ಬೆಂಗಳೂರು (ಫೆ.03):  ತಮ್ಮ ಪಕ್ಷದ ಶಾಸಕರಲ್ಲಿನ ಒಳಬೇಗುದಿ ಹೋಗಲಾಡಿಸಿ ಅವರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ರಾತ್ರಿ ತಮ್ಮ ನಿವಾಸದಲ್ಲಿ ಭೋಜನ ಕೂಟ ಆಯೋಜಿಸಿದ್ದರು.

ಕೆಲವು ಅಸಮಾಧಾನಿತ ಶಾಸಕರನ್ನು ಹೊರತುಪಡಿಸಿ ಬಹುತೇಕ ಎಲ್ಲ ಶಾಸಕರೂ ಆಗಮಿಸಿ ಭೋಜನ ಸ್ವೀಕರಿಸಿದ್ದಲ್ಲದೆ, ಮುಖ್ಯಮಂತ್ರಿಗಳೊಂದಿಗೆ ಲೋಕಾಭಿರಾಮವಾಗಿ ಚರ್ಚೆ ನಡೆಸಿ ನಿರ್ಗಮಿಸಿದರು.

ವಿಧಾನಮಂಡಲದ ಅಧಿವೇಶನ ಹಿನ್ನೆಲೆಯಲ್ಲಿ ಎಲ್ಲ ಶಾಸಕರೂ ನಗರದಲ್ಲೇ ಇರುವುದರಿಂದ ಇದನ್ನು ಬಳಸಿಕೊಂಡು ಶಾಸಕರಿಗೆ ಭೋಜನ ಕೂಟ ಏರ್ಪಡಿಸುವ ಮೂಲಕ ಅವರೊಂದಿಗೆ ಉಂಟಾಗಿರುವ ಅಂತರವನ್ನು ಕಡಮೆ ಮಾಡಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯತ್ನಿಸಿದರು. ಆದರೆ, ಇದು ಯಶಸ್ವಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕು.

ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ: ಕುತೂಹಲ ಮೂಡಿಸಿದ ಬಿಎಸ್‌ವೈ ನಡೆ ...

ನಿಗಮ- ಮಂಡಳಿಗಳ ನೇಮಕದ ಬಳಿಕ ಪಕ್ಷದ ಅನೇಕ ಶಾಸಕರು ಅಸಮಾಧಾನಗೊಂಡಿದ್ದರು. ಅಲ್ಲದೆ, ಸಚಿವ ಸ್ಥಾನದ ಆಕಾಂಕ್ಷಿ ಶಾಸಕರೂ ಅಲ್ಲಲ್ಲಿ ಸಭೆ ಸೇರಿ ಚರ್ಚೆ ನಡೆಸುವ ಮೂಲಕ ಅತೃಪ್ತಿ ಹೊರಹಾಕಿದ್ದರು. ಕೆಲವು ಶಾಸಕರು ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಬಹಿರಂಗವಾಗಿಯೇ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಹೊಸ ವರ್ಷದ ಮೊದಲ ವಾರದಲ್ಲಿ ಎರಡು ದಿನಗಳ ಕಾಲ ವಿಭಾಗವಾರು ಪಕ್ಷದ ಶಾಸಕರ ಸತತ ಸಭೆ ನಡೆಸಿ ಅವರ ಅಹವಾಲು ಆಲಿಸುವ ಪ್ರಯತ್ನ ಮಾಡಿದ್ದರು.

ಆದರೂ ಸಂಪುಟ ವಿಸ್ತರಣೆ ನಡೆದ ಬಳಿಕ ಪಕ್ಷದ ಮೂಲ ಶಾಸಕರಲ್ಲಿನ ಒಳಬೇಗುದಿ ಮತ್ತಷ್ಟುಹೆಚ್ಚಾಯಿತು. ಹೀಗಾಗಿ ಶಾಸಕರು ಭೋಜನ ಕೂಟದ ನೆಪದಲ್ಲಿ ಪ್ರತ್ಯೇಕ ಸಭೆ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿದವು. ಹೀಗಾಗಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ತಾವೇ ಭೋಜನ ಕೂಟ ಆಯೋಜಿಸಲು ಯಡಿಯೂರಪ್ಪ ಮುಂದಾದರು ಎನ್ನಲಾಗಿದೆ.

ಯತ್ನಾಳ್‌ ಸೇರಿ ಕೆಲವರು ಗೈರು

ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್‌, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಜಿ.ಎಚ್‌.ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ, ಅರವಿಂದ್‌ ಬೆಲ್ಲದ್‌ ಸೇರಿ 20ಕ್ಕೂ ಹೆಚ್ಚು ಮಂದಿ ಮುಖ್ಯಮಂತ್ರಿಗಳ ಭೋಜನ ಕೂಟಕ್ಕೆ ಗೈರು ಹಾಜರಾಗಿದ್ದರು.