ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್ಸಿಂದ 14 ಮಂದಿ ಸಿದ್ಧ
ರಾಜ್ಯದ ಸಿಎಂ ತವರು ಕ್ಷೇತ್ರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಮತ್ತೊಮ್ಮೆ ಈ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವುದು ಬಹುತೇಕ ನಿಶ್ಚಿತವಾಗಿದ್ದು, ಕ್ಷೇತ್ರಕ್ಕೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿದೆ.
ನಾರಾಯಣ ಹೆಗಡೆ
ಹಾವೇರಿ (ಫೆ.09): ರಾಜ್ಯದ ಸಿಎಂ ತವರು ಕ್ಷೇತ್ರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಮತ್ತೊಮ್ಮೆ ಈ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವುದು ಬಹುತೇಕ ನಿಶ್ಚಿತವಾಗಿದ್ದು, ಕ್ಷೇತ್ರಕ್ಕೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿದೆ. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹರಿಸಿದ ಅನುದಾನದ ಹೊಳೆ, ಸಿಎಂ ಪ್ರತಿನಿಧಿಸುವ ಕ್ಷೇತ್ರ ಎಂಬ ಅಂಶ ಬಿಜೆಪಿಗೆ ನೆಲೆ ಭದ್ರಗೊಳಿಸಿದ್ದರೆ, ಎದುರಾಳಿ ಕಾಂಗ್ರೆಸ್‌ನಲ್ಲಿ ಹೊಂದಾಣಿಕೆ ಇಲ್ಲದಿರುವುದು ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಬೊಮ್ಮಾಯಿ ಪಾಲಿಗೆ ವರದಾನವಾಗಿ ಪರಿಣಮಿಸಿದೆ.
ಪಕ್ಷದ ಟಿಕೆಟ್‌ಗಾಗಿ ಬೊಮ್ಮಾಯಿಗೆ ಕ್ಷೇತ್ರದಲ್ಲಿ ಪೈಪೋಟಿಯಿಲ್ಲ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಬೊಮ್ಮಾಯಿಗೆ ಟಕ್ಕರ್ ಕೊಡಲು ಕಾಂಗ್ರೆಸ್‌ನಿಂದ 14 ಅಭ್ಯರ್ಥಿಗಳು ರೆಡಿಯಾಗಿದ್ದಾರೆ. ಬೊಮ್ಮಾಯಿ ಎದುರು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಅವರನ್ನು ಕ್ಷೇತ್ರದಲ್ಲೇ ಕಟ್ಟಿಹಾಕಲು ಕಾಂಗ್ರೆಸ್ ತಂತ್ರ ರೂಪಿಸುವ ಸಾಧ್ಯತೆಯಿದೆ. ಹಿಂದಿನ ಮೂರು ಚುನಾವಣೆಗಳಲ್ಲಿ ಬೊಮ್ಮಾಯಿಗೆ ಪೈಪೋಟಿ ನೀಡಿದ್ದ ಅಜ್ಜಂಫೀರ್ ಖಾದ್ರಿ ಮತ್ತೊಮ್ಮೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಸತತ ನಾಲ್ಕು ಸೋಲಿನಿಂದ ಕಂಗೆಟ್ಟಿರುವ ಖಾದ್ರಿ ತನಗೇ ಟಿಕೆಟ್ ಎಂಬಂತೆ ಓಡಾಡುತ್ತಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಹೆಸರು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಿಎಂ ಬೊಮ್ಮಾಯಿ
ಮುಸ್ಲಿಂ ಪ್ರಾಬಲ್ಯ ಇರುವುದರಿಂದ ಖಾದ್ರಿ ಬಿಟ್ಟು ಚುನಾವಣೆ ಎದುರಿಸುವ ಪರಿಸ್ಥಿತಿ ಕಾಂಗ್ರೆಸ್ಸಿಗಿಲ್ಲ. ಆದರೆ, ಸತತ ನಾಲ್ಕು ಬಾರಿ ಸೋತವರಿಗೆ ಟಿಕೆಟ್ ನೀಡಲು ಪಕ್ಷದಲ್ಲೇ ವಿರೋಧವಿದೆ. ಖಾದ್ರಿಗೆ ಕೈ ಟಿಕೆಟ್ ತಪ್ಪಿದರೆ ಮುಸ್ಲಿಂ ಮತಗಳು ಕಾಂಗ್ರೆಸ್ ಕೈತಪ್ಪುವ ಆತಂಕವಿದೆ. ಕೈ ಟಿಕೆಟ್ ಸಿಗದಿದ್ದರೆ ಜೆಡಿಎಸ್ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವ ಇರಾದೆಯೂ ಅವರಿಗಿದ್ದು, ಇದು ಕಾಂಗ್ರೆಸ್ಸಿಗೇ ಹೊಡೆತ. ಕಾಂಗ್ರೆಸ್‌ನ ಒಳಜಗಳ ಬೊಮ್ಮಾಯಿಗೆ ವರವಾಗಿ ಪರಿಣಮಿಸಿದೆ. ಸೋಮಣ್ಣ ಬೇವಿನಮರದ, ಶಶಿಧರ ಎಲಿಗಾರ, ಷಣ್ಮುಖ ಶಿವಳ್ಳಿ ಕೈ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಜತೆಗೆ, ಸಂಜೀವಕುಮಾರ ನೀರಲಗಿ, ಯಾಸಿರಖಾನ್ ಪಠಾಣ, ರಾಜೇಶ್ವರಿ ಪಾಟೀಲ, ಶಾಕೀರ ಸನದಿ, ನೂರಮ್ಮದ್ ಮಳಗಿ, ಎಫ್.ಜಿ. ಪಾಟೀಲ, ಎಸ್.ವಿ. ಪಾಟೀಲ ‘ಕೈ’ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕ್ಷೇತ್ರದ ಹಿನ್ನೆಲೆ: ರಾಜ್ಯಕ್ಕೆ ಇಬ್ಬರು ಸಿಎಂಗಳನ್ನು ನೀಡಿದ ಹೆಗ್ಗಳಿಕೆ ಶಿಗ್ಗಾಂವಿ-ಸವಣೂರು ಕ್ಷೇತ್ರಕ್ಕಿದೆ. ಎಸ್.ನಿಜಲಿಂಗಪ್ಪನವರು ಅವಿರೋಧವಾಗಿ ಆಯ್ಕೆಯಾಗಿದ್ದರೆ, ಬೊಮ್ಮಾಯಿ ಮೂರು ಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿ ಈಗ ಸಿಎಂ ಆಗಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಶಿಗ್ಗಾಂವಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಬೊಮ್ಮಾಯಿಗೆ ಕಾಂಗ್ರೆಸ್‌ನ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಪೈಪೋಟಿ ನೀಡಿದ್ದರು. ಬೊಮ್ಮಾಯಿ ಅನಾಯಾಸವಾಗಿ ಗೆಲುವು ಸಾಧಿಸಿ, ಯಡಿಯೂರಪ್ಪ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದರು. 2013ರಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಬಿಜೆಪಿಯಲ್ಲೇ ಉಳಿದ ಬೊಮ್ಮಾಯಿ, ಕಾಂಗ್ರೆಸ್‌ನ ಖಾದ್ರಿ ಎದುರು ಗೆದ್ದರು. 2018ರಲ್ಲಿ ಮತ್ತೆ ಬಿಜೆಪಿಯಿಂದ ಬೊಮ್ಮಾಯಿ, ಕಾಂಗ್ರೆಸ್‌ನಿಂದ ಖಾದ್ರಿ ಕಣಕ್ಕಿಳಿದಿದ್ದರು. ನೇರ ಪೈಪೋಟಿ ಇತ್ತಾದರೂ ಬೊಮ್ಮಾಯಿ ಹ್ಯಾಟ್ರಿಕ್ ಗೆಲುವಿಗೆ ಯಾವುದೇ ಸಮಸ್ಯೆಯಾಗಲಿಲ್ಲ.
ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ
ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಪಂಚಮಸಾಲಿ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕ. ಪಂಚಮಸಾಲಿ ಸಮಾಜದ 65 ಸಾವಿರ ಮತಗಳಿದ್ದರೆ, 50 ಸಾವಿರ ಮುಸ್ಲಿಂ ಮತಗಳಿವೆ. ಎಸ್ಸಿ 20 ಸಾವಿರ, ಎಸ್ಟಿ17 ಸಾವಿರ, ಕುರುಬ 20 ಸಾವಿರ ಮತಗಳಿವೆ. 2ಎ ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ ನಡೆದಿದ್ದರೂ ಇದು ಚುನಾವಣೆ ಮೇಲೆ ಅಷ್ಟಾಗಿ ಪರಿಣಾಮ ಬೀರುವ ಸಾಧ್ಯತೆಯಿಲ್ಲ.