* ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಅನ್ಶು ಮಲಿಕ್* ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು* ಫೈನಲ್‌ನಲ್ಲಿ ಅಮೆರಿಕದ ಹೆಲೆನ್ ಮರೌಲಿಸ್ ವಿರುದ್ಧ ಸೋಲು
ಓಸ್ಲೊ(ಅ.08) ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ (World Wrestling Championships) ನಲ್ಲಿ ಭಾರತದ ಯುವ ಕುಸ್ತಿಪಟು ಅನ್ಶು ಮಲಿಕ್ (Anshu Malik) ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.
ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 20 ವರ್ಷದ ಅನ್ಶು, ಅಮೆರಿಕದ ಹೆಲೆನ್ ಮರೌಲಿಸ್ ವಿರುದ್ಧ ಸೋಲುಂಡರು. ಟೂರ್ನಿಯಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದ ಅನ್ಶು, ಫೈನಲ್‌ನಲ್ಲಿ ಟೋಕಿಯೋ ಒಲಿಂಪಿಕ್ಸ್ (Tokyo Olympics) ಕಂಚು ವಿಜೇತೆ ವಿರುದ್ಧ ಪಾರಮ್ಯ ಮೆರೆಯಲು ಸಾಧ್ಯವಾಗಲಿಲ್ಲ.
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿ ಇತಿಹಾಸ ನಿರ್ಮಿಸಿದ ಅನ್ಶು ಮಲಿಕ್!
ಈ ಮೊದಲು ಗೀತಾ ಫೋಗಾಟ್(2012), ಬಬಿತಾ ಫೋಗಾಟ್(2012), ಪೂಜಾ ಧಂಡಾ(2018) ಹಾಗೂ ವಿನೇಶ್ ಫೋಗಾಟ್(2019)ರಲ್ಲಿ ಕಂಚಿನ ಪದಕ ಜಯಿಸಿದ್ದರು. ಒಟ್ಟಾರೆ ಫೈನಲ್ ಪ್ರವೇಶಿಸಿದ ಭಾರತ 6ನೇ ಕುಸ್ತಿಪಟು ಎನ್ನುವ ಹಿರಿಮೆಗೆ ಅನ್ಶು ಪಾತ್ರರಾದರು. ಈ ವರೆಗೂ ಸುಶೀಲ್ ಕುಮಾರ್(2010) ಮಾತ್ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಕಂಚಿನ ಪದಕ ಗೆದ್ದ ಸರಿತಾ:
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಮಹಿಳೆಯರ 59 ಕೆ.ಜಿ. ವಿಭಾಗದಲ್ಲಿ ಸರಿತಾ ಮೊರ್ ಕಂಚಿನ ಪದಕ ಜಯಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತಕ್ಕೆ ಎರಡನೇ ಪದಕ ಗೆದ್ದುಕೊಟ್ಟರು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸ್ವೀಡನ್‌ನ ಸಾರಾ ಲಿಂಡ್‌ಬೊರ್ಗ್ ವಿರುದ್ದ 8-2ರ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದರು.
ಸೆಮಿಫೈನಲ್‌ನಲ್ಲಿ ಸೋತಿದ್ದ ಸರಿತಾ, ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು. ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 7ನೇ ಪದಕ ಗೆದ್ದ ಭಾರತದ ಕುಸ್ತಿಪಟು ಎನ್ನುವ ಹಿರಿಮೆಗೆ ಸರಿತಾ ಪಾತ್ರರಾಗಿದ್ದಾರೆ.
