19 ವರ್ಷದ ಭಾರತದ ಯುವ ಚೆಸ್ ಚಾಂಪಿಯನ್ ಡಿ.ಗುಕೇಶ್, ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಮೊದಲ ಕ್ಲಾಸಿಕಲ್ ಗೆಲುವು ದಾಖಲಿಸಿದ್ದಾರೆ. ಈ ಸೋಲಿನಿಂದ ಕಾರ್ಲ್‌ಸನ್ ಬೋರ್ಡ್‌ಗೆ ಪಂಚ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ಟ್ರೋಲ್‌ಗೆ ಒಳಗಾಗಿದ್ದಾರೆ. 

ನಾರ್ವೆ: ಇತ್ತೀಚೆಗೆ 19ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ ಭಾರತದ ಯುವ ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್, ನಾರ್ವೆ ಚೆಸ್ ಟೂರ್ನಿಯ 6ನೇ ರೌಂಡ್‌ನಲ್ಲಿ ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ತನ್ನ ಮೊದಲ ಕ್ಲಾಸಿಕಲ್ ಗೆಲುವು ದಾಖಲಿಸಿ ಇತಿಹಾಸ ಬರೆದಿದ್ದಾರೆ. ಇದರ ಜತೆಗೆ ಹಾಲಿ ವಿಶ್ವ ಚಾಂಪಿಯನ್ ಡಿ ಗುಕೇಶ್, ಇದೇ ಮೊದಲ ಬಾರಿ ಕ್ಲಾಸಿಕಲ್ ಗೇಮ್‌ನಲ್ಲಿ ವಿಶ್ವ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ತಾಳ್ಮೆಕಳೆದುಕೊಂಡಂತೆ ವರ್ತಿಸಿದ ಕಾರ್ಲ್‌ಸನ್ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ.

ಮೊದಲ ರೌಂಡ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೋತು ಕಳವಳಕ್ಕೊಳಗಾಗಿದ್ದ ಗುಕೇಶ್ ಭಾನುವಾರದ ಪಂದ್ಯದಲ್ಲಿಯೂ ಮೊದಲಿಗೆ ಸಂಕಷ್ಟದಲ್ಲಿ ಸಿಲುಕಿದಂತೆಯೇ ತೋರಿದ್ರು. ಆದರೆ, ತನ್ನ ಶಾಂತ ಸ್ವಭಾವ ಹಾಗೂ ತೀಕ್ಷ್ಣ ತಂತ್ರಜ್ಞಾನದ ಸಹಾಯದಿಂದ ಬಿಳಿ ಕಾಯಿನ್ ಮುನ್ನಡೆಸಿದ ಅವರು 62 ಚಲನೆಯ ಸಂಕೀರ್ಣ ಪಂದ್ಯವನ್ನು 4 ಗಂಟೆಗಳ ತೀವ್ರ ಒತ್ತಡದ ನಂತರ ಗೆದ್ದರು. ಈ ಗೆಲುವಿನೊಂದಿಗೆ ಗುಕೇಶ್ ತನ್ನ ಅಂಕವನ್ನು 8.5ಕ್ಕೆ ಏರಿಸಿಕೊಂಡು, ಮ್ಯಾಗ್ನಸ್ ಕಾರ್ಲ್‌ಸನ್ ಹಾಗೂ ಅಮೆರಿಕಾದ ಫ್ಯಾಬಿಯಾನೋ ಅವರಿಗಿಂತ ಕೇವಲ 1 ಅಂಕ ಹಿಂದಿದ್ದಾರೆ. ಈ ಜಯ ಟೂರ್ನಿಯ ಮುಂದಿನ ಹಂತಗಳಲ್ಲಿ ಅವರ ಆತ್ಮವಿಶ್ವಾಸವನ್ನೂ, ಪಯಣವನ್ನೂ ಬಲಗೊಳಿಸಲಿದೆ.

Scroll to load tweet…

Scroll to load tweet…

ಇನ್ನು ಗುಕೇಶ್ ಎದುರು ಈ ಚೆಸ್ ಪಂದ್ಯವನ್ನು ಸೋಲುತ್ತಿದ್ದಂತೆಯೇ ವಿಶ್ವ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್‌ಸನ್ ಚೆಸ್ ಬೋರ್ಡ್‌ಗೆ ಕೈಯಿಂದ ಪಂಚ್ ಮಾಡಿ ತಾಳ್ಮೆ ಕಳೆದುಕೊಂಡು ವರ್ತಿಸಿದರು. ಓರ್ವ ದಿಗ್ಗಜ ವೃತ್ತಿಪರ ಚೆಸ್ ಪಟುವಾಗಿ ಗುರುತಿಸಿಕೊಂಡಿರುವ ಮ್ಯಾಗ್ನಸ್ ಕಾರ್ಲ್‌ಸನ್, ಈ ರೀತಿ ವರ್ತನೆ ತೋರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಪೋಲಿಷ್ ಕೋಚ್ ಗ್ರೆಗೊರ್ಜ್ ಗಾಜೇವ್ಸ್ಕಿ, “ಈ ಜಯ ಗುಕೇಶ್‌ಗೆ ಭಾರಿ ಆತ್ಮವಿಶ್ವಾಸ ನೀಡುತ್ತದೆ. ಈ ಮೇಲಿಂದ ಮೇಲೆ ಕಾರ್ಲ್ಸನ್ ವಿರುದ್ಧ ಮತ್ತೆ ಗೆಲ್ಲಬಹುದು ಅನ್ನೋ ನಂಬಿಕೆ ಬರಲಿದೆ. ಈ ಗೆಲುವು ಟೂರ್ನಿಯ ಮುಂದಿನ ಹಂತಗಳಲ್ಲೂ ಸಹ ಧೈರ್ಯ ತುಂಬುತ್ತದೆ,” ಎಂದು ಹೇಳಿದರು.

ಭಾರತದ ಚೆಸ್ ಭವಿಷ್ಯದ ಸ್ಫೂರ್ತಿ:

ಈ ಜಯ ಇತರ ಭಾರತೀಯ ಆಟಗಾರರಿಗೂ ಪ್ರೇರಣೆಯಾಗಲಿದೆ. ಇತ್ತೀಚೆಗೆ ಚೆಸ್‌ನಲ್ಲಿ ಭಾರತವೇ ನೂತನ ಶಕ್ತಿ ಕೇಂದ್ರವಾಯ್ತು ಎನ್ನುವಂತಾಗಿದೆ. ಗುಕೇಶ್ ಈ ಗೆಲುವಿನಿಂದ ತನ್ನ ಸ್ಥಾನವನ್ನು ಬಲಪಡಿಸಿದ್ದು, ಮುಂದಿನ ಆಟಗಾರರಿಗೂ "ಕಾರ್ಲ್ಸನ್ ಅನ್ನು ಸೋಲಿಸುವುದು ಸಾಧ್ಯ" ಎಂಬ ನಂಬಿಕೆಯನ್ನು ನೀಡಿದಂತಾಗಿದೆ.