ಮಳೆಪೀಡಿತ ಪ್ರದೇಶಗಳಲ್ಲಿ ಭೂ ಕುಸಿತ ಹಾಗೂ ಹಾನಿಗೊಳಗಾಗದವರಿಗೆ ತುರ್ತು ಪರಿಹಾರಕ್ಕೆ ತಕ್ಷಣ ಒಂದು ಸಾವಿರ ಕೋಟಿ ರು. ಅನುದಾನ ಬಿಡುಗಡೆಗೊಳಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.

ಬೆಂಗಳೂರು (ಮೇ.29): ಮಳೆಪೀಡಿತ ಪ್ರದೇಶಗಳಲ್ಲಿ ಭೂ ಕುಸಿತ ಹಾಗೂ ಹಾನಿಗೊಳಗಾಗದವರಿಗೆ ತುರ್ತು ಪರಿಹಾರಕ್ಕೆ ತಕ್ಷಣ ಒಂದು ಸಾವಿರ ಕೋಟಿ ರು. ಅನುದಾನ ಬಿಡುಗಡೆಗೊಳಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕಳೆದ ಐವತ್ತು ವರ್ಷಗಳ ನಂತರ ಈ ವರ್ಷ ಮುಂಗಾರು ಹದಿನೈದು ದಿನ ಮುಂಚಿತವಾಗಿ ರಾಜ್ಯವನ್ನು ಪ್ರವೇಶಿಸಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಭಾರಿ ಬಿರುಗಾಳಿ, ಮಳೆ ಆಗಿದೆ. ಇದರಿಂದಾಗಿ ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿ ಮಾತ್ರವಲ್ಲದೆ ರೈತರು ಬೆಳೆದ ಹಣ್ಣು ಹಾಗೂ ತರಕಾರಿ ಸೇರಿ ಹಲವು ಬೆಳೆಗಳು ನಾಶವಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಭೂ ಕುಸಿತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಹಾಸನ ಜಿಲ್ಲೆಯ ಪ್ರವಾಸ ನಡೆಸಿ ಮಳೆ ಹಾನಿ ಮತ್ತು ಭೂ ಕುಸಿತ ಸಂಭವಿಸಿದ್ದ ಸಕಲೇಶಪುರ ತಾಲೂಕಿನ ಅನೇಕ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇಷ್ಟೆಲ್ಲ ಪ್ರಕೃತಿ ವಿಕೋಪ ಸಂಭವಿಸಿ ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಂತ್ರಸ್ತರ ಬಳಿಗೆ ಹೋಗಿಯೇ ಇಲ್ಲ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೈ ಸರ್ಕಾರ ಲೂಟಿ: ಬೆಂಗಳೂರಿನಲ್ಲಿ ಕಸದ ಸೆಸ್‌ ಹೆಸರಿನಲ್ಲಿ ಕಾಂಗ್ರೆಸ್‌ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಇಡೀ ಬೆಂಗಳೂರನ್ನು ಸರ್ಕಾರ ದುಬಾರಿ ಮಾಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಣ ಉಳಿದಿಲ್ಲ. ಹಿಂದೆ ಇದ್ದ ತುಘಲಕ್‌ ಕೂಡ ಹಾಕದಷ್ಟು ತೆರಿಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಮೇಲೆ ಹಾಕಿದ್ದಾರೆ. ಕಸ ವಿಲೇವಾರಿ ಮಾಡಲು ಕೂಡ ತೆರಿಗೆ ಹಾಕಲಾಗಿದೆ. 30*40 ಅಡಿ ವಿಸ್ತೀರ್ಣದ ಮನೆಗೆ ₹120 ಇದ್ದ ಕಸದ ತೆರಿಗೆಯನ್ನು ₹720 ಮಾಡಿದ್ದಾರೆ. ಅಂದರೆ ಶೇ.500 ರಷ್ಟು ಹೆಚ್ಚಾಗಿದೆ. ಅಪಾರ್ಟ್‌ಮೆಂಟ್‌ ನಿವಾಸಿಗಳು ಕಸವನ್ನು ಅವರೇ ವಿಲೇವಾರಿ ಮಾಡಿಕೊಳ್ಳುತ್ತಿದ್ದು, ಅವರಿಗೆ ಕಸದ ಸೆಸ್‌ ₹1,800 ರಿಂದ ₹18,000 ಕ್ಕೆ ಹೆಚ್ಚಿಸಲಾಗಿದೆ ಎಂದು ದೂರಿದರು.

ಮಾಲ್‌ಗಳಲ್ಲಿ ₹3,600 ಇದ್ದ ಕಸದ ಸೆಸ್‌ ₹52,500 ಆಗಿದ್ದು, ಶೇ.14,483 ಹೆಚ್ಚಿದೆ. ಆಸ್ಪತ್ರೆಗಳಲ್ಲಿ ಕಸದ ಸೆಸ್‌ ₹9,600 ರಿಂದ ₹2,75,000 ಆಗಿದೆ. 50*80 ವಿಸ್ತೀರ್ಣದ ಖಾಲಿ ನಿವೇಶನಗಳಿಗೆ ₹600 ರಿಂದ ₹5,400 ಆಗಿದೆ. ಕಸವೇ ಉತ್ಪತ್ತಿ ಆಗದ ಜಾಗದಲ್ಲಿ ಬಿಬಿಎಂಪಿಯಿಂದ ದುಡ್ಡು ಉತ್ಪತ್ತಿ ಮಾಡಲಾಗುತ್ತಿದೆ ಎಂದರು. ಬೆಂಗಳೂರಿನಲ್ಲಿ ಕಳೆದೆರಡು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಜನರು ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ, ಅಭಿವೃದ್ಧಿಗೆ ಹಣ ನೀಡದೆ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.