Asianet Suvarna News Asianet Suvarna News

Pro Kabaddi League: ಬೆಂಗಳೂರು ಬುಲ್ಸ್‌ಗಿಂದು ಮಾಡು ಇಲ್ಲವೇ ಮಡಿ ಪಂದ್ಯ..!

* ಮಹತ್ವದ ಪಂದ್ಯಕ್ಕೆ ಸಜ್ಜಾದ ಬೆಂಗಳೂರು ಬುಲ್ಸ್ ತಂಡ

* ಬುಲ್ಸ್‌ ಪಡೆಗಿಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಜೈಪುರ ಸವಾಲು

* ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಪವನ್ ಶೆರಾವತ್ ಪಡೆಗಿಂದು ಮಹತ್ವದ ಪಂದ್ಯ

Pro Kabaddi League Bengaluru Bulls ready for Do or Die match against Jaipur Pink Panthers kvn
Author
Bengaluru, First Published Feb 11, 2022, 10:25 AM IST

ಬೆಂಗಳೂರು: ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ (Pro Kabaddi League) ಪ್ಲೇ-ಆಫ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಬೆಂಗಳೂರು ಬುಲ್ಸ್‌ (Bengaluru Bulls) ಬಾಕಿ ಇರುವ ಮೂರೂ ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಶುಕ್ರವಾರ ಜೈಪುರ ಪಿಂಕ್‌ ಪ್ಯಾಂಥ​ರ್ಸ್‌ (Jaipur Pink Panthers) ತಂಡವನ್ನು ಎದುರಿಸಲಿರುವ ಬುಲ್ಸ್‌ಗೆ ಮುಂದಿನ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ಎದುರಾಗಲಿದೆ. ಈಗಾಗಲೇ 19 ಪಂದ್ಯಗಳನ್ನು ಆಡಿರುವ ಬುಲ್ಸ್‌ 9 ಗೆಲುವುಗಳೊಂದಿಗೆ ಒಟ್ಟು 55 ಅಂಕ ಕಲೆಹಾಕಿದೆ. ಇತರೆ ತಂಡಗಳು ಬುಲ್ಸ್‌ಗಿಂತ ಕಡಿಮೆ ಪಂದ್ಯಗಳನ್ನಾಡಿದ್ದು, ಅಂಕಗಳ ಅಂತರವೂ ಹೆಚ್ಚಿಲ್ಲ. ಹೀಗಾಗಿ, ಕೊನೆ ಮೂರೂ ಪಂದ್ಯಗಳನ್ನು ಬುಲ್ಸ್‌ ಗೆಲ್ಲದಿದ್ದರೆ ಲೀಗ್‌ ಹಂತದಲ್ಲೇ ಹೊರಬೀಳುವ ಆತಂಕ ಎದುರಾಗಿದೆ.

ಪಾಟ್ನಾಗೆ ಜಯ: ಗುರುವಾರ ನಡೆದ ಪುಣೇರಿ ಪಲ್ಟನ್‌ ವಿರುದ್ಧದ ಪಂದ್ಯವನ್ನು 43-26ರಲ್ಲಿ ಗೆದ್ದ ಪಾಟ್ನಾ ಪೈರೇಟ್ಸ್‌ ಮೊದಲ ಸ್ಥಾನ ಕಾಯ್ದುಕೊಂಡಿದೆ. ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಹಾಗೂ ಬೆಂಗಾಲ್‌ ಬೆಂಗಾಲ್‌ 39-39ರಲ್ಲಿ ಟೈಗೆ ಸಮಾಧಾನಪಟ್ಟವು.

ಬೆಂಗಳೂರು ಓಪನ್‌ ಟೆನಿಸ್‌: ಸೆಮೀಸ್‌ಗೆ ಸಾಕೇತ್‌-ರಾಮ್‌

ಬೆಂಗಳೂರು: ಎಟಿಪಿ ಬೆಂಗಳೂರು ಓಪನ್‌ (Bengaluru Open) ಟೆನಿಸ್‌ ಟೂರ್ನಿಯಲ್ಲಿ ಭಾರತದ ಸಾಕೇತ್‌ ಮೈನೇನಿ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಜೋಡಿ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದೆ. ಗುರುವಾರ ಕೆನಡಾದ ಸ್ಟೀವನ್‌ ಡಯಾಜ್‌, ಟ್ಯುನಿಶಿಯಾದ ಮಾಲೆಕ್‌ ಜಝೀರಿ ಪಂದ್ಯದಿಂದ ಹಿಂದೆ ಸರಿದಿದ್ದರಿಂದ ಸಾಕೇತ್‌-ರಾಮ್‌ಗೆ ವಾಕ್‌ ಓವರ್‌ ದೊರೆಯಿತು.

ಇನ್ನುಳಿದ ಪಂದ್ಯಗಳಲ್ಲಿ ಗುರುವಾರ ಭಾರತೀಯರಿಗೆ ನಿರಾಸೆ ಉಂಟಾಯಿತು. ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ಪ್ರಜ್ನೇಶ್‌ ಗುಣೇಶ್ವರನ್‌, ಅಗ್ರ ಶ್ರೇಯಾಂಕಿತ ಚೆಕ್‌ ಗಣರಾಜ್ಯದ ಜಿರಿ ವೆಸ್ಲೆ ವಿರುದ್ಧ 6-3, 2-6, 1-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತೀಯರು ಸವಾಲು ಅಂತ್ಯಗೊಂಡಿತು. ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಪೂರವ್‌ ರಾಜಾ-ಜೀವನ್‌, ವಿಷ್ಣುವರ್ಧನ್‌-ಶ್ರೀರಾಮ್‌, ಯೂಕಿ ಭಾಂಬ್ರಿ-ದಿವಿಜ್‌ ಶರಣ್‌ ಜೋಡಿ ಸೋಲುಂಡಿತು.

ಪ್ರೊ ಲೀಗ್ ಹಾಕಿ: 10-2ರಲ್ಲಿ ಗೆದ್ದ ಭಾರತ

ಕೇಪ್‌ಟೌನ್‌: ಭಾರತ ಪುರುಷರ ತಂಡ 2021-22ರ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ (Pro League Hockey Tournament) ದಕ್ಷಿಣ ಆಫ್ರಿಕಾ ವಿರುದ್ದ 10-2 ಗೋಲುಗಳಿಂದ ಭರ್ಜರಿ ಜಯ ಗಳಿಸಿದೆ. ಸತತ ಎರಡನೇ ಗೆಲುವು ಸಾಧಿಸಿದ ಭಾರತ, ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. 

Karnataka Police: ದಾವಣಗೆರೆ ಮಣಿಸಿ ಬೆಂಗಳೂರು ಪೊಲೀಸರು ಕಬಡ್ಡಿ ಚಾಂಪಿಯನ್ಸ್

ಬುಧವಾರ ನಡೆದ ಪಂದ್ಯದಲ್ಲಿ ಭಾರತ ಪರ ಜುಗ್‌ರಾಜ್ ಸಿಂಗ್ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಗುರ್‌ಸಹಿಬ್ಜಿತ್ , ದಿಲ್ಪ್ರೀತ್ ಸಿಂಗ್ ತಲಾ 2, ಹರ್ಮನ್‌ಪ್ರೀತ್, ಅಭಿಷೇಕ್, ಮನ್ದೀಪ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸುವ ಮೂಲಕ ಭಾರತ ಹಾಕಿ ತಂಡವು ಭಾರೀ ಅಂತರದ ಗೆಲುವು ಸಾಧಿಸಲು ಕಾರಣರಾದರು.

ಇನ್‌ಸ್ಟಾನಲ್ಲಿ ರೊನಾಲ್ಡೋಗೆ 40 ಕೋಟಿ ಹಿಂಬಾಲಕರು!

ನವದೆಹಲಿ: ವಿಶ್ವದ ಶ್ರೀಮಂತ ಫುಟ್ಬಾಲಿಗ, ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo), ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ 40 ಕೋಟಿ ಹಿಂಬಾಲಕರನ್ನು ಹೊಂದಿದ ವಿಶ್ವದ ಮೊದಲ ವ್ಯಕ್ತಿ ಎನ್ನುವ ದಾಖಲೆ ಬರೆದಿದ್ದಾರೆ. 

ಅಮೆರಿಕದ ಮಾಡೆಲ್‌ ಕೈಲಿ ಜೆನ್ನೆರ್‌ 30.9 ಕೋಟಿ ಹಾಗೂ ಅರ್ಜೆಂಟೀನಾದ ಫುಟ್ಬಾಲಿಗ ಲಿಯೋನೆಲ್‌ ಮೆಸ್ಸಿ 30.6 ಕೋಟಿ ಹಿಂಬಾಲಕರೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ 23.7 ಕೋಟಿ ಹಿಂಬಾಲಕರನ್ನು ಹೊಂದಿದ್ದ ರೊನಾಲ್ಡೋ ಕೇವಲ 5 ತಿಂಗಳಲ್ಲಿ 40 ಕೋಟಿ ಮೈಲಿಗಲ್ಲು ತಲುಪಿದ್ದಾರೆ.

ಮಾ.5ರಿಂದ ಬೆಂಗ್ಳೂರಲ್ಲಿ ಅಂಡರ್‌-15 ಫುಟ್ಬಾಲ್‌

ಬೆಂಗಳೂರು: 7ನೇ ಆವೃತ್ತಿಯ ಬಾಲಕರ ಹಾಗೂ 5ನೇ ಆವೃತ್ತಿಯ ಬಾಲಕಿಯರ ಆಲ್‌ ಇಂಡಿಯಾ ಅಂಡರ್‌-15 ಫುಟ್ಬಾಲ್‌ ಟೂರ್ನಿ ಬೆಂಗಳೂರಿನಲ್ಲಿ ಮಾರ್ಚ್‌ 5 ಮತ್ತು 6ಕ್ಕೆ ನಡೆಯಲಿದೆ. ನಗರದ ಎಫ್‌ಎಸ್‌ವಿ ಅರೇನಾದಲ್ಲಿ ಪಂದ್ಯಾವಳಿ ನಡೆಯಲಿದ್ದು, ಹೆಸರು ನೋಂದಾಯಿಸಲು ಫೆ.16 ಕೊನೆ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ 8095810030 ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios