ಜೈಲಿನಲ್ಲಿರುವವರು, ಪಕ್ಷದಿಂದ ಉಚ್ಚಾಟಿತರಾದವರು, ಕಾಂಗ್ರೆಸ್‌ ನಿಗದಿಪಡಿಸಿರುವ ಅರ್ಹ ವಯಸ್ಸಿಗಿಂತ ಕಿರಿಯರು, 90 ವರ್ಷ ದಾಟಿದ ಹಿರಿಯರು ಹೀಗೆ ತರಹೇವಾರಿ ರೀತಿಯ ಆಕಾಂಕ್ಷಿಗಳು ಕಾಂಗ್ರೆಸ್‌ ಪಕ್ಷದ ವಿಧಾನಸಭೆ ಚುನಾವಣಾ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. 

ಬೆಂಗಳೂರು (ನ.20): ಜೈಲಿನಲ್ಲಿರುವವರು, ಪಕ್ಷದಿಂದ ಉಚ್ಚಾಟಿತರಾದವರು, ಕಾಂಗ್ರೆಸ್‌ ನಿಗದಿಪಡಿಸಿರುವ ಅರ್ಹ ವಯಸ್ಸಿಗಿಂತ ಕಿರಿಯರು, 90 ವರ್ಷ ದಾಟಿದ ಹಿರಿಯರು ಹೀಗೆ ತರಹೇವಾರಿ ರೀತಿಯ ಆಕಾಂಕ್ಷಿಗಳು ಕಾಂಗ್ರೆಸ್‌ ಪಕ್ಷದ ವಿಧಾನಸಭೆ ಚುನಾವಣಾ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈವರೆಗೆ ಬರೋಬ್ಬರಿ 1,200 ಮಂದಿ ಅರ್ಜಿ ಪಡೆದಿದ್ದು, 1,050 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಎಸ್ಸಿ ಹಾಗೂ ಎಸ್ಟಿಸಮುದಾಯದ ಆಕಾಂಕ್ಷಿಗಳಿಗೆ ತಲಾ ಒಂದು ಲಕ್ಷ ರು. ಹಾಗೂ ಇತರೆ ಅರ್ಜಿದಾರರಿಗೆ 2 ಲಕ್ಷ ರು. ಶುಲ್ಕ ನಿಗದಿ ಮಾಡಲಾಗಿತ್ತು. 

ಹೀಗಾಗಿ ಅರ್ಜಿ ಶುಲ್ಕದಿಂದ ಕಾಂಗ್ರೆಸ್‌ಗೆ ಬರೋಬ್ಬರಿ 18 ಕೋಟಿ ರು. ಹಣ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ, ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಮೇಲೆ ಪಿತೂರಿ ನಡೆಸಿದ್ದಾರೆ ಎಂಬ ಕುರಿತು ದಾಖಲಾಗಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್‌ ಅವರು ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಚಿತ್ರದುರ್ಗದಿಂದ ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಶುಲ್ಕವಾಗಿರುವ 2 ಲಕ್ಷ ರು. ಹಣವನ್ನೂ ಸಂದಾಯ ಮಾಡಿದ್ದಾರೆ. 

ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ: ಅಪ್ಪ ಮಕ್ಕಳ ಸಂಖ್ಯೆ 7ಕ್ಕೇರಿಕೆ

ಇನ್ನು ಕಾಂಗ್ರೆಸ್‌ನಿಂದ ಉಚ್ಚಾಟಿತರಾಗಿರುವ ಪಿ. ರಮೇಶ್‌ ಅವರು ಸಿ.ವಿ. ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸಿ.ವಿ. ರಾಮನ್‌ನಗರ ಕ್ಷೇತ್ರದಿಂದ ಸಂಪತ್‌ರಾಜ್‌ಗೆ ಟಿಕೆಟ್‌ ನೀಡಿದ್ದಕ್ಕೆ ಮುನಿಸಿಕೊಂಡು ಪಕ್ಷ ವಿರೋಧಿ ಹೇಳಿಕೆ ನೀಡಿದ್ದ ರಮೇಶ್‌ ಅವರನ್ನು ಕಾಂಗ್ರೆಸ್‌ ಉಚ್ಚಾಟಿಸಿತ್ತು. ಇದರಿಂದ ಅವರು ಜೆಡಿಎಸ್‌ಗೆ ಹೋಗಿ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಕದ ತಟ್ಟಿದ್ದಾರೆ. ದಿವಂಗತ ಮಂಚನಹಳ್ಳಿ ಮಹದೇವ್‌ ಪುತ್ರಿ ಐಶ್ವರ್ಯಾ ಮಹದೇವ್‌ ಅವರು ಕೆ.ಆರ್‌. ನಗರ ಕ್ಷೇತ್ರದಿಂದ ಟಿಕೆಟ್‌ ಬಯಸಿ ಅರ್ಜಿ ಹಾಕಿಕೊಂಡಿದ್ದಾರೆ. 

ಕಾಂಗ್ರೆಸ್‌ನಿಂದ ಟಿಕೆಟ್‌ ನೀಡಲು 35 ವರ್ಷ ವಯಸ್ಸಿನ ಅರ್ಹತೆ ನಿಗದಿಪಡಿಸಿದ್ದರೂ 27 ವರ್ಷದ ಯುವ ನಾಯಕಿ ಹಾಗೂ ಎಐಸಿಸಿ ವಕ್ತಾರೆಯಾಗಿರುವ ಐಶ್ವರ್ಯಾ ಮಹದೇವ್‌ ಅವರು ವಿಶೇಷ ಕೋಟಾದಡಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಇನ್ನು ದಾವಣಗೆರೆಯಿಂದ ಮಾಜಿ ಸಚಿವ ಹಾಗೂ 91 ವರ್ಷ ವಯಸ್ಸಿನ ಶಾಮನೂರು ಶಿವಶಂಕರಪ್ಪ ಅವರು ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಉಳಿದಂತೆ ಮಲ್ಲಾಜಮ್ಮ ಅವರು ಮಳವಳ್ಳಿ ಕ್ಷೇತ್ರಕ್ಕೆ, ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಹೊಸಕೋಟೆಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸದ ಘಟಾನುಘಟಿಗಳು: ಇನ್ನು ಕ್ಷೇತ್ರದ ಗೊಂದಲದಲ್ಲಿರುವ ಸಿದ್ದರಾಮಯ್ಯ ಈವರೆಗೂ ಅರ್ಜಿಯನ್ನೇ ಪಡೆದಿಲ್ಲ. ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಕೆ.ಆರ್‌. ರಮೇಶ್‌ ಕುಮಾರ್‌ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ನ.21ರ ಅಂತಿಮ ಗಡುವನ್ನು ಮತ್ತೆ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಭಾರೀ ಪೈಪೋಟಿ: 7 ಕ್ಷೇತ್ರಕ್ಕೆ 40ಕ್ಕೂ ಹೆಚ್ಚು ಜನರಿಂದ ಅರ್ಜಿ

ಶಿವಮೊಗ್ಗ ಕ್ಷೇತ್ರಕ್ಕೆ ಹೆಚ್ಚು ಅರ್ಜಿ: ಶಿವಮೊಗ್ಗ ನಗರ ಕ್ಷೇತ್ರಕ್ಕೆ 17 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಚಿತ್ರದುರ್ಗ ಕ್ಷೇತ್ರಕ್ಕೆ ಷಣ್ಮುಗಪ್ಪ, ರಘು ಆಚಾರ್‌, ಬಸವರಾಜನ್‌, ವೀರೇಂದ್ರ ಪಪ್ಪಿ ಸೇರಿ 11 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಉಳಿದಂತೆ ಮಂಡ್ಯ 14, ಹರಪನಹಳ್ಳಿ 14, ಶಿವಮೊಗ್ಗ ಗ್ರಾಮೀಣ ಕ್ಷೇತ್ರಕ್ಕೆ 14 ಅರ್ಜಿ ಸಲ್ಲಿಕೆಯಾಗಿದೆ. ಡಿ.ಕೆ. ಶಿವಕುಮಾರ್‌ ಅರ್ಜಿ ಸಲ್ಲಿಸಿರುವ ಕನಕಪುರ ಹಾಗೂ ದಿನೇಶ್‌ ಗುಂಡೂರಾವ್‌ ಅರ್ಜಿ ಸಲ್ಲಿಸಿರುವ ಗಾಂಧಿನಗರ ಕ್ಷೇತ್ರಗಳಿಗೆ ಮಾತ್ರ ತಲಾ ಒಂದೊಂದು ಅರ್ಜಿಯಷ್ಟೇ ಸಲ್ಲಿಕೆಯಾಗಿದೆ. ಇನ್ನು ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೇಟ್‌ ಬಯಸಿ ಏಳು ಮಂದಿ ಅಪ್ಪ-ಮಕ್ಕಳ ಜೋಡಿ ಅರ್ಜಿ ಸಲ್ಲಿಸಿದೆ.