ಮೇ 15ಕ್ಕೆ ಬೆಂಗಳೂರು 10ಕೆ ಮ್ಯಾರಥಾನ್
* 2 ವರ್ಷಗಳ ಬಳಿಕ ಬೆಂಗಳೂರು 10ಕೆ ಮ್ಯಾರಥಾನ್
* ಮೇ 15ರಂದು ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ಪರ್ಧೆ
* ಒಟ್ಟು 1.60 ಕೋಟಿ ರುಪಾಯಿ ಬಹುಮಾನ ಮೊತ್ತದ ಸ್ಪರ್ಧೆ
ಬೆಂಗಳೂರು(ಮಾ.25): ಕೋವಿಡ್‌ನಿಂದಾಗಿ (COVID 19) ಎರಡು ವರ್ಷ ಸ್ಥಗಿತಗೊಂಡಿದ್ದ ಪ್ರತಿಷ್ಠಿತ ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್ ಮೇ 15ರಂದು ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ಸ್ಪರ್ಧೆಯನ್ನು ಎರಡು ವಿಧದಲ್ಲಿ ಆಯೋಜಿಸಲಾಗುತ್ತಿದೆ. ಒಂದು ಕ್ರೀಡಾಂಗಣದಲ್ಲಿ ನಡೆದರೆ ಮತ್ತೊಂದು ವಿಶ್ವದಾದ್ಯಂತ ಸ್ಪರ್ಧಿಗಳು ಆನ್‌ಲೈನ್ ಮೂಲಕ ಪಾಲ್ಗೊಳ್ಳಲಿದ್ದಾರೆ.
IPL 2022: ಟೂರ್ನಿ ಆರಂಭಕ್ಕೂ ಮುನ್ನ ಈ ಬಾರಿ ತಂಡಗಳ ಬಲಾಬಲ ಹೇಗಿದೆ?
ಸ್ಪರ್ಧಿಗಳು ಆ್ಯಪ್ ಮೂಲಕ ನೋಂದಾಯಿಸಿಕೊಂಡು ತಾವಿರುವ ಸ್ಥಳದಿಂದಲೇ ಮ್ಯಾರಥಾನ್‌ನಲ್ಲಿ ಭಾಗವಹಿಸಬಹುದಾಗಿದೆ. ಒಟ್ಟು 1.60 ಕೋಟಿ ರುಪಾಯಿ ಬಹುಮಾನ ಮೊತ್ತದ ಸ್ಪರ್ಧೆಯಲ್ಲಿ ವಿಶ್ವದ ಹಲವು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 25ರಿಂದ ನೋಂದಣಿ ಆರಂಭವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸ್ವಿಸ್ ಓಪನ್: ಕಿದಂಬಿ ಶ್ರೀಕಾಂತ್ ಕ್ವಾರ್ಟರ್‌ಗೆ
ಬಾಸೆಲ್: ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್ (Kidambi Srikanth) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್, ಫ್ರಾನ್ಸ್‌ನ ಕ್ರಿಸ್ಟೋ ಪೊಪೊವ್ ವಿರುದ್ಧ 13-21, 25-23, 21-11 ಗೇಮ್‌ಗಳಿಂದ ಗೆಲುವು ಸಾಧಿಸಿದರು.
ಪಾರುಪಳ್ಳಿ ಕಶ್ಯಪ್, ವಿಶ್ವ ನಂ.1 ವಿಕ್ಟರ್ ಆಕ್ಸೆಲ್ಸೆನ್ ವಿರುದ್ಧ ವಾಕ್‌ಓವರ್ ಪಡೆದು ಕ್ವಾರ್ಟರ್ ತಲುಪಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಾಲಿಹಾ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದರು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಸೋಲನುಭವಿಸಿತು.
ಟೆನಿಸ್ ರ‍್ಯಾಂಕಿಂಗ್: ಮತ್ತೆ ನಂ.1 ಸ್ಥಾನಕ್ಕೆ ಜೋಕೋ
ಬೆಲ್ಗೆ್ರೕಡ್: ಕೋವಿಡ್ ಲಸಿಕೆ ಪಡೆಯದ ಕಾರಣ ಕಳೆದ ಕೆಲ ತಿಂಗಳಿಂದ ಆಸ್ಪ್ರೇಲಿಯನ್ ಓಪನ್ (Australian Open) ಸೇರಿ ಹಲವು ಟೂರ್ನಿಗಳನ್ನು ತಪ್ಪಿಸಿಕೊಂಡಿರುವ 20 ಗ್ರ್ಯಾನ್ ಸ್ಲಾಂಗಳ ಒಡೆಯ ನೋವಾಕ್ ಜೋಕೋವಿಚ್ ವಿಶ್ವ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ಕಳೆದ ತಿಂಗಳಷ್ಟೆಜೋಕೋವಿಚ್‌ರನ್ನು ಹಿಂದಿಕ್ಕಿ ಅಗ್ರ ಸ್ಥಾನ ಪಡೆದಿದ್ದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಕೆಲವೇ ವಾರಗಳಲ್ಲಿ ಈ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಕಳೆದ ವಾರ ಇಂಡಿಯಾನ ವೆಲ್ಸ್ ಟೂರ್ನಿಯ 3ನೇ ಸುತ್ತಿನಲ್ಲಿ ಫ್ರಾನ್ಸ್‌ನ ಗೇಲ್ ಮೋನ್ಫಿಲ್ಸ್ ವಿರುದ್ಧ ಸೋತಿದ್ದು ಮೆಡ್ವೆಡೆವ್ ರ‍್ಯಾಂಕಿಂಗ್‌ನಲ್ಲಿ ಕೆಳಗಿಳಿಯುವಂತೆ ಮಾಡಿದೆ. ರಾಫೆಲ್ ನಡಾಲ್ ರ‍್ಯಾಂಕಿಂಗ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ.
ಟೆಸ್ಟ್ ರ‍್ಯಾಂಕಿಂಗ್: ಮತ್ತೆ ಅಗ್ರಸ್ಥಾನಕ್ಕೇರಿದ ಜಡೇಜಾ
ದುಬೈ: ಐಸಿಸಿ ಟೆಸ್ಟ್ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಭಾರತದ ರವೀಂದ್ರ ಜಡೇಜಾ (Ravindra Jadeja) ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ವೆಸ್ಟ್‌ಇಂಡೀಸ್‌ನ ಜೇಸನ್ ಹೋಲ್ಡರ್‌ರನ್ನು ಜಡೇಜಾ ಹಿಂದಿಕ್ಕಿದ್ದಾರೆ. ಕಳೆದ ವಾರವಷ್ಟೇ ಹೋಲ್ಡರ್ ಅಗ್ರಸ್ಥಾನಕ್ಕೇರಿದ್ದರು. ಇದೇ ವೇಳೆ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಆರ್.ಅಶ್ವಿನ್ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್ ಬುಮ್ರಾ 4ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಏಕದಿನ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲೇ ಮುಂದುವರಿದರೆ, ರೋಹಿತ್ ಒಂದು ಸ್ಥಾನ ಕುಸಿತ ಕಂಡು 4ನೇ ಸ್ಥಾನದಲ್ಲಿದ್ದಾರೆ.
ಲಖನೌ ತಂಡಕ್ಕೆ ಆಸೀಸ್ ವೇಗಿ ಟೈ ಸೇರ್ಪಡೆ
ಮುಂಬೈ: ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ (Mark Wood) ಗಾಯಗೊಂಡು 15ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದ ಕಾರಣ, ಲಖನೌ ಸೂಪರ್ ಜೈಂಟ್ಸ್ ಅವರ ಬದಲು ಆಸ್ಪ್ರೇಲಿಯಾ ವೇಗಿ ಆ್ಯಂಡ್ರೂ ಟೈ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವುಡ್‌ರನ್ನು 7.5 ಕೋಟಿ ರು. ನೀಡಿ ಲಖನೌ ತಂಡ ಹರಾಜಿನಲ್ಲಿ ಖರೀದಿಸಿತ್ತು. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ವೇಳೆ ಅವರು ಮೊಣಕೈ ಗಾಯಕ್ಕೆ ತುತ್ತಾದ ಕಾರಣ ಐಪಿಎಲ್‌ನಿಂದ ಹೊರಬೀಳಬೇಕಾಯಿತು. 27 ಐಪಿಎಲ್ ಪಂದ್ಯಗಳನ್ನಾಡಿರುವ ಟೈ, 1 ಕೋಟಿ ರು.ಗೆ ಲಖನೌ ತಂಡದ ಪರ ಆಡಲು ಒಪ್ಪಿದ್ದಾರೆ.