Rafael Nadal: ಟೆನಿಸ್ ದಿಗ್ಗಜನಿಗೆ ಕೊರೋನಾ ಸೋಂಕು ದೃಢ..!

* ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರಿಗೆ ಕೋವಿಡ್ ಪಾಸಿಟಿವ್

* ಟ್ವೀಟ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದ ಸ್ಪೇನ್ ಟೆನಿಸಿಗ

* ಜನವರಿ 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ

 

Tennis Legend Rafael Nadal tests positive for Covid 19 after Abu Dhabi Trip kvn

ಅಬುಧಾಬಿ(ಡಿ.21): ಟೆನಿಸ್‌ ದಿಗ್ಗಜ, ಮಾಜಿ ವಿಶ್ವ ನಂ.1 ರಾಫೆಲ್‌ ನಡಾಲ್‌ಗೆ (Rafael Nadal) ಸೋಮವಾರ ಕೊರೋನಾ ಸೋಂಕು (Coronavirus) ದೃಢಪಟ್ಟಿದೆ. ಇದರಿಂದ ಜನವರಿ 17ರಿಂದ ಆರಂಭವಾಗಲಿರುವ ಆಸ್ಪ್ರೇಲಿಯನ್‌ ಓಪನ್‌ಗೂ (Australian Open) ಮುನ್ನ ನಡಾಲ್‌ಗೆ ತೀವ್ರ ಹಿನ್ನಡೆ ಉಂಟಾಗಿದೆ. ಇತ್ತೀಚೆಗೆ ಅಬುಧಾಬಿ ಟೂರ್ನಿಯಲ್ಲಿ ಆಡಿದ್ದ 20 ಗ್ರ್ಯಾನ್‌ ಸ್ಲಾಂಗಳ ಒಡೆಯ ನಡಾಲ್‌ ಅಲ್ಲಿಂದ ಹಿಂದಿರುಗುವ ವೇಳೆ ಸೋಂಕಿಗೆ ತುತ್ತಾಗಿದ್ದಾರೆ. 

ಈ ಬಗ್ಗೆ ಸ್ವತಃ ನಡಾಲ್‌ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದು, ಕುವೈಟ್‌ ಹಾಗೂ ಅಬುಧಾಬಿಯಲ್ಲಿ (Abu Dhabi) ಪರೀಕ್ಷಿಸಿದ್ದಾಗ ವರದಿ ನೆಗೆಟಿವ್‌ ಬಂದಿತ್ತು. ಆದರೆ ಸ್ಪೇನ್‌ಗೆ ಮರಳಿದಾಗ ಕೋವಿಡ್‌ ದೃಢಪಟ್ಟಿದೆ. ಮುಂದಿನ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡಲಿದ್ದೇನೆ’ ಎಂದಿದ್ದಾರೆ. ಆದರೆ ಜನವರಿ 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕುರಿತಂತೆ ಈಗಲೇ ಯಾವುದೇ ಗ್ಯಾರಂಟಿ ನೀಡುವುದಿಲ್ಲ ಎಂದು ನಡಾಲ್ ಹೇಳಿದ್ದಾರೆ

ಕಿಂಗ್ ಆಫ್ ಕ್ಲೇ ಕೋರ್ಟ್ (King of Clay) ಖ್ಯಾತಿಯ ರಾಫೆಲ್ ನಡಾಲ್ ಗಾಯದ ಸಮಸ್ಯೆಯಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಟೆನಿಸ್‌ ಸ್ಪರ್ಧೆಯಿಂದ ದೂರವೇ ಉಳಿದಿದ್ದರು. ಕಳೆದ ವಿಂಬಲ್ಡನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕಾಲಿನ ಗಾಯಕ್ಕೆ ಒಳಗಾಗಿ ಪಂದ್ಯಾಟದಿಂದ ಹೊರಬಿದ್ದಿದ್ದರು. ಇದಾದ ಬಳಿಕ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟ ಹಾಗೂ ಯುಎಸ್ ಓಪನ್ (US Open) ಗ್ರ್ಯಾಂಡ್‌ಸ್ಲಾಂನಿಂದಲೂ ನಡಾಲ್ ಹೊರಗುಳಿದಿದ್ದರು. 

ಕಿದಂಬಿ ಶ್ರೀಕಾಂತ್‌ ಸಾಧನೆ ಕೊಂಡಾಡಿದ ಮೋದಿ

ನವದೆಹಲಿ: ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (Badminton World Championships) ಬೆಳ್ಳಿ ಪದಕ ಗೆದ್ದ ಭಾರತದ ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌ರನ್ನು (Kidambi Srikanth) ಪ್ರಧಾನಿ ನರೇಂದ್ರ ಮೋದಿ (Narendra Modi) ಕೊಂಡಾಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಶ್ರೀಕಾಂತ್‌ಗೆ ಅಭಿನಂದನೆಗಳು. ಈ ಗೆಲುವು ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಲಿದೆ ಹಾಗೂ ಬ್ಯಾಡ್ಮಿಂಟನ್‌ ಕಡೆ ಜನರ ಆಸಕ್ತಿ ಹೆಚ್ಚಿಸಲಿದೆ’ ಎಂದಿದ್ದಾರೆ. 

ಇದರ ಜೊತೆಗೆ, ಕೇಂದ್ರದ ಮಾಜಿ ಕ್ರೀಡಾ, ಹಾಲಿ ಕಾನೂನು ಸಚಿವ ಕಿರಣ್‌ ರಿಜಿಜು (kiren Rijiju), ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ (Sachin Tendulkar) ಅವರು ಶ್ರೀಕಾಂತ್‌ ಹಾಗೂ ಕಂಚಿನ ಪದಕ ಗೆದ್ದ ಲಕ್ಷ್ಯ ಸೆನ್‌ರನ್ನು ಅಭಿನಂದಿಸಿದ್ದಾರೆ.

BWF World Championships : ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಕಿದಂಬಿ ಶ್ರೀಕಾಂತ್

44 ವರ್ಷಗಳ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ಭಾರತವು ಇದುವರೆಗೂ ಒಟ್ಟು 12 ಪದಕಗಳನ್ನು ಜಯಿಸಿದೆ. ಈ ಪೈಕಿ 11 ಪದಕಗಳು ಸಿಂಗಲ್ಸ್ ವಿಭಾಗದಲ್ಲಿ ಬಂದಿದ್ದರೆ, ಒಂದು ಪದಕ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಬಂದಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮಹಿಳಾ ಆಟಗಾರ್ತಿಯರು 7 ಪದಕ ಜಯಿಸಿದ್ದರೆ, ಪುರುಷರು 4 ಪದಕ ಜಯಿಸಿದ್ದಾರೆ. ಈ ವರ್ಷ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷ ಶಟ್ಲರ್‌ಗಳು 2 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಕಿದಂಬಿ ಶ್ರೀಕಾಂತ್ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಪುರಷ ಶಟ್ಲರ್ ಎನ್ನುವ ದಾಖಲೆ ಬರೆದಿದ್ದಾರೆ. ಈ ಮೊದಲು ಪ್ರಕಾಶ್ ಪಡುಕೋಣೆ, ಬಿ ಸಾಯಿ ಪ್ರಣೀತ್ ಹಾಗೂ ಈ ಆವೃತ್ತಿಯಲ್ಲಿ ಲಕ್ಷ್ಯ ಸೆನ್ ಕಂಚಿನ ಪದಕ ಜಯಿಸಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್‌ ಅಥ್ಲೀಟ್ಸ್‌ ಆಯೋಗಕ್ಕೆ ಸಿಂಧು ಆಯ್ಕೆ

ನವದೆಹಲಿ: 2 ಬಾರಿಯ ಒಲಿಂಪಿಕ್‌ ಪದಕ ವಿಜೇತೆ, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು (PV Sindhu) ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌(ಬಿಡಬ್ಲ್ಯುಎಫ್‌) ಅಥ್ಲೀಟ್ಸ್‌ ಆಯೋಗದ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಇತರೆ ಐವರು ಸದಸ್ಯರ ಜೊತೆ ಸಮಿತಿಗೆ ನೇಮಕಗೊಂಡಿದ್ದು, 2025ರವರೆಗೆ ಸದಸ್ಯೆಯಾಗಿರಲಿದ್ದಾರೆ ಎಂದು ಬಿಡಬ್ಲ್ಯುಎಫ್‌ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ. 

ಸಮಿತಿಯು ಶೀಘ್ರದಲ್ಲಿ ಸಭೆ ಸೇರಲಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ. 2016ರಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಸಿಂಧು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು 1 ಚಿನ್ನ, 2 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios