Pro Kabaddi League: ತಲೈವಾಸ್ ಮೇಲೆ ಬೆಂಗಳೂರು ಬುಲ್ಸ್ ಸವಾರಿ..!
* ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದ ಬೆಂಗಳೂರು ಬುಲ್ಸ್
* ತಮಿಳ್ ತಲೈವಾಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಪವನ್ ಶೆರಾವತ್ ಪಡೆ
* ವೇಗವಾಗಿ 500 ಅಂಕ ಕಲೆಹಾಕಿ ದಾಖಲೆ ಬರೆದ ದಬಾಂಗ್ ಡೆಲ್ಲಿ ತಂಡದ ನವೀನ್ ಕುಮಾರ್
ಬೆಂಗಳೂರು(ಡಿ25): ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ (Pro Kabaddi League) ಬೆಂಗಳೂರು ಬುಲ್ಸ್ (Bengaluru Bulls) ಗೆಲುವಿನ ಖಾತೆ ತೆರೆದಿದೆ. ಶುಕ್ರವಾರ ನಡೆದ ತಮಿಳ್ ತಲೈವಾಸ್ (Tamil Thaliavas) ವಿರುದ್ಧದ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ ಬುಲ್ಸ್ 38-30 ಅಂಕಗಳಲ್ಲಿ ಗೆಲುವು ದಾಖಲಿಸಿತು. ಮೊದಲ ಪಂದ್ಯದಲ್ಲಿ ರೈಡರ್‌ಗಳು ಸಮಾಧಾನಕರ ಪ್ರದರ್ಶನ ತೋರಿದ್ದರೂ ಡಿಫೆಂಡರ್‌ಗಳು ಕೇವಲ 3 ಅಂಕ ಗಳಿಸಿ ಸಂಪೂರ್ಣ ವೈಫಲ್ಯ ಕಂಡಿದ್ದರು. ಆದರೆ ತಲೈವಾಸ್ ವಿರುದ್ಧ ರೈಡಿಂಗ್ ಹಾಗೂ ಡಿಫೆನ್ಸ್ ಎರಡರಲ್ಲೂ ಬುಲ್ಸ್ ಮಿಂಚು ಹರಿಸಿತು. ಪಂದ್ಯದಲ್ಲಿ ರೈಡರ್‌ಗಳು ಒಟ್ಟು 19 ಅಂಕ ಕಲೆಹಾಕಿದರೆ, ರೈಡರ್‌ಗಳು 14 ಅಂಕ ಸಂಪಾದಿಸಿದರು. 2 ಬಾರಿ ಎದುರಾಳಿಯನ್ನು ಆಲೌಟ್ ಮಾಡಿದ್ದಕ್ಕೆ 4, ಒಂದು ಹೆಚ್ಚು ಅಂಕ ದೊರೆಯಿತು.
ಪವನ್ ಶೆರಾವತ್(Pawan Sehrawat) 9, ಚಂದ್ರನ್ ರಂಜಿತ್ 7 ರೈಡ್ ಅಂಕಗಳನ್ನು ಗಳಿಸಿದರು. ಡಿಫೆಂಡರ್‌ಗಳಾದ ಸೌರಭ್ ನಂದಲ್ 5, ಮಯೂರ್ 3 ಅಂಕ ಗಳಿಸಿ ಮಿಂಚಿದರು. ಪವನ್‌ರ ಯಶಸ್ವಿ ರೈಡಿಂಗ್‌ನಿಂದ ಬುಲ್ಸ್ ಪಂದ್ಯದಲ್ಲಿ ಮೊದಲ ಅಂಕ ಗಳಿಸಿತು. ಆದರೆ ಪವನ್ ಮೊದಲ 10 ನಿಮಿಷಗಳಲ್ಲಿ 3 ಬಾರಿ ಔಟಾಗಿದ್ದರಿಂದ ಬುಲ್ಸ್ ದೊಡ್ಡ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ತಲೈವಾಸ್ 17ನೇ ನಿಮಿಷದಲ್ಲಿ ಆಲೌಟ್ ಆಗಿದ್ದರಿಂದ ಬುಲ್ಸ್‌ಗೆ 17-11ರ ಮುನ್ನಡೆ ದೊರೆಯಿತು. 19-13ರ ಮುನ್ನಡೆಯೊಂದಿಗೆ ಬುಲ್ಸ್ ಮೊದಲಾರ್ಧವನ್ನು ಮುಕ್ತಾಯಗೊಳಿಸಿತು.
ತಿರುಗಿಬಿದ್ದ ತಲೈವಾಸ್: ದ್ವಿತೀಯಾರ್ಧದ ಆರಂಭದಲ್ಲೇ ತಲೈವಾಸ್ ತಿರುಗಿಬಿತ್ತು. 24ನೇ ನಿಮಿಷದಲ್ಲಿ ಬುಲ್ಸ್ ಆಲೌಟ್ ಆಯಿತು. 4 ನಿಮಿಷಗಳಲ್ಲಿ 8 ಅಂಕ ಗಳಿಸಿದ ತಲೈವಾಸ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿತು. ಕೊನೆ 10 ನಿಮಿಷದಲ್ಲಿ ಬುಲ್ಸ್ ಆಟದ ತೀವ್ರತೆ ಹೆಚ್ಚಾಯಿತು. 34ನೇ ನಿಮಿಷದಲ್ಲಿ ತಲೈವಾಸ್ ಪಡೆಯನ್ನು ಆಲೌಟ್ ಮಾಡಿ 31-26ರ ಮುನ್ನಡೆ ಪಡೆದ ಬುಲ್ಸ್ ಗೆಲುವಿನತ್ತ ಮುನ್ನುಗ್ಗಿತು.
ಟರ್ನಿಂಗ್ ಪಾಯಿಂಟ್
33ನೇ ನಿಮಿಷದಲ್ಲಿ ತಲೈವಾಸ್ ಸೂಪರ್ ಟ್ಯಾಕಲ್ ಮಾಡಿ 2 ಅಂಕ ಪಡೆಯುವ ಮೂಲಕ ಸಮಬಲ ಸಾಧಿಸಿತ್ತು. ಆದರೆ ಬುಲ್ಸ್ ಅಂಪೈರ್ ತೀರ್ಪನ್ನು ಪ್ರಶ್ನಿಸಿ ಯಶಸ್ಸು ಸಾಧಿಸಿತು. ರೈಡರ್ ಮನ್‌ಜೀತ್ ಟ್ಯಾಕಲ್ ವೇಳೆ ವೈಫಲ್ಯ ಕಂಡು ಹೊರಬಿದ್ದ ಪರಿಣಾಮ 34ನೇ ನಿಮಿಷದಲ್ಲಿ ತಲೈವಾಸ್ ಅಲೌಟ್ ಆಯಿತು. 5 ಅಂಕ ಮುನ್ನಡೆ ಪಡೆದ ಬುಲ್ಸ್ ಹಿಂದಿರುಗಿ ನೋಡಲಿಲ್ಲ.
PKL 2021: ತಲೈವಾಸ್ ಸವಾಲು ಗೆಲ್ಲುವ ತವಕದಲ್ಲಿ ಬೆಂಗಳೂರು ಬುಲ್ಸ್
ತಾರಾ ರೈಡರ್: ಪವನ್ ಶೆರಾವತ್, ಬೆಂಗಳೂರು ಬುಲ್ಸ್, 09 ಅಂಕ
ತಾರಾ ಡಿಫೆಂಡರ್: ಸೌರಭ್ ನಂದಲ್, ಬೆಂಗಳೂರು ಬುಲ್ಸ್, 05 ಅಂಕ
ವೇಗದ 500 ರೈಡ್ ಅಂಕ: ನವೀನ್ ಕುಮಾರ್ ದಾಖಲೆ!
ಬೆಂಗಳೂರು: ದಬಾಂಗ್ ಡೆಲ್ಲಿಯ (Dabang Delhi) ಯುವ ರೈಡರ್ ನವೀನ್ ಕುಮಾರ್ (Naveen Kumar) ತಮ್ಮ 47ನೇ ಪಂದ್ಯದಲ್ಲೇ 500 ರೈಡ್ ಅಂಕಗಳನ್ನು ಪೂರೈಸಿ ಪ್ರೊ ಕಬಡ್ಡಿಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಲೀಗ್‌ನಲ್ಲಿ ಅತಿ ವೇಗವಾಗಿ 500 ರೈಡ್ ಅಂಕಗಳ ಮೈಲಿಗಲ್ಲು ತಲುಪಿದ ಆಟಗಾರ ಎನ್ನುವ ಹಿರಿಮೆಗೆ ನವೀನ್ ಪಾತ್ರರಾಗಿದ್ದಾರೆ. ಮಣೀಂದರ್ ಸಿಂಗ್ 56 ಪಂದ್ಯಗಳಲ್ಲಿ 500 ಅಂಕ ಗಳಿಸಿ ನಿರ್ಮಿಸಿದ್ದ ದಾಖಲೆಯನ್ನು ನವೀನ್ ಶುಕ್ರವಾರ ಮುರಿದರು. ಯು ಮುಂಬಾ(U Mumba) ವಿರುದ್ಧ 16 ರೈಡ್ ಅಂಕ ಗಳಿಸಿದ ನವೀನ್ ತಮ್ಮ ತಂಡ 31-26ರಲ್ಲಿ ಗೆಲುವು ಸಾಧಿಸಲು ನೆರವಾದರು. ಡೆಲ್ಲಿಗಿದು ಸತತ 2ನೇ ಗೆಲುವು.
ಬೆಂಗಾಲ್‌ಗೆ ಸತತ 2ನೇ ಗೆಲುವು
ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಸತತ 2ನೇ ಗೆಲುವು ದಾಖಲಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ರಕ್ಷಣಾ ಪಡೆಯನ್ನು ಹಿಮ್ಮೆಟ್ಟಿಸಿದ ಬೆಂಗಾಲ್ 31-28 ಅಂಕಗಳಿಂದ ಗೆಲುವು ಸಾಧಿಸಿತು. ನಾಯಕ ಮಣೀಂದರ್ ಸಿಂಗ್ 17 ರೈಡ್‌ಗಳಲ್ಲಿ 8 ರೈಡ್ ಅಂಕ ಸಂಪಾದಿಸಿದರೆ, ಆಕಾಶ್ 4 ಅಂಕ ಗಳಿಸಿದರು. ಗುಜರಾತ್‌ನ ರಾಕೇಶ್ ನರ್ವಾಲ್ 12 ರೈಡಿಂಗ್ ಅಂಕ ಪಡೆದರೂ, ಡಿಫೆಂಡರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಬೆಂಗಾಲ್ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.
ಇಂದಿನ ಪಂದ್ಯಗಳು:
ಪಾಟ್ನಾ-ಯು.ಪಿ.ಯೋಧಾ, ಸಂಜೆ 7.30ಕ್ಕೆ,
ಪುಣೇರಿ ಪಲ್ಟನ್-ತೆಲುಗು ಟೈಟಾನ್ಸ್, ರಾತ್ರಿ 8.30ಕ್ಕೆ
ಜೈಪುರ-ಹರಾರಯಣ, ರಾತ್ರಿ 9.30ಕ್ಕೆ,
ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್