ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಪಕ್ಷದ ಸ್ಕೋರ್‌ ಹೆಚ್ಚಾದರೆ ರೇಸ್‌ನಲ್ಲಿ ಮುಂಚೂಣಿಯಾಗಲು ಸಾಧ್ಯ. ಹೀಗಾಗಿ ಬೆಂಬಲಿಸಿ ಎಂದು ನೇರವಾಗಿ ಒಕ್ಕಲಿಗ ಸಮುದಾಯವನ್ನು ಕೋರ ತೊಡಗಿದ್ದಾರೆ.

ಎಸ್‌.ಗಿರೀಶ್‌ ಬಾಬು

ಬೆಂಗಳೂರು(ಜು.20): ಇದುವರೆಗೂ ಚುನಾವಣೆಗೆ ಸಾಮೂಹಿಕ ನಾಯಕತ್ವ, ಗೆದ್ದ ನಂತರ ಗಾದಿ ಯಾರಿಗೆ ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂಬಂತಹ ಹೇಳಿಕೆ ಮೂಲಕ ಮುಗುಂ ಆಗಿ ಸಂಘಟನೆಯಲ್ಲಿ ತೊಡಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಠಾತ್‌ ಗೇರ್‌ ಬದಲಿಸಿ ಡ್ರೈವಿಂಗ್‌ ಸೀಟ್‌ಗೆ ತಾವೂ ಹಕ್ಕುದಾರ ಎಂದು ಮೈಸೂರಿನಲ್ಲಿ ಅತ್ಯಂತ ಸ್ಪಷ್ಟವಾಗಿ ಘೋಷಿಸಿಕೊಂಡಿದ್ದಾರೆ.

ತನ್ಮೂಲಕ ಪಕ್ಷ, ಸಮುದಾಯ ಹಾಗೂ ಹೈಕಮಾಂಡ್‌ಗೆ ಎರಡು ಪ್ರಮುಖ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ.

ಡಿಕೆಶಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆ: ಶ್ರೀರಾಮಲು ಹೇಳಿದ್ದಿಷ್ಟು

1. ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮಾತ್ರವಲ್ಲ, ತಾವು ಕೂಡ ದಾವೆದಾರ.
2. ಒಕ್ಕಲಿಗ ಸಮುದಾಯದ ನಾಯಕತ್ವ ವಹಿಸಿಕೊಳ್ಳಲು ಪಕ್ವ ಕಾಲವಿದು. ಈ ಹಿಂದೆ ಎಸ್‌.ಎಂ. ಕೃಷ್ಣ ಬೆನ್ನಿಗೆ ನಿಂತಂತೆ ಈಗ ನನ್ನ ಬೆನ್ನೆಲುಬಾಗಿ ಎಂದು ನೇರವಾಗಿ ಸಮುದಾಯವನ್ನು ಕೋರುವುದು.
ಡಿ.ಕೆ. ಶಿವಕುಮಾರ್‌ ಅವರು ಹೀಗೆ ಮುಂದಾಗಲು ಮುಖ್ಯ ಕಾರಣ- ಪಕ್ಷ ಹಾಗೂ ಸ್ವತಃ ತಾವು ಹಲವು ಹಂತದಲ್ಲಿ ನಡೆಸಿರುವ ಸಮೀಕ್ಷೆಗಳಲ್ಲಿ ಒಕ್ಕಲಿಗ ಸಮುದಾಯದ ಗ್ರಾಮೀಣ ಭಾಗದ ಮತಗಳು ಈ ಬಾರಿ ಜೆಡಿಎಸ್‌ನಿಂದ ಶಿಫ್ಟ್‌ ಲಕ್ಷಣಗಳಿವೆ ಎಂಬ ಅಂಶ ಗೋಚರವಾಗಿರುವುದು.

ಆದರೆ, ಹೀಗೆ ಜೆಡಿಎಸ್‌ನಿಂದ ಪಲ್ಲಟಗೊಳ್ಳುವ ಈ ಮತಗಳು ಯಾವ ಪಕ್ಷಕ್ಕೆ ಹೋಗಬಹುದು ಎಂಬುದರ ಸ್ಪಷ್ಟತೆ ಸಿಗುತ್ತಿಲ್ಲ. ಇದು ಕಾಂಗ್ರೆಸ್‌ ಕಡೆಗೆ ಬರಬೇಕು ಎಂದರೆ ಗಟ್ಟಿಯಾಗಿ ಸಮುದಾಯದ ನಾಯಕತ್ವವನ್ನು ಕ್ಲೇಮ್‌ ಮಾಡಬೇಕು ಎಂಬ ಚಿಂತನೆ ಶಿವಕುಮಾರ್‌ ಬಣದಲ್ಲಿ ಮೂಡಿದೆ.

ಇದೇ ವೇಳೆ ಸಿದ್ದರಾಮಯ್ಯ ಅವರ ಜನ್ಮ ದಿನದ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದರಿಂದ ಹಾಗೂ ಬೆಂಬಲಿಗರು ಸಿದ್ದರಾಮಯ್ಯ ಅವರನ್ನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿರುವುದರಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬಹುದು ಎಂಬ ಸಂದೇಶ ರವಾನೆಯಾಗುತ್ತಿದೆ. ಇದರಿಂದ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮತಗಳು ಪಕ್ಷದ ಪರವಾಗಿ ಕ್ರೋಢೀಕರಣಗೊಳ್ಳುತ್ತಿರುವ ಬಗ್ಗೆ ಕಾಂಗ್ರೆಸ್‌ ನಾಯಕತ್ವಕ್ಕೆ ಸಂತೋಷವೇ ಇದೆ.

ಆದರೆ, ಈ ಸಂದೇಶದಿಂದ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳು ಪಕ್ಷದಿಂದ ವಿಮುಖವಾಗಬಹುದು ಎಂಬ ಸಂಶಯವೂ ನಾಯಕತ್ವಕ್ಕೆ ಇದೆ. ಇನ್ನು ಗ್ರಾಮೀಣ ಮಟ್ಟದಲ್ಲಿ ಜೆಡಿಎಸ್‌ನಿಂದ ವಿಮುಖವಾಗುತ್ತಿರುವ ಒಕ್ಕಲಿಗ ಸಮುದಾಯಕ್ಕೆ ಸಿದ್ದರಾಮಯ್ಯ ಅವರೇ ಸಿಎಂ ಎಂಬ ಸಂದೇಶ ದೊರಕಿದರೆ ಆ ಮತಗಳು ಬಿಜೆಪಿಯತ್ತ ವಾಲಬಹುದು ಎಂಬ ಚಿಂತೆಯಿದೆ. ಹೀಗಾಗಿ, ಡಿ.ಕೆ. ಶಿವಕುಮಾರ್‌ ಅವರು ಎಸ್‌.ಎಂ. ಕೃಷ್ಣ ಅವರ ಉದಾಹರಣೆಯನ್ನು ಮುಂದಿಟ್ಟುಕೊಂಡು ತಾವು ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಬಲವಾಗಿಯೇ ಇದ್ದೇನೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಪಕ್ಷದ ಸ್ಕೋರ್‌ ಹೆಚ್ಚಾದರೆ ರೇಸ್‌ನಲ್ಲಿ ಮುಂಚೂಣಿಯಾಗಲು ಸಾಧ್ಯ. ಹೀಗಾಗಿ ಬೆಂಬಲಿಸಿ ಎಂದು ನೇರವಾಗಿ ಒಕ್ಕಲಿಗ ಸಮುದಾಯವನ್ನು ಕೋರ ತೊಡಗಿದ್ದಾರೆ.

ಈಗ ಈ ಪ್ರತಿಪಾದನೆ ಏಕೆ?:

ತಾವು ಒಕ್ಕಲಿಗ ಸಮುದಾಯದ ನಾಯಕ ಅಷ್ಟೇ ಅಲ್ಲ ಎಲ್ಲ ಸಮುದಾಯಗಳಿಗೂ ನಾಯಕ ಎಂದು ಆಗಾಗ ಹೇಳುತ್ತಿದ್ದ ಶಿವಕುಮಾರ್‌ ಈಗ ನಿರ್ದಿಷ್ಟಸಮುದಾಯಕ್ಕೆ ಸಂದೇಶ ನೀಡಲು ಇದೇ ಸಮಯವನ್ನು ಆಯ್ಕೆ ಮಾಡಿದ್ದು ಏಕೆ ಎಂಬುದಕ್ಕೆ ಉತ್ತರ ಸಿದ್ದರಾಮೋತ್ಸವಕ್ಕೆ ರಾಹುಲ್‌ ಗಾಂಧಿ ಆಗಮನ!

ಸಿದ್ದರಾಮಯ್ಯ ಬಣದ ಶಕ್ತಿ ಪ್ರದರ್ಶನದ ಅಖಾಡವಾಗಿರುವ ಈ ವೇದಿಕೆಯಲ್ಲಿ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ನೀಡುವ ಸಂದೇಶ ಅತಿ ಮುಖ್ಯವಾಗುತ್ತದೆ. ಯಾವುದೇ ಭಿನ್ನ ರಾಗವಿಲ್ಲದೆ ಸರಾಗವಾಗಿ ಈ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಹರಸಿ ದೆಹಲಿಗೆ ತೆರಳಿದರೆ ಅದು ಸಿದ್ದರಾಮಯ್ಯ ಪರ ಸ್ಪಷ್ಟಸಂದೇಶವಾಗಿ ಬಿಡುತ್ತದೆ. ಹೀಗಾಗಿ, ಸಿಎಂ ಹುದ್ದೆಗೆ ತಾವೂ ದಾವೆದಾರ ಎಂದು ರಾಜ್ಯದ ಜನತೆಗೆ ಮಾತ್ರವಲ್ಲದೆ ಹೈಕಮಾಂಡ್‌ಗೂ ಸ್ಪಷ್ಟವಾಗಿ ಹೇಳುವ ಕಾಲವಿದು ಎಂಬುದು ಶಿವಕುಮಾರ್‌ ಅವರ ಬಣ ಭಾವನೆ.

ಒಕ್ಕಲಿಗರ ಕಾರ್ಯಕ್ರಮದಲ್ಲಿ ಸಿಎಂ ಆಗುವ ಆಸೆ ಬಿಚ್ಚಿಟ್ಟ ಡಿಕೆಶಿಗೆ ಎಚ್‌ಡಿಕೆ ಡಿಚ್ಚಿ

ಏಕೆಂದರೆ, ಇತ್ತೀಚೆಗೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಗೆ ಹೈಕಮಾಂಡ್‌ ಪಕ್ಷವನ್ನು ಮೊದಲು ಅಧಿಕಾರಕ್ಕೆ ತನ್ನಿ, ಅನಂತರ ಮುಖ್ಯಮಂತ್ರಿ ಗಾದಿ ಯಾರಿಗೆ ಎಂಬುದನ್ನು ನೋಡೋಣ. ಸಿಎಂ ರೇಸ್‌ ವಿಚಾರ ಪ್ರಸ್ತಾಪವಾಗದಂತೆ ಬೆಂಬಲಿಗರಿಗೆ ತಾಕೀತು ಮಾಡಿ ಎಂದು ನೇರವಾಗಿ ಹೇಳಿತ್ತು.

ಇಷ್ಟಾಗಿಯೂ ಸಿದ್ದರಾಮಯ್ಯ ಬಣ ತಮ್ಮ ನಾಯಕನನ್ನು ಅತ್ಯಂತ ಸ್ಪಷ್ಟವಾಗಿ ಮುಖ್ಯಮಂತ್ರಿ ಹುದ್ದೆಯ ಮುಂಚೂಣಿ ದಾವೆದಾರ ಎಂದೇ ಬಿಂಬಿಸುತ್ತಿದೆ. ಈಗ ಪ್ರತಿಪಾದನೆ ಮಾಡದಿದ್ದರೆ ತುಂಬಾ ತಡವಾಗಬಹುದು ಎಂಬ ಭಾವನೆ ಶಿವಕುಮಾರ್‌ ಬಣದಲ್ಲಿ ಪ್ರಬಲವಾಗಿ ಮೂಡಿದೆ. ಹೀಗಾಗಿಯೇ ಇದೇ ಅಸಲಿ ಬಯಕೆಯನ್ನು ಬಹಿರಂಗಕ್ಕಿಡಲು ಡಿ.ಕೆ. ಶಿವಕುಮಾರ್‌ ಬಣ ನಿರ್ಧರಿಸಿದಂತಿದೆ.