ಇಂದಿನಿಂದ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಆರಂಭ; ಜೋಕೋ-ಫೆಡರರ್ ಮೇಲೆ ಚಿತ್ತ
* ಐತಿಹಾಸಿಕ ವಿಂಬಲ್ಡನ್ ಗ್ರ್ತಾನ್‌ಸ್ಲಾಂ ಇಂದಿನಿಂದ ಆರಂಭ
* ಹ್ಯಾಟ್ರಿಕ್ ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿರುವ ನೊವಾಕ್ ಜೋಕೋವಿಚ್
* ವಿಂಬಲ್ಡನ್ ಫೈನಲ್‌ನಲ್ಲಿ ಜೋಕೋ-ಫೆಡರರ್ ಮುಖಾಮುಖಿ ಸಾಧ್ಯತೆ
ಲಂಡನ್(ಜೂ.28): 2021ರ 3ನೇ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿ ವಿಂಬಲ್ಡನ್ ಸೋಮವಾರದಿಂದ ಆರಂಭಗೊಳ್ಳಲಿದ್ದು, ಈ ವರ್ಷ 2 ಗ್ರ್ಯಾನ್ ಸ್ಲಾಂ ಗೆದ್ದಿರುವ ನೋವಾಕ್ ಜೋಕೋವಿಚ್ ಹ್ಯಾಟ್ರಿಕ್ ಬರೆಯುವ ನಿರೀಕ್ಷೆಯಲ್ಲಿದ್ದಾರೆ.
ಆಸ್ಪ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಜಯಿಸಿದ್ದ ಸರ್ಬಿಯಾ ಆಟಗಾರನಿಗೆ ಸ್ವಿಜರ್‌ಲೆಂಡ್‌ನ ಟೆನಿಸ್ ಮಾಂತ್ರಿಕ, 8 ಬಾರಿ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್‌ರಿಂದ ಭರ್ಜರಿ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಜುಲೈ 11ಕ್ಕೆ ನಡೆಯಲಿರುವ ಫೈನಲ್‌ನಲ್ಲಿ ಜೋಕೋವಿಚ್ ಹಾಗೂ ಫೆಡರರ್ ಸೆಣಸುವ ಸಾಧ್ಯತೆ ಇದೆ.
ಇದೇ ವೇಳೆ ಫ್ರೆಂಚ್ ಓಪನ್ ಸೆಮೀಸ್‌ನಲ್ಲಿ ಸೋತು ದಾಖಲೆಯ 21 ಗ್ರ್ಯಾನ್ ಸ್ಲಾಂ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದ ಸ್ಪೇನ್‌ನ ರಾಫೆಲ್ ನಡಾಲ್, ವಿಂಬಲ್ಡನ್‌ಗೆ ಗೈರಾಗಲಿದ್ದಾರೆ. ಹೀಗಾಗಿ, ಫೆಡರರ್ ಹಾಗೂ ಜೋಕೋವಿಚ್ ನಡುವೆ ಪ್ರಶಸ್ತಿಗಾಗಿ ನೇರಾನೇರ ಪೈಪೋಟಿ ನಿರೀಕ್ಷೆಸಲಾಗುತ್ತಿದೆ. ಜೋಕೋವಿಚ್ ಈಗಾಗಲೇ 19 ಗ್ರ್ಯಾನ್ ಸ್ಲಾಂಗಳನ್ನು ಗೆದ್ದಿದ್ದು, ವಿಂಬಲ್ಡನ್‌ನಲ್ಲಿ ಜಯಿಸಿದರೆ, ಫೆಡರರ್ ಹಾಗೂ ನಡಾಲ್‌ರ 20 ಗ್ರ್ಯಾನ್ ಸ್ಲಾಂಗಳ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಒಂದೊಮ್ಮೆ ಫೆಡರರ್ ಚಾಂಪಿಯನ್ ಆದರೆ, ನಡಾಲ್ ವಿರುದ್ಧ ಮುನ್ನಡೆ ಸಾಧಿಸಲಿದ್ದಾರೆ.
ವಿಂಬಲ್ಡನ್‌ನಿಂದ ಹಿಂದೆ ಸರಿದ ಸಿಮೋನಾ ಹಾಲೆಪ್
ಸೆರೆನಾಗೆ ಅವಕಾಶ: ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಂ ಗೆಲ್ಲುವ ಸೆರೆನಾ ವಿಲಿಯಮ್ಸ್ ಆಸೆ ಈಡೇರುತ್ತಲೇ ಇಲ್ಲ. 23 ಗ್ರ್ಯಾನ್ ಸ್ಲಾಂಗಳ ಒಡತಿ ಸೆರೆನಾ, ಕೊನೆ ಬಾರಿಗೆ ಗ್ರ್ಯಾನ್ ಸ್ಲಾಂ ಗೆದ್ದಿದ್ದು 2017ರಲ್ಲಿ. ಈ ಬಾರಿ ಅಗ್ರ ಆಟಗಾರ್ತಿಯರಾದ ನವೊಮಿ ಒಸಾಕ, ಹಾಲಿ ಚಾಂಪಿಯನ್ ಸಿಮೋನಾ ಹಾಲೆಪ್ ಟೂರ್ನಿಗೆ ಗೈರಾಗಲಿರುವ ಕಾರಣ, ಸೆರೆನಾಗೆ ಗೆಲುವು ಸುಲಭವಾಗಬಹುದು.
ಸಾನಿಯಾ ಮಿರ್ಜಾ ಕಣಕ್ಕೆ: ತಾಯಿಯಾದ ಬಳಿಕ ಮೊದಲ ಬಾರಿ ಗ್ರ್ಯಾನ್ ಸ್ಲಾಂ ಗೆಲ್ಲುವ ಕನಸನ್ನು ಭಾರತದ ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಹ ಕಾಣುತ್ತಿದ್ದಾರೆ. 2020ರ ಆಸ್ಪ್ರೇಲಿಯನ್ ಓಪನ್ ವೇಳೆ ಮೊದಲ ಸುತ್ತಿನಲ್ಲೇ ಗಾಯಗೊಂಡು ಹೊರಬಿದ್ದ ಬಳಿಕ ಸಾನಿಯಾ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಂನಲ್ಲಿ ಕಣಕ್ಕಿಳಿಯಲಿದ್ದಾರೆ. ಅಮೆರಿಕದ ಮಟೆಕ್ ಸ್ಯಾಂಡ್ಸ್ ಜೊತೆ ಕಣಕ್ಕಿಳಿಯಲಿದ್ದಾರೆ.
ಬಹುಮಾನ ಮೊತ್ತ:
17.5 ಕೋಟಿ ರುಪಾಯಿ: ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗುವ ಆಟಗಾರ/ಆಟಗಾರ್ತಿಗೆ 17.51 ಕೋಟಿ ರು. ಬಹುಮಾನ ಮೊತ್ತ ಸಿಗಲಿದೆ.
9.27 ಕೋಟಿ ರುಪಾಯಿ: ಸಿಂಗಲ್ಸ್ ವಿಭಾಗದಲ್ಲಿ ರನ್ನರ್-ಅಪ್ ಆಗುವ ಆಟಗಾರ/ಆಟಗಾರ್ತಿಗೆ 9.27 ಕೋಟಿ ರು. ಬಹುಮಾನ ಮೊತ್ತ ಸಿಗಲಿದೆ.