ಕೊರೋನಾ ಭೀತಿ: ಕ್ರೀಡಾಪಟುಗಳಿಗೆ 3 ವಾರ ರಜೆ ಘೋಷಿಸಿದ ಸಾಯ್‌

ದೇಶದಲ್ಲಿ ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಸಾಯ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಅಥ್ಲೀಟ್‌ಗಳನ್ನು ಹೊರತುಪಡಿಸಿ ಉಳಿದ ಆಟಗಾರರಿಗೆ ಮೂರು ವಾರಗಳ ಕಾಲ ರಜೆ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

SAI Announces 3 week Vacation across NCoEs Due to COVID 19 Fear kvn

ನವದೆಹಲಿ(ಏ.10): ದೇಶದಲ್ಲಿ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಕಾರಣ, ರಾಷ್ಟ್ರೀಯ ಉನ್ನತ ತರಬೇತಿ ಕೇಂದ್ರ(ಎನ್‌ಸಿಒಇ)ಗಳಲ್ಲಿ ಅಭ್ಯಾಸ ನಡೆಸುತ್ತಿರುವ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) 3 ವಾರಗಳ ರಜೆ ಘೋಷಿಸಿದೆ. ಆದರೆ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಕ್ರೀಡಾಪಟುಗಳು ಮಾತ್ರ ತಮ್ಮ ಅಭ್ಯಾಸ ಮುಂದುವರಿಸಲಿದ್ದಾರೆ ಎಂದು ಸಾಯ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗಷ್ಟೇ ಪಟಿಯಾಲಾ, ಬೆಂಗಳೂರು ಹಾಗೂ ಸೋನೆಪತ್‌ ತರಬೇತಿ ಕೇಂದ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದವು. ಕ್ರೀಡಾಪಟುಗಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಯ್‌ ತಿಳಿಸಿದೆ.

ಆದರೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಯಾವುದೇ ಕ್ರೀಡಾಪಟು ಸಹ ಸೋಂಕಿಗೆ ತುತ್ತಾಗಿಲ್ಲ. ತರಬೇತಿ ಶಿಬಿರಗಳಲ್ಲಿ ಅಭ್ಯಾಸ ಮುಂದುವರಿಸುವ ಕ್ರೀಡಾಪಟುಗಳು ವಾರಕೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಬೇಕಿದೆ. ರಜೆ ಮೇಲೆ ತಮ್ಮ ಊರುಗಳಿಗೆ ತೆರಳಲಿರುವ ಕ್ರೀಡಾಪಟುಗಳಿಗೆ ಸಾಯ್‌ ವಿಮಾನ, ರೈಲು ವ್ಯವಸ್ಥೆ ಕಲ್ಪಿಸುವುದಾಗಿ ಸಾಯ್‌ ತಿಳಿಸಿದೆ.
 

Latest Videos
Follow Us:
Download App:
  • android
  • ios