ಉಡುಪಿ, (ನ.17): ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ವಿರೋಧಿ ನೀತಿಗಳನ್ನನುಸರಿಸುತಿದ್ದು, ಅವುಗಳ ವಿರುದ್ಧ ದೇಶದಾದ್ಯಂತ 2 ಕೋಟಿ ಸಹಿ ಸಂಗ್ರಹ ಮಾಡಿ, ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಭೂ ಮಸೂದೆ ಕಾಯ್ದೆ ತಿದ್ದುಪಡಿˌಕಾರ್ಮಿಕ ಕಾಯ್ದೆ ತಿದ್ದುಪಡಿ ಮತ್ತು ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ವಿರುದ್ಧ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.

BSYಗೆ ತಲೆನೋವಾದ ಮರಾಠಿ, IPL ಆಯೋಜಿಸಿದ ದುಬೈಗೆ 100 ಕೋಟಿ; ನ.17ರ ಟಾಪ್ 10 ಸುದ್ದಿ!

ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲೆಯ 1111 ಬೂತ್ ಗಳಲ್ಲಿ 1 ಲಕ್ಷ ಮಂದಿಯ ಸಹಿ ಸಂಗ್ರಹ ಮಾಡಿದ್ದು, ಅದನ್ನು ಕೆಪಿಸಿಸಿಗೆ ಸಲ್ಲಿಸಲಾಗುತ್ತದೆ. ರಾಜ್ಯದ ಇತರ ಜಿಲ್ಲೆಗಳಿಂದಲೂ ಸಹಿಗಳನ್ನು ಸಂಗ್ರಹಿಸಿ ಎಐಸಿಸಿಗೆ ಸಲ್ಲಿಸಲಾಗುತ್ತದೆ.  ದೇಶದ ಇತರ ರಾಜ್ಯಗಳಿಂದಲೂ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸಿ ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಲಾಗುತ್ತದೆ ಎಂದರು.

 ಸಹಿಗಳ ಬೃಹತ್ ಸಂಗ್ರಹವನ್ನು ಬನ್ನಂಜೆಯಿಂದ ಕಲ್ಸಂಕ ತನಕ ಸುಮಾರು 1 ಕಿಮೀ ಮೆರವಣಿಗೆಯಲ್ಲಿ ಪ್ರದರ್ಶನ ನಡೆಸಲಾಯಿತು. 
ಬಳಿಕ ಸಿಟಿಬಸ್ ಸ್ಟ್ಯಾಂಡ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಈ ಸಂಗ್ರಹವನ್ನು ಸಲೀಂ ಅಹ್ಮದ್ ಅವರಿಗೆ ಹಸ್ತಾಂತರಿಸಿದರು.

 ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪಕ್ಷದ ನಾಯಕರಾದ ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ವೆರೋನಿಕಾ ಕರ್ನೆಲಿಯೋ, ಸುನೀತಾ ಶೆಟ್ಟಿ, ರೋಶನಿ ಒಲಿವರ್, ನಾಗೇಶ್ ಉದ್ಯಾವರ, ಸರಸು ಬಂಗೇರಾ, ಗೀತಾ ವಾಗ್ಲೆ, ಸುನೀಲ್ ಬಂಗೇರಾ, ಪ್ರಶಾಂತ್ ಜತ್ತನ್ನ, ಕೀರ್ತಿ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.