Asianet Suvarna News Asianet Suvarna News

ಬೆಂಗಳೂರು: 15 ದಲಿತ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ

ಕಾಂಗ್ರೆಸ್‌ ಕೇವಲ ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲ. ಜಾತಿ, ಅಸ್ಪೃಶ್ಯತೆ ವಿರುದ್ಧವೂ ಹೋರಾಟ ಮಾಡಿಕೊಂಡು ಬಂದಿದೆ. ಈ ಶೋಷಿತ ಸಮುದಾಯಗಳನ್ನು ಮೇಲೆತ್ತಲು ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್‌ ಒಳಗೊಂಡಂತೆ ಅನೇಕ ಮಹನೀಯರು ಶ್ರಮಿಸಿದ್ದಾರೆ. ಆದರೆ, ಈಗಲೂ ದಲಿತರಿಗೆ ಸಂಕಷ್ಟ ಮುಂದುವರಿದಿದೆ: ಸುರ್ಜೇವಾಲ 

15 Dalit leaders join Congress in Bengaluru grg
Author
First Published Mar 22, 2023, 2:30 AM IST

ಬೆಂಗಳೂರು(ಮಾ.22):  ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಂಗಳವಾರ ವಿವಿಧ ಸಂಘಟನೆಗಳ ಸುಮಾರು 15ಕ್ಕೂ ಹೆಚ್ಚು ದಲಿತ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಸೇರ್ಪಡೆಗೊಂಡರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ, ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಕೇಂದ್ರ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಸಮ್ಮುಖದಲ್ಲಿ ಬಿಎಸ್‌ಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಿ. ಗೋಪಾಲ್‌, ದಲಿತ ಸಂಘರ್ಷ ಸಮಿತಿ ಸಂಚಾಲಕ ಎಚ್‌. ಶ್ರೀನಿವಾಸ್‌, ಎಂಆರ್‌ಎಚ್‌ಎಸ್‌ ರಾಜ್ಯ ಮುಖಂಡ ಅಂಬಣ್ಣ ಅರೋಳಿಕರ ಸೇರಿದಂತೆ ಎಡ ಮತ್ತು ಬಲ ಸಮುದಾಯಗಳ ಹಲವು ದಲಿತ ನಾಯಕರು ಕಾಂಗ್ರೆಸ್‌ ಸೇರಿದರು.

ಎಲ್ಲಿ ಸ್ಪರ್ಧಿಸುತ್ತಾರೆ ಮಾಜಿ ಸಿಎಂ ಸಿದ್ದರಾಮಣ್ಣ? ಚಾಮರಾಜನಗರದತ್ತ ವಿ ಸೋಮಣ್ಣ!

ಸೇರ್ಪಡೆಗೊಂಡ ದಲಿತ ಮುಖಂಡರು

ಅಂಬಣ್ಣ ಅರೋಳಿಕರ, ಎಚ್‌. ಶ್ರೀನಿವಾಸ, ಮಾರೀಶ ನಾಗಣ್ಣವರ, ಸಣ್ಣ ಮಾರೆಣ್ಣ, ವೆಂಕಟೇಶ ಆಲೂರ, ಎ. ನರಸಿಂಹಮೂರ್ತಿ, ಬಿ. ಮರಿಸ್ವಾಮಿ ಕೊಟ್ಟೂರ, ಮುರಳೀಧರ ಮೇಲಿನಮನಿ, ಹಠವಾದಿ ಲಕ್ಷ್ಮಣ, ವಿಜಯಕುಮಾರ, ತಿಮ್ಮಪ್ಪ ಅಲ್ಕೂರ, ರಾಜಣ್ಣ, ಉಡುಚಪ್ಪ ಮಾಳಗಿ, ಮುನಿಕೃಷ್ಣಯ್ಯ, ಯಲ್ಲಪ್ಪ ಗೊರಮಗೊಳ್ಳ, ಮಾರುತಿ ರಂಗಾಪುರಿ, ಎಚ್‌.ಪಿ. ಸುಧಾಮ ದಾಸ್‌, ಬಿ. ಗೋಪಾಲ್‌, ಎ.ಡಿ. ಈಶ್ವರಪ್ಪ, ಪಂಡಿತ ಮುನಿವೆಂಕಟಪ್ಪ, ಪ್ರಭಾಕರ ಛಲವಾದಿ ತೇರದಾಳ, ಶಿವಪ್ಪ ದಿಣ್ಣೆಕೆರೆ.

ಈ ಸಂದರ್ಭದಲ್ಲಿ ಮಾತನಾಡಿದ ಸುರ್ಜೇವಾಲ, ‘ಕಾಂಗ್ರೆಸ್‌ ಕೇವಲ ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲ. ಜಾತಿ, ಅಸ್ಪೃಶ್ಯತೆ ವಿರುದ್ಧವೂ ಹೋರಾಟ ಮಾಡಿಕೊಂಡು ಬಂದಿದೆ. ಈ ಶೋಷಿತ ಸಮುದಾಯಗಳನ್ನು ಮೇಲೆತ್ತಲು ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್‌ ಒಳಗೊಂಡಂತೆ ಅನೇಕ ಮಹನೀಯರು ಶ್ರಮಿಸಿದ್ದಾರೆ. ಆದರೆ, ಈಗಲೂ ದಲಿತರಿಗೆ ಸಂಕಷ್ಟ ಮುಂದುವರಿದಿದೆ. ಇದುವರೆಗೆ ಹೊರಗಿನಿಂದ ಶೋಷಿತರ ಪರ ಹೋರಾಟ ಮಾಡುತ್ತಿದ್ದ ದಲಿತ ನಾಯಕರು, ಈಗ ಕಾಂಗ್ರೆಸ್‌ ಸೇರ್ಪಡೆಗೊಳ್ಳುವ ಮೂಲಕ ಹೋರಾಟ ಮುಂದುವರಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಪಕ್ಷ ಸೂಕ್ತ ಜವಾಬ್ದಾರಿ ನೀಡಿ ಅವರೆಲ್ಲರ ಸೇವೆಯನ್ನು ಬಳಸಿಕೊಳ್ಳುತ್ತದೆ’ ಎಂದರು.

ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಮಾತನಾಡಿ, ‘ದಲಿತ ಸಮುದಾಯಗಳಿಗೆ ನ್ಯಾಯ ಕಲ್ಪಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದು ದಲಿತ ನಾಯಕರಿಗೆ ಮನವರಿಕೆಯಾಗಿದೆ. ಇದರ ಫಲವಾಗಿ ಈ ಮೊದಲು ವಿವಿಧ ಸಂಘಟನೆಗಳ ಮೂಲಕ ಹೋರಾಟ ಮಾಡುತ್ತಿದ್ದ ದಲಿತ ನಾಯಕರು, ಕಾಂಗ್ರೆಸ್‌ ಸೇರ್ಪಡೆಗೊಂಡು ಇನ್ನಷ್ಟುಗಟ್ಟಿಯಾಗಿ ತಮ್ಮ ಹೋರಾಟ ಮುಂದುವರೆಸಲು ತೀರ್ಮಾನಿಸಿದ್ದಾರೆ’ ಎಂದರು. ಈ ವೇಳೆ ಮಾಜಿ ಸಚಿವ ಎಚ್‌. ಆಂಜನೇಯ ಮತ್ತಿತರ ನಾಯಕರು ಉಪಸ್ಥಿತರಿದ್ದರು.

Follow Us:
Download App:
  • android
  • ios