Asianet Suvarna News Asianet Suvarna News

ಈಜುಕೊಳ ತೆರೆಯಲು ರಾಜ್ಯ ಸರ್ಕಾರಕ್ಕೆ ಮನವಿ

ಕೊರೋನಾ ನಿಯಂತ್ರಿಸುವ ವಿಚಾರದಲ್ಲಿ ರಾಜ್ಯಾದ್ಯಂತ ಈಜುಕೊಳಗಳಿಗೆ ನಿರ್ಬಂಧ ಹೇರಿರುವುದಕ್ಕೆ ಈಜುಗಾರರು ಹಾಗೂ ಕೋಚ್‌ಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Swimmers and Coaches Request State Government to permission for Open Swimming pools kvn
Author
Bengaluru, First Published Apr 6, 2021, 10:53 AM IST

ಬೆಂಗಳೂರು(ಏ.06): ಕೊರೋನಾ ಸೋಂಕು ತಡೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಈಜುಕೊಳಗಳ ಬಳಕೆಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು, ಈಜುಕೊಳಗಳನ್ನು ತಕ್ಷಣ ತೆರೆಯಬೇಕು ಎಂದು ಈಜುಗಾರರು, ಕೋಚ್‌ಗಳು ಆಗ್ರಹಿಸಿದ್ದಾರೆ. 

ಸೋಮವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ 600ಕ್ಕೂ ಹೆಚ್ಚು ಈಜುಗಾರರು, ಕೋಚ್‌ಗಳು, ನೋಂದಾಯಿತ ಈಜುಕೊಳಗಳ ಸದಸ್ಯರು, ಈಜುಪಟುಗಳ ಪೋಷಕರು ಮೌನ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. 

ಇದಕ್ಕೂ ಮುನ್ನ, ಕರ್ನಾಟಕ ಈಜು ಸಂಸ್ಥೆ (ಕೆಎಸ್‌ಎ) ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಗೋಪಾಲ್‌ ಹೊಸೂರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಆರೋಗ್ಯ ಸಚಿವ ಡಾ ಕೆ. ಸುಧಾಕರ್‌ ಹಾಗೂ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರನ್ನು ಭೇಟಿ ಮಾಡಿ, ‘ಸ್ಪರ್ಧಾತ್ಮಕ ಈಜುಪಟುಗಳಿಗೆ ಅಭ್ಯಾಸ ಪುನಾರಂಭಿಸಲು ಶೀಘ್ರ ಅವಕಾಶ ನೀಡಬೇಕು. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಕೆಲ ತಾರಾ ಈಜುಪಟುಗಳು ಸಿದ್ಧತೆ ನಡೆಸುತ್ತಿದ್ದಾರೆ. 20 ದಿನಗಳ ಕಾಲ ಈಜುಕೊಳಗಳನ್ನು ಮುಚ್ಚಿದರೆ ಸಮಸ್ಯೆಯಾಗಲಿದೆ. 1000ಕ್ಕೂ ಹೆಚ್ಚು ಸ್ಪರ್ಧಾತ್ಮಕ ಈಜುಪಟುಗಳ ಅಭ್ಯಾಸಕ್ಕೆ ತೊಂದರೆಯಾಗಲಿದೆ. ಹೀಗಾಗಿ ಶೀಘ್ರ ಈಜುಕೊಳಗಳನ್ನು ತೆರೆಯಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು. ಮಂಗಳವಾರ ಸರ್ಕಾರದಿಂದ ಈಜುಕೊಳ ತೆರೆಯಲು ಅನುಮತಿ ದೊರೆಯುವ ನಿರೀಕ್ಷೆ ಇದೆ ಎಂದು ಗೋಪಾಲ್‌ ಹೊಸೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಥೇಟರ್‌ಗಳಲ್ಲಿ ಶೇ.100 ರಷ್ಟು ಸೀಟು ಭರ್ತಿ ಬೆನ್ನಲ್ಲೇ ಜಿಮ್‌ಗೂ ಸಿಕ್ತು ಚಾನ್ಸ್!

‘ಈಜುಪಟುಗಳು ಮಾತ್ರವಲ್ಲ, ರಾಜ್ಯಾದ್ಯಂತ 10,000ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಜೀವನಕ್ಕೆ ಈಜುಕೊಳಗಳನ್ನು ನೆಚ್ಚಿಕೊಂಡಿವೆ. ಅವರೆಲ್ಲರ ದೈನಂದಿನ ಜೀವನಕ್ಕೆ ತೊಂದರೆಯಾಗಲಿದೆ. ನೀರಿನಿಂದ ಕೋವಿಡ್‌ ಹರಡುವುದಿಲ್ಲ ಎಂದು ವೈದ್ಯಕೀಯ ವರದಿಗಳಲ್ಲಿ ಸ್ಪಷ್ಟವಾಗಿದೆ. ಕಳೆದ ವರ್ಷ ಬಹುತೇಕ ಮುಚ್ಚಿದ್ದ ಈಜುಕೊಳಗಳನ್ನು 5 ತಿಂಗಳ ಹಿಂದಷ್ಟೇ ತೆರೆಯಲಾಗಿತ್ತು. ಈಗ ಮತ್ತೆ ಮುಚ್ಚಿದರೆ ಸಮಸ್ಯೆಯಾಗಲಿದೆ’ ಎಂದು ಕೆಎಸ್‌ಎ ಕಾರ್ಯದರ್ಶಿ ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

ಏ.2ರಂದು ಸಿನಿಮಾ ಥಿಯೇಟರ್‌, ಜಿಮ್‌, ಈಜುಕೊಳಗಳನ್ನು ಮುಚ್ಚುವಂತೆ ಆದೇಶಿಸಿದ್ದ ರಾಜ್ಯ ಸರ್ಕಾರ, ಬಳಿಕ ಆಯಾ ಕ್ಷೇತ್ರದವರು ಮನವಿ ಸಲ್ಲಿಸಿದ ಬಳಿಕ ಥಿಯೇಟರ್‌ ಹಾಗೂ ಜಿಮ್‌ಗಳನ್ನು ತೆರೆಯಲು ಅನುಮತಿ ನೀಡಿತ್ತು.
 

Follow Us:
Download App:
  • android
  • ios