7 ಕಡೆ ಬಾಹ್ಯ ಬೆಂಬಲ, 5 ಕಡೆ ಯಾವುದೇ ಸ್ಪರ್ಧೆ ಇಲ್ಲ, ನಾಮಪತ್ರ ಕೊನೆ ದಿನ ಜೆಡಿಎಸ್ 4ನೇ ಪಟ್ಟಿ ಬಿಡುಗಡೆ, ಬಿಜೆಪಿ ತೊರೆದ ಮಾಲಕರೆಡ್ಡಿ, ಕಾಂಗ್ರೆಸ್ಸಿನ ಮೊಹಿದ್ದೀನ್ ಬಾವಾಗೆ ಟಿಕೆಟ್ ಘೋಷಣೆ.
ಬೆಂಗಳೂರು(ಏ.21): ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಗುರುವಾರ ಜೆಡಿಎಸ್ ತನ್ನ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು, 13 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಮೂಲಕ ಜೆಡಿಎಸ್ ಒಟ್ಟು 224 ಕ್ಷೇತ್ರಗಳ ಪೈಕಿ 211 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಮತ್ತು ಏಳು ಕ್ಷೇತ್ರದಲ್ಲಿ ಇತರರಿಗೆ ಬಾಹ್ಯ ಬೆಂಬಲ ನೀಡಿದೆ.
ಆಡಳಿತಾರೂಢ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿರುವ ಎ.ಬಿ.ಮಾಲಕರೆಡ್ಡಿ, ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ಬೇಸರಗೊಂಡು ಪಕ್ಷಕ್ಕೆ ಬಂದಿರುವ ಮೊಹಿದ್ದೀನ್ ಬಾವಾಗೆ ಟಿಕೆಟ್ ನೀಡಲಾಗಿದೆ. ನಾಮಪತ್ರದ ಕೊನೆ ದಿನ ಬಿಡುಗಡೆಯಾಗಿರುವ ನಾಲ್ಕನೇ ಪಟ್ಟಿಯ ಅಭ್ಯರ್ಥಿಗಳು ಬಿ ಫಾರಂ ಪಡೆದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನನ್ನ ವೋಟು ನನ್ನ ಮಾತು: ಹುಣೂಸೂರು ಮತದಾರರು ಹೇಳೋದೇನು?
ಹಿರಿಯ ನಾಯಕ ಎ.ಬಿ.ಮಾಲಕರೆಡ್ಡಿ ಯಾದಗಿರಿ ಕ್ಷೇತ್ರ, ಮೊಹಿದ್ದೀನ್ ಬಾವಾ ಮಂಗಳೂರು ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇನ್ನುಳಿದಂತೆ ಗೋಕಾಕ್ ಕ್ಷೇತ್ರದಿಂದ ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರ, ಕಿತ್ತೂರು ಕ್ಷೇತ್ರದಿಂದ ಅಶ್ವಿನಿ ಸಿಂಗಯ್ಯ ಪೂಜೇರಾ, ಭಾಲ್ಕಿಯಿಂದ ರೌಫ್ ಪಟೇಲ್, ಶಿಗ್ಗಾಂವ್‌ನಿಂದ ಶಶಿಧರ್ ಚನ್ನಬಸಪ್ಪ ಯಲಿಗಾರ, ಮೊಳಕಾಲ್ಮೂರು ಕ್ಷೇತ್ರದಿಂದ ಮಹಾದೇವಪ್ಪ, ಪುಲಕೇಶಿನಗರದಿಂದ ಅನುರಾಧಾ, ಶಿವಾಜಿನಗರದಿಂದ ಅಬ್ದುಲ್ಲಾ ಜಫರ್ ಅಲಿ, ಶಾಂತಿನಗರದಿಂದ ಮಂಜುನಾಥ್‌ಗೌಡ, ಬೆಳ್ತಂಗಡಿಯಿಂದ ಅಶ್ರಫ್ ಆಲಿ ಕುಂಇ…, ಮಂಗಳೂರು ಕ್ಷೇತ್ರದಿಂದ ಅಲ್ತಾಫ್ ಕುಂಪಾಲ, ಬಂಟ್ವಾಳದಿಂದ ಪ್ರಕಾಶ್ ರಫಾಯಲ್ ಗೊಮ್ಸ್ ಹೆಸರು ಪ್ರಕಟಿಸಲಾಗಿದೆ.
ದಳದಿಂದ 55 ಒಕ್ಕಲಿಗರಿಗೆ ಟಿಕೆಟ್ 41 ಲಿಂಗಾಯತ, 44 ಎಸ್ಸಿ, ಎಸ್ಟಿ, 23 ಮುಸ್ಲಿಂರಿಗೆ ಟಿಕೆಟ್
ಇನ್ನು ಟಿಕೆಟ್ ಹಂಚಿಕೆಯಲ್ಲಿ ಜಾತಿವಾರು ಗಮನಿಸಿದರೆ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಒಕ್ಕಲಿಗ ಸಮುದಾಯಕ್ಕೆ 55, ಲಿಂಗಾಯತರಿಗೆ 41, ಪರಿಶಿಷ್ಟಜಾತಿಗೆ 33, ಪರಿಶಿಷ್ಟಪಂಗಡಕ್ಕೆ 13, ಮುಸ್ಲಿಮರಿಗೆ 23 ಮಂದಿಗೆ ಟಿಕೆಟ್ ನೀಡಲಾಗಿದೆ. ಹಿಂದುಳಿದ ವರ್ಗದ 31 ಮಂದಿಗೆ ಅವಕಾಶ ಒದಗಿಸಲಾಗಿದೆ. ಈ ಪೈಕಿ ಕುರುಬ 10, ಈಡಿಗ-7, ಉಪ್ಪಾರ, ಬಲಿಜಿಗ ಸಮುದಾಯದ ತಲಾ ಇಬ್ಬರಿಗೆ, ನೇಕಾರ, ಮಡಿವಾಳ, ಕೋಲಿ, ಕ್ಷತಿಯ, ನಾಯ್ಡು, ತಿಗಳ, ಕುಂಬಾರ, ಅಕ್ಕಸಾಲಿಗ, ನಾಯ್ಡು, ಕೊಂಕಣಿ ಸಮುದಾಯಕ್ಕೆ ತಲಾ ಒಬ್ಬರಿಗೆ ಟಿಕೆಟ್ ನೀಡಲಾಗಿದೆ. ಇತರೆ ವರ್ಗದಲ್ಲಿ 15 ಮಂದಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಮರಾಠ - 5, ಬಂಟ್ಸ್ - 4, ಜೈನ್, ಬ್ರಾಹ್ಮಣ, ಜಿಎಸ್‌ಬಿ, ರೆಡ್ಡಿ, ಕೊಡವ, ಕ್ರಿಶ್ಚಿಯನ್ ಸಮುದಾಯದ ತಲಾ ಒಬ್ಬರಿಗೆ ಟಿಕೆಟ್ ನೀಡಲಾಗಿದೆ. ಒಟ್ಟು 13 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
