ವಿನೇಶ್ ಫೋಗಟ್ ಒಲಿಂಪಿಕ್ಸ್ ಫೈನಲ್‌ನಿಂದ ಅನರ್ಹವಾಗಿದ್ದೇಕೆ? ಅಷ್ಟಕ್ಕೂ ರೂಲ್ಸ್ ಏನು ಹೇಳುತ್ತೆ..?
ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆ,ಜಿ ಮಹಿಳೆಯರ ಪ್ರಿಸ್ಟೈಲ್ ಫೈನಲ್‌ನಿಂದ ಹೊರಬಿದ್ದಿದ್ದಾರೆ. ಅಷ್ಟಕ್ಕೂ ವಿನೇಶ್ ಹೊರಬಿದ್ದಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಪ್ಯಾರಿಸ್: ಭಾರತೀಯ ಕ್ರೀಡಾ ಅಭಿಮಾನಿಗಳ ಪಾಲಿಗೆ ಇದೀಗ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದಲೇ ಅನರ್ಹವಾಗಿದ್ದಾರೆ. ಮಹಿಳೆಯರ 50 ಕೆ.ಜಿ. ಪ್ರಿಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಇಂದು ತಡರಾತ್ರಿ ಚಿನ್ನದ ಪದಕಕ್ಕಾಗಿ ವಿನೇಶ್ ಕಾದಾಡಬೇಕಿತ್ತು. ಆದರೆ ವಿನೇಶ್ ಫೋಗಟ್, ನಿಗದಿತ 50 ಕೆ.ಜಿ ತೂಕಕ್ಕಿಂತ 100 ಗ್ರಾಮ್ ಹೆಚ್ಚಿಗೆ ತೂಕ ಹೊಂದಿದ್ದರಿಂದ, ಫೈನಲ್ ಪಂದ್ಯದಿಂದಲೇ ಹೊರಬಿದ್ದಿದ್ದಾರೆ.
ಇದೀಗ ವಿನೇಶ್ ಫೋಗಟ್ ಸ್ಪರ್ಧೆಯ ರೂಲ್ಸ್ ಪ್ರಕಾರ, ಚಿನ್ನದ ಪದಕವಿರಲಿ ಬೆಳ್ಳಿ ಅಥವಾ ಕಂಚಿನ ಪದಕ ಪಡೆಯಲು ಕೂಡಾ ವಿಫಲವಾಗಿದ್ದಾರೆ. ಇದು ಭಾರತೀಯರ ಪಾಲಿಗೆ ಹಾಗೂ ವಿನೇಶ್ ಪಾಲಿಗೆ ಆಘಾತಕಾರಿ ಸುದ್ದಿ ಎನಿಸಿದೆ.
ಈ ವಿಚಾರವಾಗಿ ಭಾರತೀಯ ಒಲಿಂಪಿಕ್ ಸಂಸ್ಥೆಯು ಪ್ರಕಟಣೆ ಹೊರಡಿಸಿದ್ದು, "ಮಹಿಳೆಯ 50 ಕೆ.ಜಿ. ವಿಭಾಗದಲ್ಲಿ ತೂಕ ಹೆಚ್ಚಳದ ಕಾರಣದಿಂದ ವಿನೇಶ್ ಫೋಗಟ್ ಅನರ್ಹವಾಗಿದ್ದಾರೆ. ಕಳೆದ ರಾತ್ರಿ ಅವರ ತೂಕ ಇಳಿಸಲು ಸಿಬ್ಬಂದಿಗಳು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ವಿನೇಶ್ ಅವರ ಖಾಸಗಿತನವನ್ನು ಗೌರವವಿಸಿ ಎಂದು ಕೇಳಿಕೊಳ್ಳುತ್ತೇವೆ" ಎಂದು ಮನವಿ ಮಾಡಿದ್ದಾರೆ.
ಫೈನಲ್‌ಗೂ ಮುನ್ನ ವಿನೇಶ್ ಫೋಗಟ್‌ಗೆ ಬಿಗ್ ಶಾಕ್; ಚಿನ್ನದ ಪದಕಕ್ಕೆ ಅನರ್ಹ..!
ಮೂಲಗಳ ಪ್ರಕಾರ, ಪ್ರೀಕ್ವಾರ್ಟರ್, ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯದ ವೇಳೆಯಲ್ಲಿ ವಿನೇಶ್ ಫೋಗಟ್ ನಿಗದಿತ ತೂಕ ಹೊಂದಿದ್ದರು. ಆದರೆ ಕೆಲವು ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ವಿನೇಶ್ ತೂಕ 2 ಕೆ.ಜಿ ಹೆಚ್ಚಾಗಿತ್ತು. ಕಳೆದ ರಾತ್ರಿಯಿಡಿ ವಿನೇಶ್ ಫೋಗಟ್ ಜಾಗಿಂಗ್, ಸ್ಕಿಪ್ಪಿಂಗ್ ಹಾಗೂ ಸೈಕ್ಲಿಂಗ್ ಮಾಡಿ ತೂಕ ಇಳಿಸುವ ಪ್ರಯತ್ನ ನಡೆಸಿದ್ದರು. ಹೀಗಿದ್ದೂ ವಿನೇಶ್ 100 ಗ್ರಾಮ್ ಹೆಚ್ಚಿಗೆ ತೂಕ ಕಂಡುಬಂದಿದೆ.
FYI: Rules for Wrestling weigh-in ⬇️
— India_AllSports (@India_AllSports) August 7, 2024
📸 @wrestling pic.twitter.com/EglEUfr1At
ತೂಕದ ವಿಚಾರದಲ್ಲಿ ರೂಲ್ಸ್ ಏನು?
ಪ್ರತಿ ದಿನದ ಪಂದ್ಯ ಆರಂಭಕ್ಕೂ 12 ಗಂಟೆಗಳ ಮುಂಚೆ ಕುಸ್ತಿಪಟು ತೂಕ ಪರೀಕ್ಷೆಗೆ ಒಳಗಾಗಬೇಕು. ಇದಾದ ಬಳಿಕ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ.
ಮೆಡಿಕಲ್ ಟೆಸ್ಟ್ ಹಾಗೂ ತೂಕದ ಟೆಸ್ಟ್‌ಗೂ ಮುನ್ನ ಕುಸ್ತಿಪಟುಗಳು ತಮ್ಮ ಉಗುರುಗಳನ್ನು ಮೊನಚಾಗಿರದಂತೆ ಕತ್ತರಿಸಿಕೊಂಡಿರಬೇಕು.
ಸ್ಪರ್ಧೆ ನಡೆಯುವ ಪ್ರತಿದಿನ ಬೆಳಗ್ಗೆ ಕುಸ್ತಿಪಟುಗಳು ರೆಫ್ರಿಗಳ ಎದುರು ತೂಕ ಪರೀಕ್ಷೆಗೆ ಒಳಗಾಗಬೇಕು. ಒಂದು ವೇಳೆ ನಿಗದಿತ ತೂಕಕ್ಕಿಂತ ಹೆಚ್ಚಾದಲ್ಲಿ ಅಂತಹ ಸ್ಪರ್ಧಾಳುಗಳು ಅನರ್ಹರಾಗಲಿದ್ದಾರೆ.