ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಚುನಾವಣೆಗೆ ಕಾಂಗ್ರೆಸ್ ಭರವಸೆ!
ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗುವ ಮುನ್ನವೇ ರಾಜ್ಯದ ಜನರಿಗೆ ಕಾಂಗ್ರೆಸ್ ದೊಡ್ಡ ಭರವಸೆ ಘೋಷಿಸಿದೆ. ಹಾಗೇನಾದರೂ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಪ್ರತಿ ಮನೆಗೆ 200 ಯುನಿಟ್‌ಗಳ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದೆ.

ಬೆಳಗಾವಿ (ಜ.11): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ, ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ರಾಜ್ಯ ಕಾಂಗ್ರೆಸ್ ಭರವಸೆ ನೀಡಿದೆ. ಚಿಕ್ಕೋಡಿಯ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಭಾಷಣದ ವೇಳೆ ಈ ಭರವಸೆ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಲ್ಲಿ ಏನೆಲ್ಲಾ ಬದಲಾವಣೆ ಮಾಡಲಿದೆ ಎನ್ನುವ ಐದು ಭರವಸೆಗಳನ್ನು ಡಿಕೆ ಶಿವಕುಮಾರ್ ಈ ವೇಳೆ ಹೇಳಿದ್ದಾರೆ. ಮುಂಬರುವ ಚುನಾವಣೆಗೂ ಮುನ್ನ ಒಟ್ಟು ನಾವು ಐದು ಗ್ಯಾರಂಟಿ ಕೊಡುತ್ತೇವೆ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ. ಪ್ರತಿ ಮನೆಗೂ 200 ಯೂನಿಟ್ ಉಚಿತ ನೀಡಲಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಿದ್ದೇವೆ ಎಂದು ತಿಳಿಸಿದರು. ಮೊದಲ ಭರವಸೆ ಪ್ರಕಟಿಸಿ ವೇದಿಕೆ ಮೇಲೆಯೇ ಈ ಕುರಿಯಾದ ಭಿತ್ತಿಪತ್ರವನ್ನೂ ಕೈ ನಾಯಕರು ಬಿಡುಗಡೆ ಮಾಡಿದರು. ಭಾಷಣ ಮಧ್ಯೆ ಎಲ್ಲ ನಾಯಕರ ಕೈಯಲ್ಲಿ ತಮ್ಮ ಮೊದಲ ಭರವಸೆಯ ಭಿತ್ತಿ ಪತ್ರ ಪ್ರಕಟವಾಗಿದೆ. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ. ನುಡಿದಂತೆ ನಡೆದಿದ್ದೇವೆ, ನುಡಿದಂತೆ ನಡೆಯುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.