Asianet Suvarna News Asianet Suvarna News

ಡಿಸೆಂಬರ್‌ಗೆ 10-12 ಜೆಡಿಎಸ್‌, ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ?

8ರಿಂದ 10 ಜೆಡಿಎಸ್‌ ಶಾಸಕರ ಜತೆ ಕಾಂಗ್ರೆಸ್‌ ನಾಯಕರ ಮಾತುಕತೆ, ಕಾಂಗ್ರೆಸ್‌ ಸೇರುವುದೋ? ಗುಂಪಾಗಿ ಬೆಂಬಲಿಸುವುದೋ ಗೊಂದಲ, ಲೋಕಸಭೆ ಎಲೆಕ್ಷನ್‌ 6 ತಿಂಗಳಿರುವಾಗ ಘರ್‌ವಾಪ್ಸಿ ಜೋರು ಸಂಭವ,  ಲೋಕಸಭೆ ಚುನಾವಣೆಯಲ್ಲಿ 15ರಿಂದ 20 ಸ್ಥಾನ ಗೆಲ್ಲಲು ಕಾಂಗ್ರೆಸ್‌ ಗುರಿ, ಇದರ ಸಾಧನೆಗಾಗಿ ಲೋಕಸಭೆ ಚುನಾವಣೆಗೆ 6 ತಿಂಗಳ ಮುನ್ನ ಆಪರೇಷನ್‌. 

10 to 12 JDS BJP MLAs Likely to Join Congress in December grg
Author
First Published Aug 29, 2023, 5:19 AM IST

ಬೆಂಗಳೂರು(ಆ.29): ರಾಜ್ಯದಲ್ಲಿ ‘ಘರ್‌ ವಾಪ್ಸಿ’ ಪರ್ವ ಗುಪ್ತಗಾಮಿನಿಯಾಗಿ ಮುಂದುವರೆದೇ ಇದ್ದು, ಬಿಜೆಪಿಯ ನಂತರ ಈಗ ಜೆಡಿಎಸ್‌ನ ಶಾಸಕರು ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದಾರೆ. ಮೂಲಗಳ ಪ್ರಕಾರ, ಜೆಡಿಎಸ್‌ನ 8-10 ಮಂದಿ ಶಾಸಕರು ಕಾಂಗ್ರೆಸ್‌ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಲೋಕಸಭೆ ಚುನಾವಣೆಗೆ ಆರು ತಿಂಗಳಿರುವಂತೆಯೇ (ಅರ್ಥಾತ್‌ ಡಿಸೆಂಬರ್‌ ವೇಳೆಗೆ) ಜೆಡಿಎಸ್‌ ಹಾಗೂ ಬಿಜೆಪಿಯ 10-12 ಮಂದಿ ಹಾಲಿ ಶಾಸಕರು ಕೈವಶವಾಗುವ ಸಾಧ್ಯತೆಯಿದೆ.

ಈ ಪೈಕಿ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಸೇರ್ಪಡೆಯಾಗುವುದೋ ಅಥವಾ ಒಂದು ಗುಂಪಾಗಿ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡು ಕಾಂಗ್ರೆಸ್‌ಗೆ ಬೆಂಬಲ ನೀಡುವುದೋ ಎಂಬ ಸಾಧ್ಯತೆಗಳನ್ನು ಅವಲೋಕಿಸುತ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಈ ಎಲ್ಲಾ ಬೆಳವಣಿಗೆಗಳು ಡಿಸೆಂಬರ್‌ ವೇಳೆಗೆ ಒಂದು ರೂಪ ಪಡೆದುಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ರಾಜೀವ್‌ಗಾಂಧಿ ಮೆಡಿಕಲ್‌ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್‌ಡಿಕೆ ಆಕ್ರೋಶ

ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 15ರಿಂದ 20 ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿ ಹೊಂದಿರುವ ಕಾಂಗ್ರೆಸ್‌ ಇದಕ್ಕೆ ಪೂರಕವಾಗಿ ಲೋಕಸಭೆ ಚುನಾವಣೆಗೆ ಆರು ತಿಂಗಳ ಮೊದಲೇ ಜೆಡಿಎಸ್‌ ಹಾಗೂ ಬಿಜೆಪಿ ಶಾಸಕರ ಸೆಳೆಯಲು ತೀವ್ರ ಕಸರತ್ತು ನಡೆಸುತ್ತಿದೆ. ಇದರ ಫಲವಾಗಿ ಈಗಲೇ 10-12 ಮಂದಿ ಶಾಸಕರು ಕಾಂಗ್ರೆಸ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಎಸ್‌.ಟಿ.ಸೋಮಶೇಖರ್‌ ಕಾಂಗ್ರೆಸ್‌ ಸೇರ್ಪಡೆ ಆಗಲಿದ್ದಾರೆಂಬ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಘರ್‌ವಾಪ್ಸಿ ಪ್ರಯತ್ನಗಳು ಒಂದೊಂದಾಗಿ ಹೊರಬರುತ್ತಿವೆ. ಜೆಡಿಎಸ್‌ನ ಹಲವು ಪ್ರಮುಖ ನಾಯಕರೇ ಕಾಂಗ್ರೆಸ್‌ನ ಹಿರಿಯ ನಾಯಕರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ನ ಶಾಸಕರು ಒಂದು ಗುಂಪಿನಲ್ಲಿ ಕಾಂಗ್ರೆಸ್‌ ಸೇರುವ ಅಥವಾ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡು ಕಾಂಗ್ರೆಸ್‌ಗೆ ಬೆಂಬಲ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಈ ಚಿಂತನೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಡಿಸೆಂಬರ್‌ ವೇಳೆಗೆ ಒಂದು ಸ್ವರೂಪ ಪಡೆಯುವ ಸಾಧ್ಯತೆಯಿದೆ.

ಇದೇ ವೇಳೆ ಬಿಜೆಪಿಯ ಎಸ್‌.ಟಿ.ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಸೇರಿದಂತೆ ಹಲವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರೊಂದಿಗೆ ನೇರ ಸಂಪರ್ಕದಲ್ಲಿದ್ದು, ಅವರು ಸಹ ಡಿಸೆಂಬರ್‌ ವೇಳೆಗೆ ಕಾಂಗ್ರೆಸ್‌ ಸೇರುವ ನಿರ್ಧಾರ ಪ್ರಕಟಿಸಬಹುದು ಎನ್ನಲಾಗುತ್ತಿದೆ.

ಮತ ಪ್ರಮಾಣ ಹೆಚ್ಚಿಸಿಕೊಳ್ಳುವತ್ತ ಗಮನ:

ಇನ್ನು ಆಪರೇಷನ್‌ ಹಸ್ತದ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ಅನ್ಯ ಪಕ್ಷಗಳ ಶಾಸಕರು ಕಾಂಗ್ರೆಸ್‌ ಸೇರುವ ವಿಚಾರದ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ನಾವು ಬೇರೆ ಪಕ್ಷಗಳ ಶಾಸಕರನ್ನು ಕರೆದುಕೊಳ್ಳುವುದಕ್ಕಿಂತ ನಮ್ಮ ಮತ ಪ್ರಮಾಣ ಹೆಚ್ಚಿಸಿಕೊಳ್ಳುವತ್ತ ಹೆಚ್ಚು ಗಮನಹರಿಸುತ್ತಿದ್ದೇವೆ’ ಎಂದು ಹೇಳಿದರು.

ಕಾಂಗ್ರೆಸ್‌ ಭ್ರಷ್ಟಾಚಾರದ ರಕ್ತ ಬೀಜಾಸುರ ಇದ್ದಂತೆ: ಪ್ರಲ್ಹಾದ್‌ ಜೋಶಿ

ಎಸ್‌.ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಸೇರಿದಂತೆ ಬೇರೆ ಶಾಸಕರು ನಿಮ್ಮ ಪಕ್ಷದ ನಾಯಕರ ಸಂಪರ್ಕದಲ್ಲಿ ಇಲ್ಲವೇ ಎಂಬ ಪ್ರಶ್ನೆಗೆ, ‘ಈ ಬಗ್ಗೆ ನೀವು ಅವರನ್ನೇ ಕೇಳಬೇಕು. ನಾವು ಬಿಜೆಪಿ ಶಾಸಕರ ಕ್ಷೇತ್ರಗಳಲ್ಲೂ ಜನರಿಗೆ ನೆರವಾಗಿ ಅವರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇವೆ. ನಮಗೆ ಇಡೀ ರಾಜ್ಯದ ಅಭಿವೃದ್ಧಿ ಬಹಳ ಮುಖ್ಯ. ಸೋಮಶೇಖರ್‌ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದರು. ಅದನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದೇನೆ’ ಎಂದಷ್ಟೇ ಹೇಳಿದರು.

ಯಾರೂ ಹೋಗೋದಿಲ್ಲ

ಇನ್ನೊಂದು ಪಕ್ಷವನ್ನು ನಂಬಿ ನಮ್ಮ ಪಕ್ಷದ ಶಾಸಕರು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಅದೆಲ್ಲವೂ ಊಹಾಪೋಹ. ಇಂಥವರು ಹೋಗುತ್ತಾರೆ ಎಂದು ಹೇಳಿದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಪ್ರಾದೇಶಿಕ ಪಕ್ಷ ಉಳಿಯಲು ಬಿಡಿ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.  

Follow Us:
Download App:
  • android
  • ios