ಭಾರತದ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ ಆಡುವ ಕನಸು ಕಾಣುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕೋಲ್ಕತಾ(ಜ.27): ಭಾರತದ ದಿಗ್ಗಜ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ನಿವೃತ್ತಿಯನ್ನು ಮುಂದೂಡಲು ನಿರ್ಧರಿಸಿದ್ದು ಈ ವರ್ಷ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂನಲ್ಲಿ ಆಡಲು ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 

ಅಲ್ಲದೇ ದಾಖಲೆಯ 8ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ತಮ್ಮ ಗುರಿ ಎಂದು ಪೇಸ್‌ ಹೇಳಿದ್ದಾರೆ. 2020ರಲ್ಲಿ ವೃತ್ತಿಬದುಕಿಗೆ ವಿದಾಯ ಹೇಳುವುದಾಗಿ ಘೋಷಿಸಿದ್ದ ಪೇಸ್‌, ಕೋವಿಡ್‌ನಿಂದಾಗಿ ಒಲಿಂಪಿಕ್ಸ್‌ ಮುಂದೂಡಿಕೆಯಾದ ಕಾರಣ, ತಮ್ಮ ನಿವೃತ್ತಿಯನ್ನೂ ಮುಂದೂಡಿದ್ದಾರೆ.

1996ರಲ್ಲಿ ನಡೆದ ಅಟ್ಲಾನ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ಲಿಯಾಂಡರ್‌ ಪೇಸ್‌, ಟೋಕಿಯೋ ಒಲಿಂಪಿಕ್ಸ್‌ ನಡೆಯುತ್ತೋ, ಇಲ್ಲವೋ ಗೊತ್ತಿಲ್ಲ, ಆದರೆ ಈ ಒಲಿಂಪಿಕ್ಸ್‌ ಆಡಬೇಕು ಎನ್ನುವ ಧ್ಯೇಯವನ್ನು ಹೊಂದಿದ್ಧೇನೆಂದು ಹೇಳಿದ್ದಾರೆ. ಭಾರತದ ಟೆನಿಸ್ ಆಟಗಾರನೊಬ್ಬ 8 ಬಾರಿ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ ಎಂದು ರೆಕಾರ್ಡ್‌ ಪುಸ್ತಕದಲ್ಲಿ ದಾಖಲಾಗಬೇಕು ಎನ್ನುವ ಬಯಕೆಯಿದೆ ಎಂದು ಪೇಸ್ ಹೇಳಿದ್ದಾರೆ.

ಈ ವರ್ಷ ಟೆನಿಸಿಗ ಲಿಯಾಂಡರ್ ಪೇಸ್‌ ನಿವೃತ್ತಿ ಇಲ್ಲ?

ಲಿಯಾಂಡರ್ ಪೇಸ್‌ ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತಿಲ್ಲ, ಆದರೆ ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಆಡುವ ಮೂಲಕ ಒಲಿಂಪಿಕ್ಸ್‌ಗೆ ಸಿದ್ದತೆ ನಡೆಸಲು ಪೇಸ್ ಎದುರು ನೋಡುತ್ತಿದ್ದಾರೆ.