ಕಾಂಗ್ರೆಸ್ ಗೆದ್ರೆ ಹಾಲಿಗೆ 1 ರು.ಪ್ರೋತ್ಸಾಹ ಧನ ಏರಿಕೆ: ಸಿದ್ದು
ಕೊಟ್ಟ ಮಾತಿಗೆ ಕಾಂಗ್ರೆಸ್ ಎಂದಿಗೂ ತಪ್ಪುವುದಿಲ್ಲ, ಜೆಡಿಎಸ್ 20 ರಿಂದ 22 ಸ್ಥಾನಗಳಲ್ಲಷ್ಟೇ ಗೆಲ್ಲಲು ಶಕ್ತ: ಮಾಜಿ ಸಿಎಂ ಸಿದ್ದರಾಮಯ್ಯ
ಮಂಡ್ಯ(ಜ.28): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು 1 ರು.ಹೆಚ್ಚಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ನಗರದ ಮಂಡ್ಯ ವಿವಿ ಆವರಣದಲ್ಲಿ ನಡೆದ ‘ಪ್ರಜಾಧ್ವನಿ’ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಅಧಿಕಾರದಲ್ಲಿದ್ದಾಗ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು 4 ರು. ನಿಂದ 5 ರು.ಗೆ ಹೆಚ್ಚಳ ಮಾಡಿದ್ದೆ. ಆದರೆ, ಬಿಜೆಪಿಯವರಿಗೆ ಹಾಲು ಉತ್ಪಾದಕರಿಗೆ ಬಾಕಿ ಕೊಡುವುದಕ್ಕೇ ಆಗಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಾಲು ಉತ್ಪಾದಕರಿಗೆ ನೀಡಲಾಗುವ ಪ್ರೋತ್ಸಾಹಧನವನ್ನು 5 ರು. ನಿಂದ 6 ರು.ಗೆ ಹೆಚ್ಚಳ ಮಾಡುವುದು ನಿಶ್ಚಿತ. ಇದರಲ್ಲಿ ಅನುಮಾನವೇ ಬೇಡ ಎಂದರು.
ಬಿಜೆಪಿ, ಜೆಡಿಎಸ್‌ನಲ್ಲಿ ಸೋಲಿನ ಭಯ:
ಕಾಂಗ್ರೆಸ್ ಪಕ್ಷದ ಘೋಷಣೆಗಳು ಬಿಜೆಪಿ, ಜೆಡಿಎಸ್ ನಾಯಕರಲ್ಲಿ ತಳಮಳ ಸೃಷ್ಟಿಸಿವೆ. ಸೋಲಿನ ಭಯ ಅವರನ್ನು ಕಾಡುತ್ತಿದೆ. ಕಾಂಗ್ರೆಸ್‌ನವರು ನುಡಿದಂತೆ ನಡೆಯುವವರು. ಈ ಮಾತುಗಳಿಗೆ ತಪ್ಪಿ ನಡೆದರೆ ನಾವು ಅಧಿಕಾರದಲ್ಲಿಯೇ ಇರುವುದಿಲ್ಲ ಎಂದರು.
ಫೆ.3ರಿಂದ ಕರ್ನಾಟಕದ ಪ್ರತಿ ಕ್ಷೇತ್ರದಲ್ಲೂ ಕಾಂಗ್ರೆಸ್ 360 ಡಿಗ್ರಿ ಪ್ರಚಾರ..!
ಮಂಡ್ಯದ ಮೈಷುಗರ್ ಕಾರ್ಖಾನೆ ಮಾರಾಟಕ್ಕೆ ಬಿಜೆಪಿಯವರು ರೆಡಿಯಾಗಿದ್ದರು. ನಿರಾಣಿ ಕಂಪನಿ ಕೈಗೆ ಸಿಗಲಿದೆ ಅಂತ ಕಾಯ್ತಾ ಇದ್ದರು. ಮಹಾರಾಜರು ಕೊಟ್ಟಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಬಾರದೆಂದು ಸದನದಲ್ಲಿ ಪ್ರಬಲವಾಗಿ ಧ್ವನಿ ಎತ್ತಿದೆವು. ಆಗ ಖಾಸಗೀಕರಣ ನಿರ್ಧಾರದಿಂದ ಬಿಜೆಪಿಯವರು ಹಿಂದೆ ಸರಿದರು. ನಮ್ಮ ಕೈಗೆ ಅಧಿಕಾರ ಬಂದರೆ ಮೈಷುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುತ್ತೇವೆ. ಎಥೆನಾಲ್, ಮದ್ಯಸಾರ, ಕೋ-ಜನ್ ಪ್ಲಾಂಟ್‌ಗಳನ್ನು ಸ್ಥಾಪಿಸಿ ಮಹಾರಾಜರ ಕೊಡುಗೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುತ್ತೇವೆ ಎಂದರು.
ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಅಂತ ಕುಮಾರಸ್ವಾಮಿ ಆರೋಪಿಸುತ್ತಾರೆ. ಸಮ್ಮಿಶ್ರ ಸರ್ಕಾರ ಉರುಳುವ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇನೋ ಹೋದರು ಸರಿ. ಜೆಡಿಎಸ್‌ನ ಮೂವರು ಶಾಸಕರು ಏಕೆ ಹೋದರು?. ಅವರನ್ನು ನಾನು ಕಳುಹಿಸಿಕೊಟ್ಟೆನಾ ಎಂದು ಪ್ರಶ್ನಿಸಿದರು.
ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು. ಅಧಿಕಾರಕ್ಕೆ ಬಂದ ಮೇಲೆ ಎಂಎಲ್‌ಎಗಳನ್ನು ಸರಿಯಾಗಿಟ್ಟುಕೊಳ್ಳಬೇಕಿತ್ತು. ಫೈವ್ ಸ್ಟಾರ್ ಹೋಟೆಲ್‌ನಲ್ಲಿದ್ದುಕೊಂಡು ಯಾರಾದರೂ ಸರ್ಕಾರ ನಡೆಸಲು ಸಾಧ್ಯನೇನ್ರೀ?. ಎಂಎಲ್‌ಎಗಳನ್ನು ಅವರು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ಅಧಿಕಾರದಿಂದ ಕೆಳಗಿಳಿಸಿದರು. ಕೊಟ್ಟಕುದುರೆಯನ್ನು ಏರದವನು ವೀರನೂ ಅಲ್ಲ, ಧೀರನೂ ಅಲ್ಲ, ಶೂರನೂ ಅಲ್ಲ. ಇದನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದರು. ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರೋಲ್ಲ. 20 ರಿಂದ 22 ಸ್ಥಾನಗಳಲ್ಲಿ ಗೆಲ್ಲಬಹುದಷ್ಟೇ. ಅವರಿಗೆ ಓಟು ಕೊಟ್ಟರೂ ಪ್ರಯೋಜನವಿಲ್ಲ ಎಂದು ವ್ಯಂಗ್ಯವಾಡಿದರು.