Asianet Suvarna News Asianet Suvarna News

Karnataka Assembly Elections 2023: 224 ಕ್ಷೇತ್ರಕ್ಕೆ ಕಾಂಗ್ರೆಸ್ಸಿಗರಿಂದ 1350 ಅರ್ಜಿ ಸಲ್ಲಿಕೆ..!

ಕೆಪಿಸಿಸಿಗೆ ಭರ್ಜರಿ 20 ಕೋಟಿ ಕಲೆಕ್ಷನ್‌, ಅರ್ಜಿ ಸಲ್ಲಿಕೆ ಅವಧಿ ಅಂತ್ಯ, 8 ಅಪ್ಪ- ಮಕ್ಕಳಿಂದ ಟಿಕೆಟ್‌ಗೆ ಕೋರಿಕೆ

1350 Applications Submitted by Congressmen for 224 Constituencies in Karnataka grg
Author
First Published Nov 22, 2022, 9:00 AM IST

ಬೆಂಗಳೂರು(ನ.22): ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಲು ವಿಧಿಸಿದ್ದ ಗಡುವು ಸೋಮವಾರಕ್ಕೆ ಮುಕ್ತಾಯಗೊಂಡಿದ್ದು, ಬರೋಬ್ಬರಿ 1,350 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್‌ಗಾಗಿ ಒಟ್ಟು 1,450 ಮಂದಿ ಕೆಪಿಸಿಸಿಯಿಂದ ಅರ್ಜಿ ಪಡೆದಿದ್ದರು. ಅರ್ಜಿ ಸಲ್ಲಿಕೆಗೆ ಅಂತಿಮ ದಿನವಾದ ಸೋಮವಾರ ಸಂಜೆ ವೇಳೆಗೆ 1,350 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಎಸ್ಸಿ, ಎಸ್ಟಿಅಭ್ಯರ್ಥಿಗಳಿಗೆ 1 ಲಕ್ಷ ರು. ಹಾಗೂ ಇತರೆ ಅಭ್ಯರ್ಥಿಗಳಿಗೆ 2 ಲಕ್ಷ ರು. ಅರ್ಜಿ ಶುಲ್ಕ ವಿಧಿಸಿದ್ದರಿಂದಾಗಿ ಅರ್ಜಿ ಶುಲ್ಕದಿಂದಲೇ ಕೆಪಿಸಿಸಿಗೆ ಬರೋಬ್ಬರಿ 20 ಕೋಟಿ ರು. ಹಣ ಸಂಗ್ರಹವಾಗಿದೆ.

ಇನ್ನು ಕ್ಷೇತ್ರವಾರು ಅರ್ಜಿ ಸಲ್ಲಿಕೆ ಪೈಕಿ ಶಿವಮೊಗ್ಗ ಕ್ಷೇತ್ರಕ್ಕೆ 20 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪ್ರಸನ್ನ ಕುಮಾರ್‌, ಸುಂದರೇಶ್‌ ಸೇರಿದಂತೆ 20 ಮಂದಿ ಅರ್ಜಿ ಸಲ್ಲಿಸುವ ಮೂಲಕ ಅತಿ ಹೆಚ್ಚು ಮಂದಿ ಅರ್ಜಿ ಸಲ್ಲಿಸಿರುವ ಕ್ಷೇತ್ರದ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಶಿವಮೊಗ್ಗ ನಿಂತಿದೆ. ಇನ್ನು ಅರಸೀಕರೆ ಕ್ಷೇತ್ರದಿಂದ ಒಬ್ಬರೇ ವ್ಯಕ್ತಿ ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ಎಂದರೆ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರೊಬ್ಬರು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

Assembly Election: ಟಿಕೆಟ್‌ ಘೋಷಣೆ ಅಧಿಕಾರ ನಂಗೂ ಇಲ್ಲ, ಸಿದ್ದುಗೂ ಇಲ್ಲ: ಡಿಕೆಶಿ

ಎಂಟು ಅಪ್ಪ-ಮಕ್ಕಳ ಜೋಡಿ:

ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ ಅಪ್ಪ-ಮಕ್ಕಳ ಜೋಡಿ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಶಾಸಕ ವೆಂಕಟರವಣಪ್ಪ ಹಾಗೂ ಅವರ ಪುತ್ರ ವೆಂಕಟೇಶ್‌ ಪಾವಗಡ ಕ್ಷೇತ್ರಕ್ಕೆ, ಮಾಜಿ ಶಾಸಕ ದಿವಾಕರ್‌ಬಾಬು ಹಾಗೂ ಅವರ ಪುತ್ರ ಹನುಮ ಕಿಶೋರ್‌ ಇಬ್ಬರೂ ಬಳ್ಳಾರಿ ಕ್ಷೇತ್ರಕ್ಕೆ, ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರ ಹಾಗೂ ಅವರ ಪುತ್ರ ಸುನೀಲ್‌ ಬೋಸ್‌ ಟಿ. ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಮತ್ತೊಬ್ಬ ಮಾಜಿ ಸಚಿವ ಶಿವಾನಂದ ಪಾಟೀಲ ಅವರು ವಿಜಯಪುರ ನಗರ ಹಾಗೂ ಅವರ ಪುತ್ರಿ ಸಂಯುಕ್ತಾ ಪಾಟೀಲ ಅವರು ಬಸವನ ಬಾಗೇವಾಡಿ ಕ್ಷೇತ್ರ, ಬಿ.ಬಿ.ಚಿಮ್ಮನಕಟ್ಟಿಹಾಗೂ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಅವರು ಬಾದಾಮಿ ಕ್ಷೇತ್ರದ ಟಿಕೆಟ್‌ಗೆ, ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ ಹಾಗೂ ಅವರ ಪುತ್ರ ಅಲ್ಲಂ ಪ್ರಶಾಂತ್‌ ಅವರು ಬಳ್ಳಾರಿ ಕ್ಷೇತ್ರಕ್ಕೆ, ಬೆಂಗಳೂರಿನ ವಿಜಯನಗರ ಕ್ಷೇತ್ರಕ್ಕೆ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜ ನಗರ ಕ್ಷೇತ್ರಕ್ಕೆ ಕೃಷ್ಣಪ್ಪ ಪುತ್ರ ಪ್ರಿಯ ಕೃಷ್ಣ, ರಾಮಲಿಂಗಾರೆಡ್ಡಿ ಬಿಟಿಎಂ ಬಡಾವಣೆ ಹಾಗೂ ಪುತ್ರಿ ಸೌಮ್ಯಾರೆಡ್ಡಿ ಜಯನಗರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Assembly Election: ಹಾಲಿ, ಮಾಜಿಗಳಿಗೆ ಹೊಸ ಮುಖಗಳಿಂದ ಟಕ್ಕರ್‌

ಸಿನಿಮಾ ಕ್ಷೇತ್ರದವರಿಂದಲೂ ಆಸಕ್ತಿ:

ಸಿನಿಮಾ ಮಂದಿ ಚಲನಚಿತ್ರ ನಿರ್ದೇಶಕ ರಾಜಶೇಖರನ್‌ ಕೋಟ್ಯಾನ್‌ ಅವರು ಮೂಡಬಿದ್ರೆ, ಕಾಪು ಎರಡೂ ಕ್ಷೇತ್ರಗಳಿಗೂ ಅರ್ಜಿ ಸಲ್ಲಿಸಿದ್ದಾರೆ. ನಟ, ನಿರ್ದೇಶಕ ಎಸ್‌.ನಾರಾಯಣ್‌ ರಾಜಾಜಿನಗರ, ನಿರ್ಮಾಪಕ ಸಾ.ರಾ.ಗೋವಿಂದ್‌ ರಾಜಾಜಿನಗರ, ನಿರ್ಮಾಪಕ ಸಿ.ಆರ್‌.ಮನೋಹರ್‌ ಕೋಲಾರ, ನಿರ್ಮಾಪಕ ಉಮಾಪತಿ ಗೌಡ ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಬಯಸಿ ಅರ್ಜಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷ ಸೇರಿದ ದಿನವೇ ಅರ್ಜಿ:

ಇನ್ನು ಅರ್ಜಿ ಸಲ್ಲಿಕೆಗೆ ಅಂತಿಮ ದಿನವಾದ ಸೋಮವಾರ ಸಂಜೆ ಪಕ್ಷಕ್ಕೆ ಸೇರಿದ ಯು.ಬಿ. ಬಣಕಾರ್‌ ಹಾಗೂ ಎನ್‌.ಟಿ. ಶ್ರೀನಿವಾಸ್‌ ಅವರು ಅದೇ ದಿನ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಮಾಜಿ ಶಾಸಕರಾದ ಯು.ಬಿ. ಬಣಕಾರ್‌ ಹಿರೇಕೆರೂರು ಕ್ಷೇತ್ರದ ಟಿಕೆಟ್‌ಗೆ, ಎನ್‌.ಟಿ. ಶ್ರೀನಿವಾಸ್‌ ಕೂಡ್ಲಿಗಿ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
 

Follow Us:
Download App:
  • android
  • ios