Neeraj Chopra ಹೊಸ ಟ್ರೆಂಡ್: ದೇಶದೆಲ್ಲೆಡೆ ಹೆಚ್ಚಾಯ್ತು ಜಾವೆಲಿನ್ ಕ್ರೇಜ್!
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ
* ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ದೇಶಕ್ಕೆ ಚಿನ್ನದ ಪದಕ ಜಯಿಸಿದ್ದ ಚೋಪ್ರಾ
* ದೇಶದಲ್ಲಿ ಜಾವೆಲಿನ್ ಥ್ರೋ ಟ್ರೆಂಡ್ ಇದೀಗ ದಿನದಿಂದ ದಿನಕ್ಕೆ ಹೆಚ್ಚಾಗಿದೆ
ನವದೆಹಲಿ(ಅ.03): ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಐತಿಹಾಸಿಕ ಚಿನ್ನ ಜಯಿಸಿದ ಬಳಿಕ, ದೇಶದೆಲ್ಲೆಡೆ ಯುವ ಕ್ರೀಡಾಳುಗಳಲ್ಲಿ ಜಾವೆಲಿನ್ ಥ್ರೋ ಮೇಲಿನ ಆಸಕ್ತಿ ಹೆಚ್ಚಿದೆ. ಜೊತೆಗೆ ಕೋಚಿಂಗ್ ಸೆಂಟರ್, ತರಬೇತುದಾರರು, ಜಾವೆಲಿನ್ ತಯಾರಕರಿಗೂ ಬೇಡಿಕೆ ಹೆಚ್ಚಾಗಿದೆ.
ಸಾಮಾನ್ಯವಾಗಿ ಭಾರತದಲ್ಲಿ ಕ್ರಿಕೆಟ್ ಮೇಲೆ ಮಕ್ಕಳಿಗೆ ಆಸಕ್ತಿ ಜಾಸ್ತಿ. ಆದರೆ ನೀರಜ್ ಒಲಿಂಪಿಕ್ಸ್‌ನಲ್ಲಿ ಬಂಗಾರಕ್ಕೆ ಮುತ್ತಿಟ್ಟ ಬಳಿಕ ಈ ಚಿತ್ರಣ ಬದಲಾಗಿದೆ. ಯುವ ಕ್ರೀಡಾಪಟುಗಳು ಜಾವೆಲಿನ್ ಥ್ರೋ (Javelin Throw) ತರಬೇತಿಯತ್ತ ಮುಖ ಮಾಡುತ್ತಿದ್ದಾರೆ. ದೇಶದ ಪ್ರಮುಖ ಕ್ರೀಡಾ ಅಕಾಡೆಮಿಗಳಲ್ಲಿ ಜಾವೆಲಿನ್ ಥ್ರೋ ಅಭ್ಯಾಸಕ್ಕಾಗಿ ಹೊಸ ದಾಖಲಾತಿಯಲ್ಲೂ ಏರಿಕೆಯಾಗಿದೆ. ಕುಸ್ತಿಗೆ ಹೆಸರುವಾಸಿಯಾಗಿರುವ ಡೆಲ್ಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಕಳೆದೆರಡು ತಿಂಗಳಲ್ಲಿ 40 ವಿದ್ಯಾರ್ಥಿಗಳು ಜಾವೆಲಿನ್ ಎಸೆತ ತರಬೇತಿಗಾಗಿ ಸೇರ್ಪಡೆಯಾಗಿದ್ದಾರೆ.
ಚಿನ್ನದ ಹುಡುಗ ನೀರಜ್ ಚೋಪ್ರಾ ಹೊಸ ಜಾಹೀರಾತು: ವೈರಲ್!
‘ನನ್ನ 12 ವರ್ಷದ ವೃತ್ತಿ ಬದುಕಿನಲ್ಲಿ ಈ ರೀತಿಯ ಆಸಕ್ತಿ ಕಂಡಿಲ್ಲ. ಒಲಿಂಪಿಕ್ಸ್ ಬಳಿಕ ಹಲವು ಮಂದಿ ನಾವಿನ್ನು ಜಾವೆಲಿನ್ ಆಡುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ವಿಚಾರಿಸಲು ಪ್ರತಿದಿನ ಹಲವಾರು ಕರೆಗಳು ಬರುತ್ತಿವೆ’ ಎಂದು ಕೋಚ್ ರಮನ್ ಜಾ ಹೇಳಿದ್ದಾರೆ. ರಾಷ್ಟ್ರೀಯ ಮಾಜಿ ಜಾವೆಲಿನ್ ಥ್ರೋ ಚಾಂಪಿಯನ್ ಸುನಿಲ್ ಗೋಸ್ವಾಮಿ, ‘ಜಾವೆಲಿನ್ ಮೇಲಿನ ಆಸಕ್ತಿ ರಾಷ್ಟ್ರ ರಾಜಧಾನಿಗೆ ಮಾತ್ರ ಸೀಮಿತವಾಗಿಲ್ಲ. ಟೆನಿಸ್, ಜಿಮ್ನಾಸ್ಟ್, ಓಟಗಾರರು ಇದೀಗ ಜಾವೆಲಿನ್ ಥ್ರೋ ತರಬೇತಿಗಾಗಿ ಬರುತ್ತಿದ್ದಾರೆ’ ಎಂದಿದ್ದಾರೆ.
ಜಾವೆಲಿನ್‌ಗೂ ಭಾರೀ ಡಿಮ್ಯಾಂಡ್: ಇಂಧೋರ್ ಮೂಲದ ಕ್ರೀಡಾ ಸಾಮಾಗ್ರಿ ತಯಾರಿಕಾ ಕಂಪೆನಿ ಅಮೆಂಟಮ್ ಸ್ಪೋರ್ಟ್ಸ್, ಆಗಸ್ಟ್‌ನಿಂದ ಜಾವೆಲಿನ್ ಮಾರಾಟದಲ್ಲಿ 3 ಪಟ್ಟು ಹೆಚ್ಚಾಗಿದೆ ಎಂದ ತಿಳಿಸಿದೆ.
‘ಒಲಿಂಪಿಕ್ಸ್ ಬಳಿಕ ಪರಿಸ್ಥಿತಿ ಬದಲಾಗಿದೆ. ದೇಶದೆಲ್ಲೆಡೆಯಿಂದ ನಮಗೆ ಪ್ರತಿದಿನ ಕರೆಗಳು ಬರುತ್ತಿವೆ. ನಮ್ಮಲ್ಲಿ ಅತ್ಯಾಧುನಿಕ ಜಾವೆಲಿನ್‌ಗಳಿವೆ. ಇದರ ಬೆಲೆ .1 ಲಕ್ಷಕ್ಕೂ ಹೆಚ್ಚಿದೆ. ಆದರೆ ಈಗ ಬಜೆಟ್ ಜಾವೆಲಿನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಗ್ಗದ ಬೆಲೆಯ ಜಾವೆಲಿನ್ ಖರೀದಿಸುತ್ತಿದ್ದ ಕೆಲ ಗ್ರಾಹಕರು ಈಗ ಉತ್ತಮ ಗುಣಮಟ್ಟದ ಜಾವೆಲಿನ್ ಕೇಳುತ್ತಿದ್ದಾರೆ’ ಎಂದು ಅಮೆಂಟಮ್ ಪಾಲುದಾರ ಜಿತೇಂದ್ರ ಸಿಂಗ್ ಹೇಳುತ್ತಾರೆ.
ಅಲ್ಲದೇ, ನೀರಜ್ ಚೋಪ್ರಾ (Neeraj Chopra) ಒಲಿಂಪಿಕ್ಸ್ ಚಿನ್ನ ಗೆದ್ದ ದಿನವಾದ ಅ.7ರಂದು ಪ್ರತಿವರ್ಷ ಎಲ್ಲಾ ರಾಜ್ಯಗಳಲ್ಲಿ ಜಾವೆಲಿನ್ ಸ್ಪರ್ಧೆ ಏರ್ಪಡಿಸುವುದಾಗಿ ಎಎಫ್‌ಐ ತಿಳಿಸಿದೆ. ಇದು ಕೂಡಾ ಜಾವೆಲಿನ್ ಮೇಲಿನ ಆಸಕ್ತಿ ಯುವ ಕ್ರೀಡಾಳುಗಳಲ್ಲಿ ಮತ್ತಷ್ಟುಹೆಚ್ಚಾಗಲು ಕಾರಣವಾಗಿದೆ.
ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ)ಗೆ ಜಾವೆಲಿನ್ ಪೂರೈಸುವ ವಿನೆಕ್ಸ್ ಸ್ಪೋರ್ಟ್ಸ್‌ನ ನಿರ್ದೇಶಕ ಅಶುತೋಷ್ ಭಲ್ಲ ‘ಮುಂದಿನ ಆವೃತ್ತಿಯಲ್ಲಿ ಜಾವೆಲಿನ್ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ’ ಎಂದಿದ್ದಾರೆ.
‘ಫಿಟ್‌ನೆಸ್ ಇಲ್ಲದಿರುವ ಮಕ್ಕಳು ಈಗ ಜಾವೆಲಿನ್ ತರಬೇತಿಗೆ ಸೇರಲು ಬರುತ್ತಿದ್ದಾರೆ. ಆದರೆ ಇದು ಕಷ್ಟದ ಆಟ. 2010ರ ಕಾಮನ್‌ವೆಲ್ತ್ ಗೇಮ್ಸ್ ಬಳಿಕ ಅಥ್ಲೆಟಿಕ್ಸ್‌ನತ್ತ ಜನರ ಆಸಕ್ತಿ ಜಾಸ್ತಿಯಾಗಿತ್ತು. ಆದರೆ ಈಗಿನ ಜಾವೆಲಿನ್ ಕ್ರೇಝ್ ಅಭೂತಪೂರ್ವ. ಆದರೆ ಎಲ್ಲವೂ ರಾತ್ರಿ ಬೆಳಗಾಗುವುದರೊಳಗೆ ಆಗಲ್ಲ. ನೀರಜ್ ವಿಶೇಷ ಪ್ರತಿಭೆ’ ಎಂದು ಹಿರಿಯ ಕೋಚ್ ಸುನಿತಾ ರೈ ಹೇಳುತ್ತಾರೆ.