ಮನೆಗೂ ಕಾಂಗ್ರೆಸ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರಡಿ ಗ್ಯಾರಂಟಿ ಸೇರಿದಂತೆ ಸರ್ಕಾರದ ಸಾಧನೆಗಳನ್ನು ಕರಪತ್ರದ ಮೂಲಕ ಮನೆ ಮನೆಗೂ ತಲುಪಿಸಲು ನಿರ್ಧರಿಸಲಾಗಿದೆ.

ಜ.21ಕ್ಕೆ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶ: ಯುವನಿಧಿಗೆ ಜ.12 ರಂದು ವಿವೇಕಾನಂದರ ಜಯಂತಿ ದಿನ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು. ಇನ್ನು ಗ್ಯಾರಂಟಿ ಯೋಜನೆಗಳ ಬಗ್ಗೆ ಜನಾಭಿಪ್ರಾಯ ಮೂಡಿಸಲು ಜಿಲ್ಲಾ ಮಟ್ಟ ಹಾಗೂ ವಿಧಾನಸಭಾ ಮಟ್ಟದಲ್ಲಿ ಫಲಾನುಭವಿಗಳ ಸಭೆ ನಡೆಸಬೇಕು. ಜತೆಗೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಜ.21 ರಂದು ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಬೇಕು ಎಂದು ತೀರ್ಮಾನಿಸಲಾಗಿದೆ.

ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕರು, ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ಮುಖಂಡರು, ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು, ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದವರು, ಸೋತವರು, ಬೂತ್‌ ಮಟ್ಟದ ಪ್ರತಿನಿಧಿಗಳನ್ನು ಸೇರಿಸಲು ಸಭೆಯಲ್ಲಿ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದ್ದಾರೆ. ಜತೆಗೆ ಎರಡು ದಿನದಲ್ಲಿ ಸಮಾವೇಶದ ರೂಪುರೇಷೆಗಳನ್ನು ಅಂತಿಮಗೊಳಿಸುವುದಾಗಿಯೂ ತಿಳಿಸಿದ್ದಾರೆ.

ವಿವಿಧ ಸಮಿತಿಗಳಿಗೆ ಕಾರ್ಯಕರ್ತರ ನೇಮಕ: ಮೂರು ವಾರದ ಒಳಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಹಿತ ನಿಗಮ-ಮಂಡಳಿ ಹಾಗೂ ಎಲ್ಲಾ ರೀತಿಯ ಸಮಿತಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಬೇಕು. ಜಿಲ್ಲಾಧ್ಯಕ್ಷರು ಹಾಗೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಂಗಳಾಂತ್ಯದ ಒಳಗಾಗಿ ಜಿಲ್ಲಾ ಮಂತ್ರಿಗಳು ನಾಮ ನಿರ್ದೇಶನ ಮಾಡಿ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದು ಶಿವಕುಮಾರ್ ಸೂಚಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರ ಆಹ್ವಾನದಲ್ಲಿ ರಾಜಕಾರಣ ಸಲ್ಲ: ಸಂಸದ ಪ್ರಜ್ವಲ್ ರೇವಣ್ಣ

ಕ್ಷೇತ್ರ ಮಟ್ಟದಲ್ಲಿ ಚುನಾವಣೆ ಸಿದ್ಧತೆ: ಸಂಸತ್‌ ಚುನಾವಣೆ ದೃಷ್ಟಿಯಿಂದ ಪ್ರತಿ ಜಿಲ್ಲೆಗೂ ಒಬ್ಬ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಗುರುವಾರ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಾಲ್ಕು ರಾಜ್ಯಗಳ ಸಚಿವರ ಸಭೆ ಕರೆಯಲಾಗಿದೆ. ಅಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಿಳಿಸಲಿದ್ದಾರೆ. ಸಚಿವರ ಕೆಳಗೆ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್‌ ಸದಸ್ಯರನ್ನು ನಿಯೋಜಿಸಿದ್ದೇವೆ. ಬ್ಲಾಕ್‌ ಮಟ್ಟದಲ್ಲಿ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ, ಬಿಎಲ್‌ಎಗಳ ನೇಮಕ ಮಾಡಲಾಗುವುದು.