10 ಬಿಜೆಪಿಗರು ಕಾಂಗ್ರೆಸ್‌ ಸೇರಲು ಸಿದ್ಧ, 2028ರವರೆಗೆ ನಾನು ಬಿಜೆಪಿಯಲ್ಲೇ ಇರುತ್ತೇನೆ: ಎಸ್‌.ಟಿ ಸೋಮಶೇಖರ್

ಸೋಮಶೇಖರ್‌ ಹೇಳುವುದೇನು? ಅವರ ಮುಂದಿನ ನಡೆಯೇನು? ಬಿಜೆಪಿಯಲ್ಲಿ ಭ್ರಮನಿರಸನಗೊಳ್ಳಲು ಕಾರಣಗಳೇನು? ಎಷ್ಟು ಜನ ಶಾಸಕರು ಬಿಜೆಪಿ ತೊರೆಯಲಿದ್ದಾರೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ‘ಕನ್ನಡಪ್ರಭ’ ಜತೆ ‘ಮುಖಾಮುಖಿ’ ಮಾತನಾಡಿದ್ದಾರೆ.

10 BJP Members ready to join Congress Bjp Mla ST Somashekar Special Interview gvd

ಸಂದರ್ಶನ: ಶ್ರೀಕಾಂತ್ ಎನ್.ಗೌಡಸಂದ್ರ

ಇಂದಿನ ರಾಜಕಾರಣಿಗಳಲ್ಲಿ ಮೂಲ ಕಾಂಗ್ರೆಸ್ಸಿಗರ ಪಟ್ಟಿ ತಯಾರಿಸಿದರೆ ಅದರಲ್ಲಿ ನಿಸ್ಸಂಶಯವಾಗಿ ಸ್ಥಾನ ಪಡೆಯುವ ಹೆಸರು ಎಸ್‌.ಟಿ.ಸೋಮಶೇಖರ್‌ ಅವರದು. ತಳಮಟ್ಟದಿಂದ ಕಾಂಗ್ರೆಸ್‌ನಲ್ಲಿ ಬೆಳೆದು ಶಾಸಕರಾದ ಎಸ್‌.ಟಿ ಸೋಮಶೇಖರ್‌ ಅವರಲ್ಲಿರೋದು ಕಾಂಗ್ರೆಸ್‌ ರಕ್ತ ಎಂದು ಅವರ ಆಪ್ತರೇ ಛೇಡಿಸುವುದಿದೆ. ಇಂಥ ಸೋಮಶೇಖರ್ ಹಾಗೂ ಅವರ ಗೆಳೆಯರ ಪುಟ್ಟ ತಂಡ ಕಾಂಗ್ರೆಸ್‌ ತೊರೆದು ಕಮಲ ಹಿಡಿದಿದ್ದರಿಂದಲೇ 2019ರಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರಲು ಸಾಧ್ಯವಾಯಿತು. ಸೋಮಶೇಖರ್‌ ಸಚಿವ ಸ್ಥಾನಕ್ಕೇರಲೂ ಸಾಧ್ಯವಾಯಿತು. ಅದು ವಿನ್‌ ವಿನ್‌ ಪರಿಸ್ಥಿತಿ. ಈಗ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದಿದೆ. 

ಬಿಜೆಪಿಯಿಂದಲೇ ಸೋಮಶೇಖರ್‌ ಮತ್ತೆ ಗೆದ್ದಿದ್ದಾರೆ. ಆದರೆ, ತಮಗೆ ದೊರೆಯಬೇಕಿದ್ದ ಸುಲಭ ಗೆಲುವು ಹೋರಾಟದ ಗೆಲುವಾಗಲು ಕಾರಣರಾದ ಸ್ಥಳೀಯ ಬಿಜೆಪಿಗರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಸಿಟ್ಟಾಗಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಮೂಲ ನೆಲೆ, ನಾಯಕರಿಗೆ ಹತ್ತಿರವಾಗಿದ್ದಾರೆ. ಜತೆಗೆ, 8 ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರುತ್ತಾರೆಂಬ ಬಾಂಬ್‌ ಸಿಡಿಸಿ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಬಹಿರಂಗ ಪ್ರಚಾರವನ್ನೂ ನಡೆಸಿದ್ದಾರೆ. ಇದರಿಂದ ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಮೇಲೆ ಕ್ರಮಕ್ಕೆ ಬಿಜೆಪಿ ಮುಂದಾಗಿದೆ. ಇದಕ್ಕೆ ಸೋಮಶೇಖರ್‌ ಹೇಳುವುದೇನು? ಅವರ ಮುಂದಿನ ನಡೆಯೇನು? ಬಿಜೆಪಿಯಲ್ಲಿ ಭ್ರಮನಿರಸನಗೊಳ್ಳಲು ಕಾರಣಗಳೇನು? ಎಷ್ಟು ಜನ ಶಾಸಕರು ಬಿಜೆಪಿ ತೊರೆಯಲಿದ್ದಾರೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ‘ಕನ್ನಡಪ್ರಭ’ ಜತೆ ‘ಮುಖಾಮುಖಿ’ ಮಾತನಾಡಿದ್ದಾರೆ.

ರಜನಿಕಾಂತ್‌ಗೆ ಸೂಪರ್‌ಸ್ಟಾರ್ ಪಟ್ಟ ಹೇಗೆ ಸಿಕ್ತು?: ತಲೈವಾ ಆರಂಭದ ದಿನಗಳು ಹೀಗಿತ್ತು!

* ಎಸ್‌.ಟಿ. ಸೋಮಶೇಖರ್‌ ಈಗ ಯಾವ ಪಕ್ಷದಲ್ಲಿದ್ದಾರೆ? ಮುಂದೆ ಎಲ್ಲಿಗೆ?
ನಾನು ಈಗ ಬಿಜೆಪಿಯಲ್ಲಿ ಇದ್ದೇನೆ. ಸದ್ಯಕ್ಕೆ ಕಾಂಗ್ರೆಸ್ ಸೇರುವ ಯೋಚನೆ ಇಲ್ಲ. 2028ರವರೆಗೂ ಇಲ್ಲೇ ಇರುತ್ತೇನೆ. ಮುಂದಿನದ್ದು ಕಾಲ ನಿರ್ಣಯಿಸುತ್ತದೆ.

* ಪಕ್ಷ ವಿರೋಧಿ ಚಟುವಟಿಕೆ ಹೆಸರಲ್ಲಿ ನಿಮ್ಮ ಅನರ್ಹತೆಗೆ ಬಿಜೆಪಿ ಮುಂದಾಗಿದೆಯಲ್ವಾ?
ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನೋಟಿಸ್‌ ನೀಡಲಿ ನಾನು ಎಲ್ಲದಕ್ಕೂ ಉತ್ತರಿಸುತ್ತೇನೆ. ನನ್ನ ಅನರ್ಹತೆ ಆಗಲು ಸಾಧ್ಯವೇ ಇಲ್ಲ. ನನ್ನ ಶಾಸಕ ಸ್ಥಾನ ಉಳಿಸಿಕೊಳ್ಳುವ ಕಲೆ ನನಗೆ ಕರಗತವಾಗಿದೆ. ನಾನು ಶಾಸಕನಾಗಿಯೇ ಇರುತ್ತೇನೆ.

* ನಿಮ್ಮ ವಿವರಣೆ ಕೇಳಲೇ ಬಿಜೆಪಿ ನಾಯಕತ್ವ ಸಿದ್ಧವಿಲ್ಲವಂತೆ?
ನಿಜ ಇಲ್ಲಿಯವರೆಗೆ ಯಾರೊಬ್ಬರೂ ನನಗೆ ವಿವರಣೆ ಕೇಳಿಲ್ಲ. ಕೇಳಿದಾಗ ಎಲ್ಲವನ್ನೂ ಬಿಚ್ಚಿಡುತ್ತೇನೆ. ಬಳಿಕ ಕ್ರಮವಾದರೂ ತೆಗೆದುಕೊಳ್ಳಲಿ, ಏನಾದರೂ ಮಾಡಲಿ. ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.

* ಉತ್ಸಾಹದಿಂದ ಬಿಜೆಪಿಗೆ ಬಂದಿರಿ, ಇದೀಗ ಬಿಜೆಪಿ ಬಗ್ಗೆಯೇ ಭ್ರಮನಿರಸನ ಆಗಿದ್ದೇಗೆ?
2023ರ ಚುನಾವಣೆಯಲ್ಲಿ ಬಿಜೆಪಿಯ ಸ್ಥಳೀಯ ನಾಯಕರೆಲ್ಲರೂ ಜೆಡಿಎಸ್‌ ಜತೆ ಹೋಗಿ ನನ್ನ ವಿರುದ್ಧ ಪ್ರಚಾರ ಮಾಡಿದರು. ಈ ಬಗ್ಗೆ ದೂರು ನೀಡಿದರೂ ಕ್ರಮ ಆಗಲಿಲ್ಲ. ನಾನು ಹೆಚ್ಚು ಗಲಾಟೆ ಮಾಡಿದಾಗ ಲೆಕ್ಕಕ್ಕಿಲ್ಲದ ಖಾಲಿಪೀಲಿ ಇಬ್ಬರನ್ನು ಅಮಾನತು ಮಾಡಿ ಸುಮ್ಮನಾದರು. ನೀವು ನೀಡಿರುವ ಪಟ್ಟಿ ಪ್ರಕಾರ ಅಮಾನತು ಮಾಡಿದರೆ ಬಿಜೆಪಿಯೇ ಖಾಲಿ ಆಗುತ್ತದೆ ಎಂದರು. ಪಕ್ಷದ ಶಿಸ್ತಿನ ಸಿಪಾಯಿ ರೀತಿ ಇರುವ ನನ್ನ ವಿರುದ್ಧ ನಿಂತು ಜೆಡಿಎಸ್‌ ಪರ ಅರ್ಧ ಬಿಜೆಪಿಯವರು ಪ್ರಚಾರ ಮಾಡಿದರೆ ಸಹಿಸಬೇಕೇ?

* ಹಾಗಾದರೆ ನೀವು ಕಾಂಗ್ರೆಸ್‌ಗೆ ಹೋಗುತ್ತಿದ್ದೀರಿ ಎಂದು ಬಿಂಬಿತವಾಗುತ್ತಿರುವುದು ಏಕೆ?
ನಾನು ಪಕ್ಷದ ವಿರುದ್ಧ ಮಾತನಾಡಿಲ್ಲ. ಪಕ್ಷ ವಿರೋಧಿ ಚಟುವಟಿಕೆಯನ್ನೂ ಮಾಡಿಲ್ಲ. ನನ್ನ ಕ್ಷೇತ್ರಕ್ಕೆ ಕುರುಬ ಸ್ವಾಮೀಜಿ ಅವರು ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ಮುಖ್ಯಮಂತ್ರಿಗಳು ಸಹ ಭಾಗವಹಿಸಿದ್ದರು. ನನ್ನ ಭುಜಕ್ಕೆ ಕೈಹಾಕಿ ನಮ್ಮ ಸಮುದಾಯದ್ದು ಇದು, ನಿನ್ನ ಅನುದಾನ ಇದ್ದರೆ ಕೊಡು ಎಂದಿದ್ದರು. ಇನ್ನು ಕೆಂಪೇಗೌಡ ಬಡಾವಣೆ ವೀಕ್ಷಣೆಗೆ ಬಂದಾಗ ಡಿ.ಕೆ.ಶಿವಕುಮಾರ್‌ ಜತೆ ಹೋಗಿ ಅವರ ಬಗ್ಗೆ ಒಳ್ಳೆಯ ಮಾತಾಡಿದ್ದೆ. ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಕ್ಕೆ ಭೇಟಿ ಮಾಡುತ್ತಲೇ ಇರುತ್ತೇನೆ. ಇಲ್ಲದಿದ್ದರೆ ಸಿ.ಕೆ. ರಾಮಮೂರ್ತಿಗೆ ಆದ ಗತಿ ನನಗೂ ಆಗುತ್ತಿರಲಿಲ್ಲವೇ? ಇದಕ್ಕೇ ಕಾಂಗ್ರೆಸ್‌ ಸೇರಿದ್ದೇನೆ ಎಂಬ ಅಪಪ್ರಚಾರ ಶುರು ಮಾಡಿದರು.

* ನೀವು ಚನ್ನಪಟ್ಟಣದಲ್ಲಿ ಬಹಿರಂಗವಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದೀರಿ. ಅದು ಪಕ್ಷ ವಿರೋಧಿಯಲ್ಲವೇ?
ನಾನು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿಯೇ ಇಲ್ಲ. ನಾನು ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಅವರಿಗೆ ಮತ ನೀಡದಂತೆ ಪ್ರಚಾರ ಮಾಡಿದ್ದೇನೆ ಅಷ್ಟೇ.

* ಜೆಡಿಎಸ್‌ನಿಂದ ಕಣಕ್ಕಿಳಿದಿದ್ದು ಎನ್‌ಡಿಎ ಅಭ್ಯರ್ಥಿ ಎಂದ ಮೇಲೆ ನಿಮ್ಮ ನಡೆ ಪಕ್ಷವಿರೋಧಿ ಆಗುವುದಿಲ್ಲವೇ?
ನಿಖಿಲ್‌ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿ ಅಲ್ಲ. ಅವರು ತನ್ನ ಸ್ವಂತ ಮಗನನ್ನು ನಿಲ್ಲಿಸಿ ಎನ್‌ಡಿಎ ಅಭ್ಯರ್ಥಿ ಎಂದರೆ ಏನರ್ಥ? ಸಿ.ಪಿ. ಯೋಗೇಶ್ವರ್‌ ಬಿಜೆಪಿಯಿಂದ ನಿಂತಿದ್ದರೆ ನಾನು ಅವರ ವಿರುದ್ಧ ಪ್ರಚಾರಕ್ಕೆ ಹೋಗುತ್ತಿರಲಿಲ್ಲ.

* ಮೈತ್ರಿ ಇದ್ದಾಗ ಜೆಡಿಎಸ್ ಅಭ್ಯರ್ಥಿ ವಿರುದ್ಧವೇ ಪ್ರಚಾರ ಯಾಕೆ ಬೇಕಿತ್ತು?
ಚನ್ನಪಟ್ಟಣ ನನ್ನ ಮೂಲ ಸ್ಥಾನ. ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಹಾಕಬೇಡಿ ಎಂದು ಹೇಳಿರುವುದು ನಿಜ. ಹಾಸನದಲ್ಲಿ 18 ರಿಂದ 19-20 ವರ್ಷದ ಹುಡುಗರು ಸೂರಜ್‌ ರೇವಣ್ಣ ಎದುರು ಬರುವಂತಿಲ್ಲ. 18 ರಿಂದ 65 ವರ್ಷದ ಸ್ಫುರದ್ರೂಪಿ ಯುವತಿಯರು, ಮಹಿಳೆಯರು ಪ್ರಜ್ವಲ್‌ ರೇವಣ್ಣ ಮುಂದೆ ಬರುವಂತಿಲ್ಲ. ಇದು ಹಾಸನದ ಪರಿಸ್ಥಿತಿ. ಹಾಸನದ ಸ್ಥಿತಿ ಚನ್ನಪಟ್ಟಣಕ್ಕೆ ಬರಬಾರದು ಎಂದು ಜೆಡಿಎಸ್‌ಗೆ ಮತ ಹಾಕಬೇಡಿ ಎಂದಿದ್ದೇನೆ. ಬೇರೆಯವರಂತೆ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ.

* ನಿಮ್ಮ ಪ್ರಕಾರ ಪಕ್ಷ ವಿರೋಧಿ ಚಟುವಟಿಕೆ ಎಂದರೆ ಯಾವುದು?
ಯತ್ನಾಳ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾಡ್ತಿರೋದು. ಯತ್ನಾಳ್‌ ಹಾಗೂ ರಮೇಶ್ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಆಡೋ ಹುಡುಗ ಎನ್ನುತ್ತಾರೆ. ರಾಷ್ಟ್ರೀಯ ಅಧ್ಯಕ್ಷರೇ ಮಾಡಿದ ನೇಮಕವನ್ನು ಅವಮಾನಿಸಿದಂತೆ ಅಲ್ಲವೇ? ಇದನ್ನು ಪಕ್ಷ ಸರಿಪಡಿಸಬೇಕಲ್ಲವೇ? ಇದರಿಂದ ತುಂಬಾ ಜನ ಅಸಮಾಧಾನಗೊಂಡಿದ್ದಾರೆ. ಇನ್ನು ಸದಾನಂದಗೌಡ ಪಕ್ಷದವರ ವಿರುದ್ಧವೇ ಪತ್ರ ಬರೆದು ಸುದ್ದಿಗೋಷ್ಠಿ ಮಾಡ್ತಾರೆ. ಅವರ ಮೇಲೆ ಕ್ರಮ ಯಾಕಿಲ್ಲ?

* ಎಂಟು ಜನ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ ಎಂದಿದ್ದೀರಿ?
ಹೌದು 8-10 ಮಂದಿ ಶಾಸಕರು ಕಾಯುತ್ತಿದ್ದಾರೆ. ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ಸರಿ ಹೋಗುತ್ತದೆಯೇ, ಇಲ್ಲವೇ ಎಂದು ಗಮನಿಸುತ್ತಿದ್ದಾರೆ. ಸರಿ ಹೋಗದಿದ್ದರೆ ಪಕ್ಷ ತೊರೆಯಲು ಸಿದ್ಧರಾಗುತ್ತಾರೆ. ಅವರೆಲ್ಲ ಬಿಜೆಪಿಯವರೇ. ಬಿಜೆಪಿ ಅಧಿಕಾರದಲ್ಲಿದ್ದಾಗ ಸಚಿವರಾಗಿದ್ದ ಒಬ್ಬರು ಬಂದು ನಿಮ್ಮ ಪಟ್ಟಿಗೆ ನನ್ನನ್ನೂ ಸೇರಿಸಿಕೊಳ್ಳಿ ಎಂದಿದ್ದಾರೆ.

* ಹಾಗಾದರೆ ಸೋಮಶೇಖರ್ ಪಟ್ಟಿ ಮಾಡುತ್ತಿದ್ದಾರಾ?
ನಾನು ಯಾವ ಪಟ್ಟಿಯನ್ನೂ ಮಾಡುತ್ತಿಲ್ಲ. ನಾನು ಪಟ್ಟಿ ಮಾಡುತ್ತಿದ್ದೇನೆ ಎಂಬುದು ಬಿಜೆಪಿಯವರ ಅಭಿಪ್ರಾಯ.

* ಎಂಟು ಜನ ಶಾಸಕರ ಹೆಸರು ಬಹಿರಂಗಪಡಿಸಲಿ ಎಂದು ಬೈರತಿ ಬಸವರಾಜ ಸವಾಲು ಹಾಕಿದ್ದಾರಲ್ಲ?
ನನಗೆ ಹೆದರಿಕೆ ಇಲ್ಲ. ಬೇಕಿದ್ದರೆ ಸುದ್ದಿಗೋಷ್ಠಿ ನಡೆಸಿ ಎಲ್ಲರ ಹೆಸರೂ ಬಹಿರಂಗ ‌ಮಾಡುತ್ತೇನೆ‌. ಅವರಿಗೆಲ್ಲ ಮುಜಗರ ಯಾಕೆ ಮಾಡಲಿ‌ ಎಂದು ಸುಮ್ಮನಿದ್ದೇನೆ. ನನಗೆ ಸವಾಲು ಹಾಕುತ್ತಾರಲ್ವ, ಕಾಂಗ್ರೆಸ್ ಸೇರಲು ನನ್ನ ದುಂಬಾಲು ಬಿದ್ದಿದ್ದವರು ಯಾರು ಅಂತ ಅವರನ್ನೇ ಕೇಳಿ. ಅವರ ಪರ ಮುಖ್ಯಮಂತ್ರಿಗಳ ಬಳಿ ಹೋದವರು ಯಾರು ಕೇಳಿ.

* ಯಾರದು?
ಅ‍ವರನ್ನೇ ಕೇಳಿ.. ಬಿಜೆಪಿ ಶಾಸಕರೊಬ್ಬರ ಕುಟುಂಬದವರು ಹಾಗೂ ಕುರುಬ ಸಮುದಾಯದವರು ಎಲ್ಲಾ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಕೇಳಿಕೊಂಡರು. ಬಳಿಕ ಸಿಎಂ ನನ್ನ ಮಾತು ಕೇಳುತ್ತಾರೆಂದು ನನ್ನ ಮೂಲಕವೂ ಸಿಎಂಗೆ ಹೇಳಿಸಿದರು. ಆದರೆ ಸಿದ್ದರಾಮಯ್ಯ ಅವರು, ‘ಅವನು ಖತರ್ನಾಕ್‌ ಇದಾನೆ. ಯಾವುದೇ ಕಾರಣಕ್ಕೂ ನಾನು ಮುಖ್ಯಮಂತ್ರಿಯಾಗಿರುವವರೆಗೂ ಅವನು ಕಾಂಗ್ರೆಸ್‌ ಸೇರಲು ಬಿಡುವುದಿಲ್ಲ’ ಎಂದರು. ನಾನು ಸುಮ್ಮನಾದೆ.

* ಹೋಗಲಿ, ನಿಮ್ಮ ಅಂತಿಮ ನಿಲುವೇನು?
2028ಕ್ಕೆ ಆ ಆಲೋಚನೆ. ಸದ್ಯ ನಾನು ಶಾಸಕನಾಗಿದ್ದೇನೆ. ನೋಡೋಣ ಅಂದಿನ ಸನ್ನಿವೇಶದ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಕಾಂಗ್ರೆಸ್ಸಿಗೆ ಯಾವಾಗ ಹೋಗಬೇಕು ಎಂಬ ಐಡಿಯಾ ನನಗೆ ಚೆನ್ನಾಗಿದೆ.

* ಕಮಲ ಚಿಹ್ನೆಯಲ್ಲಿ ಗೆದ್ದಿದ್ದಾರೆ. ಬಿಟ್ಟು ಹೋಗಲಿ ಎನ್ನುತ್ತಾರೆ?
ನಾನೇಕೆ ಬಿಟ್ಟು ಹೋಗಲಿ. ಬಿಟ್ಟು ಹೋಗೋಕೆ ಅವರು ಬಂದು ಗೆಲ್ಲಿಸಿದ್ದಾರಾ? ನನ್ನ ಗೆಲ್ಲಿಸಲು ಯಾವ ಬಿಜೆಪಿಯವರೂ ಬಂದಿರಲಿಲ್ಲ. ಹೀಗಿದ್ದಾಗ ಇವರನ್ನು ಕೇಳಿ ಹೋಗಬೇಕಾ?

* ಕಾಂಗ್ರೆಸ್ ಸರ್ಕಾರದಲ್ಲಿದ್ದ ಎಸ್‌ಬಿಎಂನಲ್ಲಿ (ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ) ಒಡಕು ಯಾಕೆ?
‘ಎಂ’ ಕಥೆ ನೀವೇ ನೋಡುತ್ತಿದ್ದೀರಿ, ಇಡೀರಾಜ್ಯ ನೋಡುತ್ತಿದೆ. ಇನ್ನು ‘ಬಿ’ ಕಥೆನೂ ನಿಮಗೆ ಹೇಳಿದ್ದೇನೆ. ಹೀಗಾಗಿ ಎಸ್‌ ಇದ್ದೇನೆ.

ಮುಂದಿನ ವರ್ಷ ಪೂರ್ತಿ ನಟಿ ಪೂಜಾ ಹೆಗ್ಡೆ ಅವರದ್ದೇ ಆರ್ಭಟವಂತೆ: ಹೇಗೆ ಗೊತ್ತಾ?

* ಬಿಜೆಪಿಯವರು ರಾತ್ರಿ ವೇಳೆ ಸಿಎಂ, ಡಿಸಿಎಂ ಭೇಟಿ ಆಗ್ತಾರೆ ಅಂದಿದ್ರಿ ನಿಜಾನಾ?
ನಾನು ಇದ್ದಾಗಲೇ ಬರುತ್ತಿದ್ದರು. ಮರೆಯಲ್ಲಿ ನಿಂತು ಸೋಮಶೇಖರ್ ಹೋದ ಮೇಲೆ ಕರೆಯಿರಿ ಎನ್ನುತ್ತಾರೆ. ಅವರ ಹೆಸರೆಲ್ಲ ಹೇಳಿ ತೊಂದರೆ ಯಾಕೆ ಕೊಡಲಿ.

* ಶೋಭಾ ಕರಂದ್ಲಾಜೆ ಬಗ್ಗೆ ನಿಮ್ಮ ಆಕ್ರೋಶ ಯಾಕೆ?
ನನ್ನ ಕ್ಷೇತ್ರಕ್ಕೆ ಬಂದು ಎಡಬಿಡಂಗಿ ಎಂದು ತಾಕತ್ತು ಪ್ರಶ್ನಿಸಿದರು. ಮತ್ತೊಮ್ಮೆ ರಾಜೀನಾಮೆ ನೀಡಿ ತಾಕತ್ತು ತೋರಿಸಲಿ ಎಂದರು. ಇವಳ್ಯಾಕೆ ನನ್ನ ತಾಕತ್ತು ಪ್ರಶ್ನೆ ಮಾಡಬೇಕು. ನನ್ನ ತಾಕತ್ತು ನೋಡಬೇಕಾದರೆ ನೀನು ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದೇನೆ. ನನಗೆ ಕ್ಷೇತ್ರದ ಜನ ಉಗಿದು ಕಳಿಸಿಲ್ಲ. ನಾನೇಕೆ ಅವರ ಮಾತು ಸಹಿಸಲಿ.

Latest Videos
Follow Us:
Download App:
  • android
  • ios