ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಆನ್‌ಲೈನ್‌ನಿಂದಲೇ ಅರ್ಜಿ ಆಹ್ವಾನ
* ಕ್ರೀಡಾ ಪ್ರಶಸ್ತಿಗಳಿಗೆ ಕ್ರೀಡಾ ಸಚಿವಾಲಯದಿಂದ ಅರ್ಜಿ ಆಹ್ವಾನ
* ಅರ್ಜಿ ಸಲ್ಲಿಸಲು ಜೂನ್ 21ರಂದೇ ಕೊನೆಯ ದಿನಾಂಕ
* ಕೋವಿಡ್ ಕಾರಣದಿಂದ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
ನವದೆಹಲಿ(ಮೇ.21): ಖೇಲ್ ರತ್ನ, ಅರ್ಜುನ ಪ್ರಶಸ್ತಿ ಸೇರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಗುರುವಾರ ಅರ್ಜಿ ಆಹ್ವಾನಿಸಿದೆ.
ಕೊರೋನಾದಿಂದಾಗಿ ಸತತ 2ನೇ ವರ್ಷ ಆನ್‌ಲೈನ್‌ನಲ್ಲೇ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹ ಕ್ರೀಡಾಪಟುಗಳು, ಕೋಚ್‌ಗಳು ಅರ್ಜಿ ಸಲ್ಲಿಸಲು ಜೂ.21ರಂದು ಕೊನೆ ದಿನವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ವರ್ಷ 74 ಮಂದಿ ವಿವಿಧ ಕ್ರೀಡಾ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಸದ್ಯದ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ವರ್ಷವೂ ಆನ್‌ಲೈನ್‌ನಲ್ಲೇ ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಕ್ರೀಡಾಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಮೊದಲ ಬಾರಿಗೆ ವೈಯುಕ್ತಿವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದರ ಜತೆಗೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಂದಲೂ ಅರ್ಜಿ ಶಿಫಾರಸು ಮಾಡಲು ಅನುವು ಮಾಡಿಕೊಡಲಾಗಿತ್ತು. ಈ ಬಾರಿಯೂ ಇದೇ ನಿಯಮಗಳು ಮುಂದುವರೆಯಲಿವೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ಕಳೆದ ವರ್ಷದಿಂದಲೇ ಪ್ರಶಸ್ತಿಯ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಗೆ ಪಾತ್ರರಾದವರು 25 ಲಕ್ಷ ರುಪಾಯಿ ಹಾಗೂ ಸ್ಮರಣಿಕೆಗಳನ್ನು ಪಡೆಯಲ್ಲಿದ್ದಾರೆ. ಇನ್ನುಳಿದಂತೆ ಅರ್ಜುನ ಪ್ರಶಸ್ತಿಗೆ 15 ಲಕ್ಷ, ದ್ರೋಣಾಚಾರ್ಯ(ಜೀವಮಾನ ಸಾಧನೆ)ಗೆ 15 ಲಕ್ಷ ಮತ್ತು ಧ್ಯಾನ್ ಚಂದ್ ಪ್ರಶಸ್ತಿ ವಿಜೇತರು 10 ಲಕ್ಷ ರುಪಾಯಿ ಬಹುಮಾನ ಪಡೆಯಲಿದ್ದಾರೆ.
ಕ್ರೀಡಾ ಸಾಧಕರಿಗೆ ಸಿಹಿ ಸುದ್ದಿ: ಪ್ರಶಸ್ತಿಗಳ ನಗದು ಮೊತ್ತ ಗಣನೀಯ ಹೆಚ್ಚಳ!
ಕಳೆದ ವರ್ಷ ದಾಖಲೆ ಎನ್ನುವಂತೆ ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ, ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಮಹಿಳಾ ಕುಸ್ತಿಪಟು ವಿನೇಶ್ ಪೋಗತ್, ಪ್ಯಾರಾ ಒಲಿಂಪಿಯನ್ ಮರಿಯಪ್ಪನ್ ತಂಗವೇಲು ಮತ್ತು ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರಾ ಹೀಗೆ ಒಟ್ಟು 5 ಮಂದಿ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ್ದರು.