ಫೆ.3ರಿಂದ ಕರ್ನಾಟಕದ ಪ್ರತಿ ಕ್ಷೇತ್ರದಲ್ಲೂ ಕಾಂಗ್ರೆಸ್‌ 360 ಡಿಗ್ರಿ ಪ್ರಚಾರ..!

ಕರ್ನಾಟಕದ ಪ್ರತಿ ಮನೆಗೆ ಮಾಸಿಕ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’, ಪ್ರತಿ ತಿಂಗಳು ಮನೆಯೊಡತಿಗೆ 2 ಸಾವಿರ ರು. ಸಹಾಯಧನ ನೀಡುವ ‘ಗೃಹ ಲಕ್ಷ್ಮಿ’ ಸೇರಿದಂತೆ ಕಾಂಗ್ರೆಸ್‌ ಘೋಷಿಸಿರುವ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ವಿಶ್ವಾಸಾರ್ಹತೆ ಮೂಡಿಸಬೇಕು. 

Congress 360 Degree Campaign in Every Constituency of Karnataka from February 3rd grg

ಬೆಂಗಳೂರು(ಜ.28):  ‘ಗೃಹ ಜ್ಯೋತಿ’, ‘ಗೃಹ ಲಕ್ಷ್ಮಿ’ ಸೇರಿದಂತೆ ‘ಕಾಂಗ್ರೆಸ್‌ ಗ್ಯಾರಂಟಿ’ ಘೋಷಣೆಗಳನ್ನು ಜನರಿಗೆ ಮುಟ್ಟಿಸಲು ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಫೆ.3ರಿಂದ ಮಾ.10ರವರೆಗೆ 35 ದಿನಗಳ ಕಾಲ ಮನೆ-ಮನೆ ಪ್ರಚಾರ ಹಾಗೂ ಎಲ್ಲಾ ಪ್ರಚಾರ ಮಾಧ್ಯಮಗಳನ್ನೂ ಬಳಸಿಕೊಂಡು ‘360 ಡಿಗ್ರಿ-ಸರ್ವ ವ್ಯಾಪಿ ಪ್ರಚಾರ’ ಕೈಗೊಳ್ಳಲು ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಮಾಸ್ಟರ್‌ ಪ್ಲಾನ್‌ ಸಿದ್ಧಗೊಳಿಸಲಾಗಿದೆ. ಗ್ಯಾರಂಟಿ ಕಾರ್ಡ್‌ ಬಗ್ಗೆ ಪ್ರತಿ ಕ್ಷೇತ್ರದಲ್ಲಿ 50 ಸದಸ್ಯರ ತಂಡ ಪ್ರತಿ ನಿತ್ಯ 2,500 ಮನೆಗಳಿಗೆ ಭೇಟಿ ನೀಡಬೇಕು. ತನ್ಮೂಲಕ ಪ್ರತಿ ಕ್ಷೇತ್ರದಲ್ಲಿ 30 ದಿನಗಳಲ್ಲಿ 75 ಸಾವಿರ ಮನೆಗಳಿಗೆ ಭೇಟಿ ನೀಡಿ ಪ್ರಚಾರ ಮಾಡಬೇಕು. ಈ ವೇಳೆ ಜನರನ್ನು ಗ್ಯಾರಂಟಿಗೆ ನೋಂದಣಿ ಮಾಡಿ ಮನೆ ಬಾಗಿಲಿಗೆ ಕಾಂಗ್ರೆಸ್‌ ಸ್ಟಿಕ್ಕರ್‌ ಅಂಟಿಸಬೇಕು ಎಂದು ನಾಯಕರಿಗೆ ಸ್ಪಷ್ಟಸೂಚನೆ ನೀಡಲಾಗಿದೆ.

ಶುಕ್ರವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಚರ್ಚಿಸಿ ಪ್ರಚಾರ ತಂತ್ರದ ರೂಪರೇಷೆಗಳನ್ನು ಸಿದ್ಧಪಡಿಸಿದ್ದಾರೆ.

ಸೋಲಿನ ಭೀತಿಯಿಂದ ಸುಳ್ಳು ಭರವಸೆ ನೀಡುತ್ತಿರುವ ಕಾಂಗ್ರೆಸ್‌: ಸಿಎಂ ಬೊಮ್ಮಾಯಿ

ಇದರ ಪ್ರಕಾರ, ಕರ್ನಾಟಕದ ಪ್ರತಿ ಮನೆಗೆ ಮಾಸಿಕ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’, ಪ್ರತಿ ತಿಂಗಳು ಮನೆಯೊಡತಿಗೆ 2 ಸಾವಿರ ರು. ಸಹಾಯಧನ ನೀಡುವ ‘ಗೃಹ ಲಕ್ಷ್ಮಿ’ ಸೇರಿದಂತೆ ಕಾಂಗ್ರೆಸ್‌ ಘೋಷಿಸಿರುವ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ವಿಶ್ವಾಸಾರ್ಹತೆ ಮೂಡಿಸಬೇಕು. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು, ಆಕಾಂಕ್ಷಿಗಳು, ಬ್ಲಾಕ್‌ ಅಧ್ಯಕ್ಷರು, ಮುಖ್ಯಸ್ಥರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ಪ್ರತಿ ಗ್ರಾಮ ಹಾಗೂ ವಾರ್ಡ್‌ನಲ್ಲಿ ಎರಡು ಗ್ರಾಮ ಮತ್ತು ವಾರ್ಡ್‌ ಸಭೆ ನಡೆಸಬೇಕು. ಪ್ರತಿ 10 ಬೂತ್‌ಗೆ ಒಂದು ನೋಂದಣಿ ಕೇಂದ್ರ ಸ್ಥಾಪಿಸಬೇಕು. ತನ್ಮೂಲಕ ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡಬೇಕು. ಬಿಜೆಪಿಯ ಪಾಪದ ಪುರಾಣ ಕರಪತ್ರ ಎಲ್ಲೆಡೆ ಹಂಚುವ ಮೂಲಕ ಬಿಜೆಪಿಯ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು. ಎಸ್ಸಿ/ಎಸ್ಟಿಮನೆ ಹಾಗೂ ಪ್ರದೇಶಗಳು ಸೇರಿದಂತೆ ಗ್ರಾಮದ ಎಲ್ಲ ಮನೆಗಳಿಗೆ ಭೇಟಿ ನೀಡಬೇಕು. ಸ್ಥಳೀಯ ಪ್ರಭಾವಿ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

360 ಡಿಗ್ರಿ ಸರ್ವವ್ಯಾಪಿ ಪ್ರಚಾರ:

ಕ್ಷೇತ್ರದಲ್ಲಿ ಜನದಟ್ಟಣೆಯಿರುವ ಭಾಗಗಳಲ್ಲಿ ಕಾಂಗ್ರೆಸ್‌ನ ಪ್ರಮುಖ ಭರವಸೆ, ಘೋಷಣೆ ಮತ್ತು ಪ್ರಣಾಳಿಕೆ ಕುರಿತು ವರ್ಣಚಿತ್ರಗಳನ್ನು ರಚಿಸುವ ಮೂಲಕ ಪ್ರಚಾರ ಮಾಡಬೇಕು. ಕ್ಷೇತ್ರದಲ್ಲಿ ಪಕ್ಷದ ಭರವಸೆಗಳಿಗೆ ಹೆಚ್ಚಿನ ಪ್ರಚಾರ ನೀಡುವ ದೃಷ್ಟಿಯಿಂದ ಗ್ರಾಮದ ಜನದಟ್ಟಣೆಯಿರುವ ಪ್ರದೇಶಗಳಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಬೇಕು. ಕ್ಷೇತ್ರಾದ್ಯಂತ ಕಾಂಗ್ರೆಸ್‌ ಭರವಸೆಗಳ ಕುರಿತು ಸಂದೇಶಗಳು ಜನರಿಗೆ ಆಳವಾಗಿ ಮನಮುಟ್ಟುವಂತೆ ಭಿತ್ತಿಪತ್ರಗಳನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ.

ಪ್ರತಿ ಕ್ಷೇತ್ರದಲ್ಲಿ 500 ಆಟೋ ಬ್ರ್ಯಾಂಡಿಂಗ್‌:

ಗ್ರಾಮ ಮಟ್ಟದಲ್ಲಿ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ವಾಹನಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಳ್ಳಬೇಕು. ಆಕಾಂಕ್ಷಿಗಳು ಹಾಗೂ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ವಾಹನಗಳ ಮೇಲೆ ಈ ಸ್ಟಿಕ್ಕರ್‌ಗಳು ಇರುವಂತೆ ನೋಡಿಕೊಳ್ಳಬೇಕು. ಪ್ರತಿ ನಗರದಲ್ಲಿ 500 ಆಟೋಗಳ ಮೂಲಕ ಪಕ್ಷದ ಪ್ರಮುಖ ಭರವಸೆಗಳು, ಲೋಗೋ, ನಾಯಕರ ಭಾವಚಿತ್ರ ಹಾಗೂ ಪ್ರಣಾಳಿಕೆಗಳನ್ನು ಪ್ರಚಾರ ಮಾಡಬೇಕು. ಈ ಆಟೋ ಬ್ರ್ಯಾಂಡಿಂಗ್‌ಗಾಗಿ ಆಟೋ ಚಾಲಕರಿಗೆ ನೇರವಾಗಿ ಅಥವಾ ಸ್ಥಳೀಯ ಆಟೋ ಚಾಲಕರ ಒಕ್ಕೂಟದ ಮೂಲಕ ಪ್ರಚಾರ ಸಾಮಗ್ರಿಗಳನ್ನು ನೀಡಬೇಕು. ಜತೆಗೆ ಆಟೋ ಮೈಕಿಂಗ್‌ ಮೂಲಕ ಪ್ರಚಾರ ಮಾಡಲು ಪ್ರತಿ ಕ್ಷೇತ್ರದಲ್ಲಿ 10 ಆಟೋಗಳಲ್ಲಿ ಮೈಕ್‌ನಲ್ಲಿ ಕಾಂಗ್ರೆಸ್‌ ಭರವಸೆಗಳ ಕುರಿತು ಸಂದೇಶಗಳನ್ನು ಘೋಷಿಸಬೇಕು. ಈ ಚಟುವಟಿಕೆಗಳ ನೇತೃತ್ವವನ್ನು ಸ್ಥಳೀಯ ಆಕಾಂಕ್ಷಿಗಳು, ಅಭ್ಯರ್ಥಿಗಳು ಅಥವಾ ಜಿಲ್ಲಾ ಕಾಂಗ್ರೆಸ್‌ ಸಮಿತಿ ವಹಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಪ್ರತಿ ದಿನ 10 ಜಗಲಿ ಕಟ್ಟೆ ಸಭೆ:

ಸ್ತ್ರೀ ಸ್ವಸಹಾಯ ಸಂಘ ಮತ್ತು ಅಂಗನವಾಡಿ ಕಾರ್ಯಕರ್ತರು ಕಾಂಗ್ರೆಸ್‌ ಭರವಸೆಗಳನ್ನು ಮಹಿಳೆಯರಿಗೆ ವಿವರಿಸಲು ಪ್ರೋತ್ಸಾಹಿಸಬೇಕು. ಇದಕ್ಕಾಗಿ ಕರಪತ್ರಗಳು, ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಬೇಕು. ನಿತ್ಯ 10 ಜಗಲಿಕಟ್ಟೆ ಸಭೆಗಳನ್ನು ನಡೆಸಬೇಕು.

ಇನ್ನು ಗ್ರಾಮ ಮಟ್ಟದಲ್ಲಿ ಡಂಗೂರದ ಮೂಲಕ ಪಕ್ಷದ ಭರವಸೆಗಳು, ಘೋಷಣೆಗಳನ್ನು ಜನರಿಗೆ ತಲುಪಿಸಬೇಕು. ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ನೋಂದಣಿ ಮಾಡಿಸುವಂತೆ ಸಾರಬೇಕು. ಇದಕ್ಕೆ ಗ್ರಾಮಕ್ಕೆ ಒಬ್ಬರನ್ನು ನೇಮಿಸಬೇಕು.
ಕಾಂಗ್ರೆಸ್‌ ಗ್ಯಾರಂಟಿ, ಭರವಸೆ ಹಾಗೂ ಅದರ ಪ್ರಾಮುಖ್ಯತೆಗಳ ಬಗ್ಗೆ ಬೀದಿ ನಾಟಕ ಪ್ರದರ್ಶನ ಮಾಡಬೇಕು. ಕ್ಷೇತ್ರದ ಪ್ರತಿ ಬ್ಲಾಕ್‌, ಗ್ರಾಮಗಳಲ್ಲಿ 45 ದಿನಗಳ ಕಾಲ ಪ್ರತಿ ದಿನ ಬೀದಿ ನಾಟಕ ಪ್ರದರ್ಶನವನ್ನು ಏರ್ಪಡಿಸಬೇಕು. ಈ ಎಲ್ಲಾ ಪ್ರಚಾರದ ವರದಿಗಳನ್ನು ಕೆಪಿಸಿಸಿಗೆ ವರದಿ ರೂಪದಲ್ಲಿ ಸಲ್ಲಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ಜೆಡಿಎಸ್‌ನತ್ತ ಬಿಜೆಪಿ-ಕಾಂಗ್ರೆಸ್‌ ಮುಖಂಡರ ಚಿತ್ತ..!

ಗ್ಯಾರಂಟಿ ಘೋಷಣೆ ಬಗ್ಗೆ ಸಮರ್ಥನೆ

ಕಾಂಗ್ರೆಸ್‌ ಘೋಷಿಸಿರುವ ‘ಗೃಹ ಜ್ಯೋತಿ’, ‘ಗೃಹ ಲಕ್ಷ್ಮಿ’ ಯೋಜನೆಗಳ ಅನುಷ್ಠಾನದ ಬಗ್ಗೆ ಮನೆ-ಮನೆ ಪ್ರಚಾರದ ವೇಳೆ ಸಮರ್ಥನೆ ನೀಡಬೇಕು. 3 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ನಲ್ಲಿ ಸೋರಿಕೆ ತಡೆಗಟ್ಟಿಕಾಂಗ್ರೆಸ್‌ ತಾನು ನೀಡಿರುವ ಭರವಸೆ ಈಡೇರಿಸಲಿದೆ. 200 ಯುನಿಟ್‌ ಉಚಿತ ವಿದ್ಯುತ್‌ಗೆ 6 ರಿಂದ 8 ಸಾವಿರ ಕೋಟಿ ರು. ವೆಚ್ಚವಾಗಲಿದೆ. ಗೃಹ ಲಕ್ಷ್ಮಿ ಯೋಜನೆಗೆ 20 ಸಾವಿರ ಕೋಟಿ ರು. ಖರ್ಚಾಗಲಿದೆ. ಅನ್ನಭಾಗ್ಯ ಹಾಗೂ ನರೇಗಾದಂತಹ ಯೋಜನೆ ಜಾರಿಗೆ ತರುವಾಗಲೂ ಅನುಷ್ಠಾನ ಅಸಾಧ್ಯ ಎಂದು ಪ್ರತಿಪಕ್ಷಗಳು ಹೇಳಿದ್ದವು. ಆಗ ಮಾಡಿ ತೋರಿಸಿದಂತೆ ಈಗಲೂ ಭರವಸೆ ಈಡೇರಿಸುತ್ತೇವೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಫೆ.3ರಿಂದ 2ನೇ ಹಂತದ ಬಸ್‌ ಯಾತ್ರೆ

ಫೆ.3ರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಎರಡನೇ ಹಂತದ ಬಸ್‌ ಯಾತ್ರೆ ಆರಂಭ ಮಾಡಲು ಸಭೆಯಲ್ಲಿ ಚರ್ಚಿಸಲಾಗಿದೆ. ಫೆ.3ರಂದು ಸಿದ್ದರಾಮಯ್ಯ ಅವರು ಬಸವ ಕಲ್ಯಾಣದಿಂದ ಉತ್ತರ ಕರ್ನಾಟಕ ಭಾಗದ ಪ್ರವಾಸ ಹಾಗೂ ಡಿ.ಕೆ. ಶಿವಕುಮಾರ್‌ ಅವರು ಕೋಲಾರದ ಮುಳಬಾಗಿಲಿನ ಕುರುಡುಮಲೆಯಿಂದ ದಕ್ಷಿಣ ಕರ್ನಾಟಕ ಭಾಗದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios