ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್: ರವೀಂದರ್‌ಗೆ ಒಲಿದ ಬೆಳ್ಳಿ ಪದಕ
* ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 6 ಪದಕ ಬಾಚಿಕೊಂಡ ಭಾರತ
* 61 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ ರವೀಂದರ್
* ಪುರುಷರ ಫ್ರೀ ಸ್ಟೈಲ್ ವಿಭಾಗದಲ್ಲಿ 6 ಪದಕ ಗೆದ್ದ ಭಾರತದ ಕುಸ್ತಿಪಟುಗಳು
ರಷ್ಯಾ(ಆ.19): ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ರವೀಂದರ್(61 ಕೆ.ಜಿ.) ವಿಭಾಗದಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡರೆ, ಮಹಿಳಾ ವಿಭಾಗದಲ್ಲಿ ಬಿಪಾಶಾ 76 ಕೆ.ಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ರವೀಂದರ್ ಇರಾನಿನ ಮೌಸಾ ವಿರುದ್ದ 9-3ರಲ್ಲಿ ಮುಗ್ಗರಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಯಶ್(74 ಕೆ.ಜಿ), ಅನಿರುದ್ಧ್(125 ಕೆ.ಜಿ), ಪೃಥ್ವಿ ಪಾಟೀಲ್(92 ಕೆ.ಜಿ),ಕಂಚಿನ ಪದಕ ಜಯಿಸಿದರು. ಈ ಮೊದಲು ದೀಪಕ್ ಪೂನಿಯಾ(97 ಕೆ.ಜಿ) ಹಾಗೂ ಗೌರವ್ ಬಲಿಯಾನ್(55 ಕೆ.ಜಿ) ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಇದರೊಂದಿಗೆ ಭಾರತದ ಪುರುಷರ ಫ್ರೀ ಸ್ಟೈಲ್ ಕುಸ್ತಿ ಅಭಿಯಾನ 6 ಪದಕಗಳೊಂದಿಗೆ ಅಂತ್ಯವಾಯಿತು.
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ದೀಪಕ್ ಪೂನಿಯಾ, ಗೌರವ್ ಸೆಮೀಸ್‌ಗೆ ಲಗ್ಗೆ
ಇನ್ನು ಮಹಿಳೆಯರ ಕುಸ್ತಿ ವಿಭಾಗದಲ್ಲಿ ಬಿಪಾಶಾ ಚಿನ್ನದ ಪದಕದ ಮೇಲೆ ಚಿತ್ತ ನೆಟ್ಟಿದ್ದರೆ, ಸಿಮ್ರನ್(50 ಕೆ.ಜಿ), ಸಿಟೊ(55 ಕೆ.ಜಿ), ಕುಸಮ್(59 ಕೆ.ಜಿ) ಹಾಗೂ ಅರ್ಜು(68 ಕೆ.ಜಿ) ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ.