ಕ್ರೀಡಾಪಟುಗಳಿಗೆ ಸಾಯ್ ಆನ್‌ಲೈನ್ ಕಾರ್ಯಾಗಾರ
ಕೊರೋನಾ ವೈರಸ್ ಭೀತಿಯಿಂದ ಕಂಗೆಟ್ಟಿರುವ ಭಾರತದ ಕ್ರೀಡಾಪಟುಗಳಿಗೆ ಸಾಯ್ ಆನ್‌ಲೈನ್ ಕಾರ್ಯಗಾರ ಹಮ್ಮಿಕೊಂಡಿತ್ತು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮಾ.29): ಕೊರೋನಾ ಸೋಂಕಿನಿಂದಾಗಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಸಮಸ್ಯೆಯಾಗಿದ್ದು, ಇದಕ್ಕೆ ಪರಿಹಾರವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಆನ್‌ಲೈನ್ ಕಾರ್ಯಾಗಾರ ಆರಂಭಿಸಿದೆ. ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ಇದು ಎಲ್ಲರ ಪಾಲಿಗೂ ಪರೀಕ್ಷೆಯ ಕಾಲವಾಗಿದ್ದು ಆಟಗಾರರು ಮಾನಸಿಕವಾಗಿ ಹಾಗೆಯೇ ದೈಹಿಕವಾಗಿ ಸದೃಢರಾಗಿರಬೇಕು. ಲಭ್ಯವಿರುವ ಸಮಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಮೂಲಕ ಸಾಧನೆ ಮಾಡುವತ್ತ ದಿಟ್ಟ ಹೆಜ್ಜೆಯಿಡಬೇಕು ಎಂದು ಕ್ರೀಡಾಪಟುಗಳಿಗೆ ಗೋಪಿಚಂದ್ ಕರೆ ನೀಡಿದರು.
ಶುಕ್ರವಾರದಿಂದ ಆರಂಭಗೊಂಡ ಕಾರ್ಯಾಗಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿರುವ ಶೂಟರ್‌ಗಳಾದ ದಿವ್ಯಾನ್ಶ್ ಪನ್ವಾರ್, ಅಪೂರ್ವಿ ಚಾಂಡೆಲಾ, ಅಭಿಷೇಕ್ ವರ್ಮಾ, ಅನೀಶ್ ಭನ್ವಾಲಾ, ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್, ನಿಖತ್ ಜರೀನ್, ಈಜುಪಟು ಶ್ರೀಹರಿ ನಟರಾಜ್ ಸೇರಿದಂತೆ ಇನ್ನೂ ನೂರಾರು ಅಥ್ಲೀಟ್‌ಗಳು ಪಾಲ್ಗೊಂಡಿದ್ದರು.
ಕಾರ್ಯಾಗಾರ 24 ಸರಣಿಗಳನ್ನು ಒಳಗೊಂಡಿರಲಿದ್ದು, ಮೊದಲ ದಿನ ಫಿಸಿಯೋಥೆರಾಪಿಸ್ಟ್ ಡಾ.ನಿಖತ್ ಲಾತೆ, ಕ್ರೀಡಾಪಟುಗಳಿಗೆ ಮನೆಯಲ್ಲೇ ಅಭ್ಯಾಸ ನಡೆಸುವುದು ಹೇಗೆ ಎನ್ನುವುದನ್ನು ಹೇಳಿಕೊಟ್ಟರು. ಬಳಿಕ ಪೌಷ್ಟಿಕಾಂಶ ಅಗತ್ಯತೆಗಳ ಬಗ್ಗೆ ರಾರಯನ್ ಫರ್ನಾಂಡೋ ಕ್ರೀಡಾಪಟುಗಳಿಗೆ ತಿಳಿಸಿದರು.