Pro Kabaddi League: ಪಾಟ್ನಾ ಸವಾಲು ಗೆಲ್ಲುತ್ತಾ ಬೆಂಗಳೂರು ಬುಲ್ಸ್..?
* ಬೆಂಗಳೂರು ಬುಲ್ಸ್ ತಂಡಕ್ಕಿಂದು ಪಾಟ್ನಾ ಪೈರೇಟ್ಸ್ ಸವಾಲು
* ಮತ್ತೊಂದು ಮಹತ್ವದ ಪಂದ್ಯಕ್ಕೆ ಸಜ್ಜಾದ ಪವನ್ ಶೆರಾವತ್ ಪಡೆ
* ಆಡಿರುವ 20 ಪಂದ್ಯಗಳಲ್ಲಿ 10 ಗೆಲುವುಗಳೊಂದಿಗೆ 60 ಅಂಕ ಪಡೆದಿರುವ ಬುಲ್ಸ್
ಬೆಂಗಳೂರು(ಫೆ.15): ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ (Pro Kabaddi League) ಪ್ಲೇ-ಆಫ್‌ಗೇರುವ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಬೆಂಗಳೂರು ಬುಲ್ಸ್ (Bengaluru Bulls) ಮಂಗಳವಾರ ನಿರ್ಣಾಯಕ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ (Patna Pirates) ವಿರುದ್ಧ ಸೆಣಸಾಡಲಿದೆ. ಇನ್ನೆರಡು ಪಂದ್ಯಗಳನ್ನು ಜಯಿಸಿದರಷ್ಟೇ ಬೆಂಗಳೂರು ಬುಲ್ಸ್ ತಂಡದ ಪ್ಲೇ ಆಫ್ ಹಾದಿ ಸುಗಮ ಎನಿಸಲಿದೆ
ಇದುವರೆಗೂ ಆಡಿರುವ 20 ಪಂದ್ಯಗಳಲ್ಲಿ 10 ಗೆಲುವುಗಳೊಂದಿಗೆ 60 ಅಂಕ ಪಡೆದಿರುವ ಬುಲ್ಸ್‌ಗೆ ಬಾಕಿ ಇರುವ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಿದ್ದು, ಕೊನೆಯ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್(ಫೆ.17) ಎದುರಾಗಲಿದೆ. ಪ್ಲೇ ಆಫ್‌ಗೇರಲು ಬುಲ್ಸ್‌ಗೆ ಇತರೆ ತಂಡಗಳು ಭಾರೀ ಪೈಪೋಟಿ ನೀಡುತ್ತಿದ್ದು, ಸೋತರೆ ಲೀಗ್ ಹಂತದಲ್ಲೇ ಹೊರಬೀಳುವ ಆತಂಕ ಎದುರಾಗಿದೆ.
ಇತರೆ ತಂಡಗಳು ಬುಲ್ಸ್‌ಗಿಂತ ಕಡಿಮೆ ಪಂದ್ಯ ಆಡಿದ್ದು, ಲೀಗ್ ರೋಚಕ ಘಟ್ಟತಲುಪಿದೆ. 19 ಪಂದ್ಯಗಳಿಲ್ಲಿ 75 ಅಂಕ ಗಳಿಸಿರುವ ಪಾಟ್ನಾ ಈಗಾಗಲೇ ಪ್ಲೇ ಆಫ್ ಪ್ರವೇಶ ಖಚಿತಪಡಿಸಿದೆ. ಮತ್ತೆರಡು ಪಂದ್ಯಗಳಲ್ಲಿ ಮುಂಬಾ-ಜೈಪುರ, ಪುಣೆ-ತಲೈವಾಸ್ ಮುಖಾಮುಖಿಯಗಲಿವೆ.
ಪಾಟ್ನಾ ಪೈರೇಟ್ಸ್‌ಗೆ ಗೆಲುವು:
ಸೋಮವಾರದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ 38-30 ಅಂಕಗಳಿಂದ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಯುಪಿ ಯೋಧಾ 31-31ರಲ್ಲಿ ರೋಚಕ ಟೈ ಮಾಡಿಕೊಂಡಿತು.
ಪ್ರೊ ಲೀಗ್ ಹಾಕಿ: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಕೇಪ್‌ಟೌನ್: 2021-22ರ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ (FIH Pro League Hockey) ಭಾರತ ಪುರುಷರ ತಂಡ 3ನೇ ಗೆಲುವು ಸಾಧಿಸಿತು. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಂಡ 10-2 ಗೋಲುಗಳಿಂದ ಜಯಭೇರಿ ಬಾರಿಸಿತು. ದ.ಆಫ್ರಿಕಾ ವಿರುದ್ಧದ ತನ್ನ ಮೊದಲ ಪಂದ್ಯದಲ್ಲೂ ಭಾರತ ಇಷ್ಟೇ ಗೋಲುಗಳ ಅಂತರದಲ್ಲಿ ಗೆದ್ದಿತ್ತು.
ತಂಡದ ಪರ ಹರ್ಮನ್‌ಪ್ರೀತ್ ಭರ್ಜರಿ 4 ಗೋಲು ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಿಲಾನಂದ ಲಕ್ರಾ 2, ಸುರೇಂದ್ರ ಕುಮಾರ್, ಮಂದೀಪ್ ಸಿಂಗ್, ಸುಮಿತ್, ಶಮ್ಸೇರ್ ಸಿಂಗ್ ತಲಾ 1 ಗೋಲು ಹೊಡೆದರು. ದ.ಆಫ್ರಿಕಾ ಪರ ಡೇನಿಯಲ್ ಬೆಲ್ ಹಾಗೂ ಬ್ಯೂಚಾಂಪ್ ತಲಾ 1 ಗೋಲು ಬಾರಿಸಿದರು. 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಭಾರತ ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, 5ನೇ ಪಂದ್ಯವನ್ನು ಸ್ಪೇನ್ ವಿರುದ್ಧ ಭುವನೇಶ್ವರದಲ್ಲಿ ಫೆಬ್ರವರಿ 26ರಂದು ಆಡಲಿದೆ.
ಇದೇ ವರ್ಷ ಇಂಡಿಯನ್ ವಾಲಿಬಾಲ್ ಲೀಗ್‌ಗೆ ಚಾಲನೆ
ಭುವನೇಶ್ವರ್: ಇಂಡಿಯನ್ ವಾಲಿಬಾಲ್ ಲೀಗ್‌ನ ಮೊದಲ ಆವೃತ್ತಿಗೆ ಇದೇ ವರ್ಷ ಚಾಲನೆ ನೀಡುವುದಾಗಿ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ(ವಿಎಫ್‌ಐ) ಘೋಷಿಸಿದೆ. ಏಷ್ಯಾ ವಾಲಿಬಾಲ್ ಒಕ್ಕೂಟ ಹಾಗೂ ಅಂತಾರಾಷ್ಟ್ರೀಯ ವಾಲಿಬಾಲ್ ಫೆಡರೇಷನ್ ಲೀಗ್‌ಗೆ ಈಗಾಗಲೇ ಸಮ್ಮತಿ ಸೂಚಿಸಿದ್ದು, ಇದೇ ವರ್ಷದ ಜೂನ್-ಜುಲೈ ವೇಳೆಗೆ ಮೊದಲ ಬಾರಿ ಲೀಗ್‌ಗೆ ಚಾಲನೆ ನೀಡುವ ಲೆಕ್ಕಾಚಾರದಲ್ಲಿ ವಿಎಫ್‌ಐ ಇದೆ.
New NCA in Bengaluru: ಬೆಂಗಳೂರಲ್ಲಿ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಗಂಗೂಲಿ ಶಿಲಾನ್ಯಾಸ
ಹೊಸ ಫ್ರಾಂಚೈಸಿಗಳ ಖರೀದಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆನ್ನು ಶೀಘ್ರದಲ್ಲೇ ವಿಎಫ್‌ಐ ಪ್ರಕಟಿಸಲಿದ್ದು, ಡಿಸ್ಕವರಿ ನೆಟ್‌ವರ್ಕ್ನ ಯುರೋಸ್ಪೋಟ್ಸ್‌ರ್ ಇಂಡಿಯಾ ಸಹಭಾಗಿತ್ವದಲ್ಲಿ ಲೀಗ್ ಆರಂಭಿಸುವುದಾಗಿ ವಿಎಫ್‌ಐ ತಿಳಿಸಿದೆ. ದೇಶದ ವಿವಿಧ ನಗರಗಳನ್ನು ಪ್ರತಿನಿಧಿಸುವ 6ರಿಂದ 8 ನೂತನ ಫ್ರಾಂಚೈಸಿ(ತಂಡ)ಗಳ ಆಡಿಸಲು ವಿಎಫ್‌ಐ ಪ್ರಸ್ತಾವ ಸಲ್ಲಿಸಿದೆ. ಭಾರತ ರಾಷ್ಟ್ರೀಯ ತಂಡದ ಅಗ್ರ ಆಟಗಾರರ ಜತೆಗೆ ವಿವಿಧ ರಾಜ್ಯಗಳ ಪ್ರತಿಭಾನ್ವಿತ ಆಟಗಾರರು ಮತ್ತು ವಿದೇಶಿ ಆಟಗಾರರು ಉದ್ಘಾಟನಾ ಲೀಗ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.