ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಾಟ್‌ಗೆ ಅನುಮತಿ
* ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಾಟ್‌ಗೆ ಅವಕಾಶ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಶಿಸ್ತು ತೋರಿದ ಕಾರಣ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು
* ಮತ್ತೊಮ್ಮೆ ಅಶಿಸ್ತು ತೋರಿದರೆ ಆಜೀವ ನಿಷೇಧ ಹೇರುವುದಾಗಿ ಡಬ್ಲ್ಯುಎಫ್‌ಐ ಎಚ್ಚರಿಸಿದೆ
ನವದೆಹಲಿ(ಆ.27): ತಾರಾ ಕುಸ್ತಿಪಟು ವಿನೇಶ್ ಫೋಗಾಟ್‌ಗೆ ಅಕ್ಟೋಬರ್‌ನಲ್ಲಿ ನಾರ್ವೆಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಅನುಮತಿ ನೀಡಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಶಿಸ್ತು ತೋರಿದ ಕಾರಣ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಮತ್ತೊಮ್ಮೆ ಅಶಿಸ್ತು ತೋರಿದರೆ ಆಜೀವ ನಿಷೇಧ ಹೇರುವುದಾಗಿ ಡಬ್ಲ್ಯುಎಫ್‌ಐ ಎಚ್ಚರಿಸಿದೆ. ‘ವಿನೇಶ್ ನೀಡಿದ ಕಾರಣ ಸಮಾಧಾನಕರವಾಗಿಲ್ಲ. ಆದರೂ ಅವರಿಗೆ ಮತ್ತೊಂದು ಅವಕಾಶ ನೀಡುತ್ತಿದ್ದೇವೆ’ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ತಿಳಿಸಿದ್ದಾರೆ.
ಟೋಕಿಯೋ ಗೇಮ್ಸ್ ವೇಳೆ ವಿನೇಶ್ ಭಾರತೀಯ ಕುಸ್ತಿಪಟುಗಳೊಂದಿಗೆ ಅಭ್ಯಾಸ ನಡೆಸಲು ನಿರಾಕರಿಸಿದ್ದರು. ಅಲ್ಲದೇ ಕ್ರೀಡಾ ಗ್ರಾಮದಲ್ಲಿ ಉಳಿದುಕೊಂಡಿರಲಿಲ್ಲ. ಪ್ರಾಯೋಜಕತ್ವ ನೀಡಿದ್ದ ಸಂಸ್ಥೆಯ ಲೋಗೋ ಬದಲು ಬೇರೆ ಸಂಸ್ಥೆಯ ಉಡುಪನ್ನು ಪಂದ್ಯಗಳಿಗೆ ಧರಿಸಿದ್ದರು. ಇನ್ನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವಿನೇಶ್ ಪದಕ ಗೆಲ್ಲಲು ವಿಫಲರಾಗಿದ್ದರು.
ಕುಸ್ತಿ ಫೆಡರೇಷನ್ ಕ್ಷಮೆ ಕೋರಿದ ತಾರಾ ಕುಸ್ತಿಪಟು ವಿನೇಶ್ ಫೋಗಾಟ್
ವಿನೇಶ್ ಭಾರತಕ್ಕೆ ವಾಪಾಸ್ಸಾಗುತ್ತಿದ್ದಂತೆಯೇ ಅಶಿಸ್ತು ತೋರಿದ ಆರೋಪದಡಿ ಮಹಿಳಾ ಕುಸ್ತಿಪಟುವನ್ನು WFI ಅಮಾನತು ಮಾಡಿತ್ತು. ಇದರ ಜತೆಗೆ ಶೋಕಾಸ್ ನೋಟಿಸ್ ನೀಡಿತ್ತು. ಇದಾದ ಬಳಿಕ ವಿನೇಶ್ ಭಾರತೀಯ ಕುಸ್ತಿ ಫೆಡರೇಷನ್ ಬಳಿ ಕ್ಷಮೆ ಕೋರಿದ್ದರು. ಇದರ ಬೆನ್ನಲ್ಲೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಅನುಮತಿ ನೀಡಿದೆ.