ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಸಬಲೆಂಕಾ ಮತ್ತು ಗಾಫ್ ಫೈನಲ್‌ನಲ್ಲಿ ಸೆಣಸಲಿದ್ದಾರೆ. ಸಬಲೆಂಕಾ ಸೆಮೀಸ್‌ನಲ್ಲಿ ಸ್ವಿಯಾಟೆಕ್‌ರನ್ನು ಸೋಲಿಸಿದರೆ, ಗಾಫ್ ಬೋಯ್ಸನ್‌ರನ್ನು ಮಣಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಆಲ್ಕರಜ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಪ್ಯಾರಿಸ್: ಈ ಬಾರಿ ಫ್ರೆಂಚ್ ಓಪನ್ ಗ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಶನಿವಾರ ವಿಶ್ವ ನಂ.1 ಅರೈನಾ ಸಬಲೆಂಕಾ ಹಾಗೂ ವಿಶ್ವ ನಂ.2 ಕೊಕೊ ಗಾಫ್ ಸೆಣಸಾಡಲಿದ್ದಾರೆ. ಇಬ್ಬರೂ ಚೊಚ್ಚಲ ಬಾರಿ ಫ್ರೆಂಚ್ ಓಪನ್ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.

ಬೆಲಾರಸ್‌ನ ಅರೈನಾ ಸಬಲೆಂಕಾ ಅವರು ಗುರುವಾರ ಸೆಮಿಫೈನಲ್ ನಲ್ಲಿ ಟೂರ್ನಿಯ 4 ಬಾರಿ ಚಾಂಪಿಯನ್ ಇಗಾ ಸ್ವಿಯಾಟೆಕ್ ವಿರುದ್ಧ 7-6(7/1), 4-6, 6-0 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಅಮೆರಿಕದ ಕೊಕೊ ಗಾಫ್ ಸೆಮೀಸ್‌ನಲ್ಲಿ ಶ್ರೇಯಾಂಕ ರಹಿತ, ಫ್ರಾನ್ಸ್‌ನ ಲೂಯಿಸ್ ಬೋಯ್ಸನ್‌ರನ್ನು 6-1, 6-2 ಸೆಟ್‌ಗಳಲ್ಲಿ ಸೋಲಿಸಿ ಫೈನಲ್‌ಗೇರಿದ್ದಾರೆ. 3 ಗ್ಯಾನ್‌ಸ್ಲಾಂಗಳ ಒಡೆತಿ ಅರೈನಾ ಸಬಲೆಂಕಾ ಹಾಗೂ 2023ರ ಯುಎಸ್ ಓಪನ್ ಚಾಂಪಿಯನ್ ಕೊಕೊ ಗಾಫ್ ಈ ವರೆಗೂ 10 ಬಾರಿ ಮುಖಾಮುಖಿಯಾಗಿದ್ದು, ತಲಾ 5 ಗೆಲುವು ಸಾಧಿಸಿದ್ದಾರೆ.

ಆಲ್ಕರಜ್ ಫೈನಲ್‌ಗೆ ಲಗ್ಗೆ

ಪ್ಯಾರಿಸ್: ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸತತ 2ನೇ ಬಾರಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ 5ನೇ ಗ್ರ್ಯಾನ್‌ಸ್ಲಾಂ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಸ್ಪೇನ್‌ನ 22 ವರ್ಷದ ಕಾರ್ಲೊಸ್ ಆಲ್ಕರಜ್ ಶುಕ್ರವಾರ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಇಟಲಿಯ 8ನೇ ಶ್ರೇಯಾಕಿತ ಲೊರೆಂಜೊ ಮುಸೆಟ್ಟಿ ವಿರುದ್ಧ ಸೆಣಸಾಡಿದರು. ಆದರೆ 4ನೇ ಸೆಟ್ ವೇಳೆ ಮುಸೆಟ್ಟಿ ಗಾಯಗೊಂಡ ಕಾರಣ, ಆಲ್ಕರಜ್ ವಾಕ್‌ಓವರ್ ಮೂಲಕ ಫೈನಲ್ ಪ್ರವೇಶಿಸಿದರು. ಆರಂಭಿಕ ಸೆಟ್‌ನಲ್ಲಿ ಉತ್ತಮ ಆಟವಾಡಿದ್ದ ಮುಸೆಟ್ಟಿ 6-4ರಲ್ಲಿ ಜಯಗಳಿಸಿದ್ದರು. ಆದರೆ 2 ಮತ್ತು 3ನೇ ಸೆಟ್‌ನಲ್ಲಿ ಕ್ರಮವಾಗಿ 7-6(1/3), 6-0 ಗೆಲುವು ಸಾಧಿಸಿದ ಆಲ್ಕರಜ್, 4ನೇ ಸೆಟ್‌ನಲ್ಲೂ 2-0 ಮುಂದಿದ್ದರು. ಈ ವೇಳೆ ಮುಸೆಟ್ಟಿ ಹೊರನಡೆದ ಕಾರಣ ಆಲ್ಕರಜ್ ಟೂರ್ನಿಯ ಇತಿಹಾಸದಲ್ಲಿ 2ನೇ ಬಾರಿ ಫೈನಲ್‌ಗೇರಿದರು. ಮುಸೆಟ್ಟಿಯ ಚೊಚ್ಚಲ ಗ್ಯಾನ್ ಸ್ಲಾಂ ಫೈನಲ್ ಕನಸು ನನಸಾಗಲಿಲ್ಲ.

ಇಂಡೋನೇಷ್ಯಾ ಓಪನ್: ಭಾರತದ ಸವಾಲು ಅಂತ್ಯ

ಜಕಾರ್ತ: ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಶುಕ್ರವಾರ ಪುರುಷರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಾತ್ವಿಕ್ -ಚಿರಾಗ್ ಶೆಟ್ಟಿ ಜೋಡಿ ಸೋಲು ಕಂಡಿತು. ಮಾಜಿ ವಿಶ್ವ ನಂ.1 ಜೋಡಿ ಮಲೇಷ್ಯಾದ ಮ್ಯಾನ್ ವೀ ಚೊಂಗ್ ಹಾಗೂ ಟೀ ಕಾಯ್ ವುನ್ ವಿರುದ್ಧ 19-21, 16-21ರಲ್ಲಿ ಸೋತಿತು.

ಇನ್ನು ಇದಕ್ಕೂ ಮೊದಲು ಭಾರತದ ತಾರಾ ಶಟ್ಲರ್ ಪಿವಿ ಸಿಂಧು, ಮಹಿಳಾ ಡಬಲ್ಸ್ ಆಟಗಾರ್ತಿಯರಾದ ತ್ರೀಸಾ ಜಾಲಿ-ಗಾಯಿತ್ರಿ ಗೋಪಿಚಂದ್, ಮಿಶ್ರ ಡಬಲ್ಸ್‌ನಲ್ಲಿ ಸತೀಶ್ ಕುಮಾರ್ ಕರುಣಾಕರನ್ ಮತ್ತು ಆಧ್ಯಾ ವರಿಯಾತ್ ಅವರು ಸೋಲು ಅನುಭವಿಸಿದ್ದರು.

ಇನ್ನು ಬಾಸ್ಕೆಟ್‌ಬಾಲ್‌ ವೃತ್ತಿಪರ ಲೀಗ್ ಆರಂಭ

ಮುಂಬೈ: ಭಾರತ ಬಾಸ್ಕೆಟ್‌ಬಾಲ್ ಫೆಡರೇಷನ್ (ಬಿಎಫ್‌ಐ) ಹಾಗೂ ಎಸಿಜಿ ಸ್ಪೋರ್ಟ್ಸ್ ಸಂಸ್ಥೆಯು ಭಾರತದ ಚೊಚ್ಚಲ ವೃತ್ತಿಪರ ಬಾಸ್ಕೆಟ್‌ಬಾಲ್ ಲೀಗ್ ಘೋಷಿಸಿದೆ. ಪುರುಷ ಜೊತೆ ಮಹಿಳೆಯರಿಗೂ ಲೀಗ್ ನಡೆಯಲಿದ್ದು, 5X5 ಹಾಗೂ 3X3 ಮಾದರಿ ಸ್ಪರ್ಧೆಗಳು ನಡೆಯಲಿವೆ. ಈ ಬಗ್ಗೆ ಮಾತನಾಡಿರುವ ಬಿಎಫ್‌ಐ ಅಧ್ಯಕ್ಷ ಆಧವ್‌ ಅರ್ಜುನ, ಭಾರತ ಏಷ್ಯನ್ ಗೇಮ್ಸ್ ಹಾಗೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು. ಇದಕ್ಕಾಗಿ ನಾವು ಪ್ರತಿಭಾವಂತ ಬಾಸ್ಕೆಟ್‌ಬಾಲ್ ಪಟುಗಳನ್ನು ಬೆಳೆಸುತಿದೇವೆ ಎಂದಿದ್ದಾರೆ.