Russia Ukraine Crisis: ರಷ್ಯಾಗೆ ಕ್ರೀಡಾ ಜಗತ್ತಿನಿಂದ ಬಹಿಷ್ಕಾರ!
*ನೆರೆಯ ಉಕ್ರೇನ್ ದೇಶದ ಮೇಲೆ ಯುದ್ದ ಮಾಡುತ್ತಿರುವ ರಷ್ಯಾಗೆ ಕ್ರೀಡಾ ಜಗತ್ತು ಶಾಕ್
* ರಷ್ಯಾಗೆ ಕ್ರೀಡಾ ಜಗತ್ತು ಬಹಿಷ್ಕಾರ ಹಾಕುತ್ತಿದೆ
* ಹಲವು ಜಾಗತಿಕ ಕ್ರೀಡಾ ಸಂಸ್ಥೆ, ಒಕ್ಕೂಟಗಳು ರಷ್ಯಾದಲ್ಲಿ ನಡೆಯಬೇಕಿದ್ದ ಕ್ರೀಡಾಕೂಟಗಳನ್ನು ಸ್ಥಳಾಂತರಿಸಿವೆ
ಬೆಂಗಳೂರು(ಮಾ.01): ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ (Russia) ಕ್ರೀಡಾ ಜಗತ್ತು ಬಹಿಷ್ಕಾರ ಹಾಕುತ್ತಿದೆ. ರಷ್ಯಾದ ಕ್ರೀಡಾ ತಂಡಗಳು, ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಸ್ಪರ್ಧೆಗಳಿಂದ ನಿಷೇಧಗೊಳಿಸುವಂತೆ ಉಕ್ರೇನ್ (Ukraine) ಸೇರಿದಂತೆ ಹಲವು ದೇಶಗಳ ಕ್ರೀಡಾಪಟುಗಳಿಂದ ಜಾಗತಿಕ ಕ್ರೀಡಾ ಸಂಸ್ಥೆಗಳು ಹಾಗೂ ಒಕ್ಕೂಟಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಹಲವು ಜಾಗತಿಕ ಕ್ರೀಡಾ ಸಂಸ್ಥೆ, ಒಕ್ಕೂಟಗಳು ರಷ್ಯಾದಲ್ಲಿ ನಡೆಯಬೇಕಿದ್ದ ಕ್ರೀಡಾಕೂಟಗಳನ್ನು ಸ್ಥಳಾಂತರಿಸಿವೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ರಷ್ಯಾ ಕ್ರೀಡಾಪಟುಗಳ ಸ್ಪರ್ಧೆಗೆ ಅವಕಾಶ ನೀಡದಂತೆ ತನ್ನ ಸದಸ್ಯ ಕ್ರೀಡಾ ಸಂಸ್ಥೆ, ಒಕ್ಕೂಟಗಳಿಗೆ ಸೂಚಿಸಿದೆ.
ರಷ್ಯಾ ಕ್ರೀಡಾಪಟುಗಳಿಗೆ ಅವಕಾಶ ಬೇಡ ಎಂದ ಐಒಸಿ!
ರಷ್ಯಾದಲ್ಲಿ ಯಾವುದೇ ಕ್ರೀಡಾಕೂಟ ನಡೆಸದಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ತನ್ನ ಸದಸ್ಯ ಸಂಸ್ಥೆ ಹಾಗೂ ಒಕ್ಕೂಟಗಳಿಗೆ ಸೂಚನೆ ನೀಡಿದೆ. ಅಲ್ಲದೇ ರಷ್ಯಾದ ಯಾವುದೇ ಕ್ರೀಡಾಪಟು ಆ ದೇಶದ ಬಾವುಟದ ಅಡಿಯಲ್ಲಿ ಸ್ಪರ್ಧಿಸಲು ಅವಕಾಶ ನೀಡದೆ ಇರಲು ನಿರ್ಧರಿಸಿದೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಷ್ಯಾದ ಸ್ಪರ್ಧಿಗಳಿಗೆ ಪ್ರವೇಶ ನಿರಾಕರಿಸುವಂತೆ ಎಲ್ಲಾ ಜಾಗತಿಕ ಸಂಸ್ಥೆ ಹಾಗೂ ಒಕ್ಕೂಟಗಳಿಗೆ ತಿಳಿಸಿದೆ. ಇದೇ ವೇಳೆ 2001ರಲ್ಲಿ ವ್ಲ್ಯಾಡಿಮಿರ್ ಪುಟಿನ್‌ಗೆ (Vladimir Putin) ನೀಡಿದ್ದ ‘ಒಲಿಂಪಿಕ್ ಆರ್ಡರ್’(ಒಲಿಂಪಿಕ್ಸ್ ಆಯೋಜನೆ, ಅಭಿವೃದ್ಧಿಗೆ ಸಹಕರಿಸಿದ್ದಕ್ಕೆ ನೀಡುವ ಗೌರವ) ಅನ್ನು ಐಒಸಿ ಹಿಂಪಡೆದಿದೆ.
ರಷ್ಯಾ ವಿರುದ್ಧ ಕಠಿಣ ಕ್ರಮ ಕೈಗೊಂಡ ಫಿಫಾ
ರಷ್ಯಾದಲ್ಲಿ ಯಾವುದೇ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ನಡೆಸದಿರಲು ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್(ಫಿಫಾ) ನಿರ್ಧರಿಸಿದೆ. ಅಲ್ಲದೇ ರಷ್ಯಾದ ಬಾವುಟ, ರಾಷ್ಟ್ರಗೀತೆಗೂ ಕೊಕ್ ನೀಡಲಾಗಿದೆ. ರಷ್ಯಾ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ, ಖಾಲಿ ಕ್ರೀಡಾಂಗಣಗಳಲ್ಲಿ ಆಯೋಜಿಸುವುದಾಗಿ ಫಿಫಾ ಘೋಷಿಸಿದೆ.
ಯುಇಎಫ್‌ಎ ಫೈನಲ್ ರಷ್ಯಾದಿಂದ ಒತ್ತಂಗಡಿ
ಯುರೋಪಿಯನ್ ಫುಟ್ಬಾಲ್ ಸಂಸ್ಥೆಗಳ ಸಂಘ(ಯುಇಎಫ್‌ಐ) 2022ರ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯವನ್ನು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಿಂದ ಫ್ರಾನ್ಸ್‌ನ ಪ್ಯಾರಿಸ್‌ಗೆ ಸ್ಥಳಾಂತರಿಸಿದೆ. ಪ್ರತಿಷ್ಠಿತ ಟೂರ್ನಿಯ ಫೈನಲ್ ಪಂದ್ಯವು ಮೇ 28ಕ್ಕೆ ನಿಗದಿಯಾಗಿದೆ.
ರಷ್ಯನ್ ಗ್ರ್ಯಾನ್ ಪ್ರಿ ಎಫ್1 ರೇಸ್ ರದ್ದು
ಉಕ್ರೇನ್ ಮೇಲೆ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ರಷ್ಯನ್ ಗ್ರ್ಯಾನ್ ಪ್ರಿ ಫಾರ್ಮುಲಾ 1 ರೇಸ್ ಅನ್ನು ಅಂತಾರಾಷ್ಟ್ರೀಯ ಆಟೋಮೊಬೈಲ್ ಫೆಡರೇಷನ್(ಎಫ್‌ಐಎ) ರದ್ದುಗೊಳಿಸಿದೆ. ಮಾಚ್‌ರ್‍ನಲ್ಲಿ 2022ರ ಋುತು ಆರಂಭಗೊಳ್ಳಲಿದ್ದು, ಸೆಪ್ಟೆಂಬರ್ 25ರಂದು ಸೋಚಿಯಲ್ಲಿ ರಷ್ಯನ್ ಗ್ರ್ಯಾನ್ ಪ್ರಿ ರೇಸ್ ನಡೆಯಬೇಕಿತ್ತು. ಎಫ್‌ಐಎ ರೇಸ್ ರದ್ದುಗೊಳಿಸುವ ಮೊದಲೇ 4 ಬಾರಿ ವಿಶ್ವ ಚಾಂಪಿಯನ್, ಜರ್ಮನಿಯ ಸೆಬಾಸ್ಟಿಯನ್ ವೆಟ್ಟೆಲ್ ರಷ್ಯನ್ ಗ್ರ್ಯಾನ್ ಪ್ರಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದರು. ಇದೇ ವೇಳೆ ರಷ್ಯಾದ ಏಕೈಕ ಎಫ್ 1 ಚಾಲಕ ನಿಕಿತ ಮೇಜ್‌ಪಿನ್‌ಗೆ ಸಂಕಷ್ಟಎದುರಾಗಿದೆ. ಅಮೆರಿಕದ ಹಾಸ್ ಎಫ್ 1 ತಂಡವನ್ನು ಪ್ರತಿನಿಧಿಸುವ ಮೇಜ್‌ಪಿನ್‌ರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ.
ರಷ್ಯಾದ ಪ್ರಾಯೋಜಕರನ್ನು ಕೈಬಿಟ್ಟ ವಿಶ್ವ ಚೆಸ್ ಫೆಡರೇಷನ್
ರಷ್ಯಾದ ಮಾಜಿ ಉಪಪ್ರಧಾನಿ ಅಕಾರ್ಡಿ ಡ್ವೊರ್ಕೊವಿಚ್ ಅಧ್ಯಕ್ಷರಾಗಿರುವ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್(ಫಿಡೆ), ರಷ್ಯಾ ಹಾಗೂ ಅದರ ಬೆಂಬಲಿತ ರಾಷ್ಟ್ರ ಬೆಲಾರಸ್‌ನ ಎಲ್ಲಾ ಪ್ರಾಯೋಜಕರನ್ನು ಕೈಬಿಟ್ಟಿದೆ. ಈ ರಾಷ್ಟ್ರಗಳ ಯಾವುದೇ ಸಂಸ್ಥೆಗಳೊಂದಿಗೆ ಇನ್ನು ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಫಿಡೆ ಘೋಷಿಸಿದೆ.
ಕಿರಿಯರ ವಿಶ್ವ ಈಜು ರಷ್ಯಾದಿಂದ ಸ್ಥಳಾಂತರ
ಈ ವರ್ಷ ಆಗಸ್ಟ್‌ನಲ್ಲಿ ರಷ್ಯಾದ ಕಜಾನ್‌ನಲ್ಲಿ ನಡೆಯಬೇಕಿದ್ದ ಕಿರಿಯರ ವಿಶ್ವ ಈಜು ಚಾಂಪಿಯನ್‌ಶಿಪ್ ಅನ್ನು ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಈಜು ಫೆಡರೇಷನ್(ಫಿನಾ) ನಿರ್ಧರಿಸಿದೆ. 2 ವರ್ಷಗಳಿಗೊಮ್ಮೆ ನಡೆಯುವ ಈ ಚಾಂಪಿಯನ್‌ಶಿಪ್ ಅನ್ನು ರಷ್ಯಾದಲ್ಲಿ ನಡೆಸದಿರಲು ಸದಸ್ಯ ರಾಷ್ಟ್ರಗಳಿಂದ ಒತ್ತಡ ಎದುರಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ರಷ್ಯಾ ಕೈತಪ್ಪಿದ ಸ್ಕೀಯಿಂಗ್ ವಿಶ್ವಕಪ್ ಟೂರ್ನಿ ಆತಿಥ್ಯ
ರಷ್ಯಾದಲ್ಲಿ ಈ ವರ್ಷ ನಡೆಯಬೇಕಿದ್ದ ಸ್ಕೀಯಿಂಗ್ ವಿಶ್ವಕಪ್ ಟೂರ್ನಿಗಳನ್ನು ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಸ್ಕೀಯಿಂಗ್ ಫೆಡರೇಷನ್ ನಿರ್ಧರಿಸಿದೆ. ಉಕ್ರೇನ್‌ನ ಮೇಲೆ ದಾಳಿ ಆರಂಭಿಸಿದ ಮರುದಿನವೂ ಸನ್ನಿ ವ್ಯಾಲಿಯ ಉರಾಲ್ಸ್ ರೆಸಾರ್ಟ್‌ನಲ್ಲಿ ಟೂರ್ನಿಯೊಂದನ್ನು ಆಯೋಜಿಸಿದ್ದು ಭಾರೀ ಟೀಕೆಗೆ ಕಾರಣವಾಗಿದೆ. ಈ ಕೂಟದಲ್ಲಿ ರಷ್ಯಾದ ಕೆಲವೇ ಕೆಲವು ಸ್ಪರ್ಧಿಗಳಷ್ಟೇ ಪಾಲ್ಗೊಂಡಿದ್ದರು ಎನ್ನಲಾಗಿದೆ. ಹಲವು ದೇಶಗಳ ಸ್ಕೀಯರ್‌ಗಳು ಟೂರ್ನಿಯನ್ನು ಬಹಿಷ್ಕರಿಸಿದ್ದರು ಎಂದು ತಿಳಿದುಬಂದಿದೆ.