Pro Kabaddi League: ಬೆಂಗಳೂರು ಬುಲ್ಸ್‌ಗೆ ಮುಳುವಾದ ನಿಯಮ, 1 ಅಂಕದ ರೋಚಕ ಸೋಲು..!

* ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ಎದುರು ಬುಲ್ಸ್‌ಗೆ ರೋಚಕ ಸೋಲು

* ಬೆಂಗಳೂರು ಬುಲ್ಸ್‌ಗೆ ಮುಳುವಾದ ಪ್ರೊ ಕಬಡ್ಡಿ ಲಾಬಿ ನಿಯಮ

* ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್‌ 2ನೇ ಸ್ಥಾನಕ್ಕೇರಿದೆ

Pro Kabaddi League Bengal Warriors Edge past Bengaluru Bulls kvn

ಬೆಂಗಳೂರು(ಜ.21): ರೈಡರ್‌ ನಬೀಬಕ್ಷ್‌ ಬುಲ್ಸ್‌ ಡಿಫೆಂಡರ್‌ಗಳನ್ನು ಮುಟ್ಟದೆ ಲಾಬಿ ಪ್ರವೇಶಿಸಿದಾಗ ಅವರನ್ನು ಹಿಡಿಯಲು ಇಡೀ ತಂಡವೇ ಮುನ್ನುಗ್ಗಿ ಲಾಬಿಯೊಳಗೆ ಕಾಲಿಟ್ಟಿತು. ಇದರ ಪರಿಣಾಮ ಬೆಂಗಾಲ್‌ ವಾರಿಯರ್ಸ್‌ಗೆ (Bengal Warriors) 1 ಬೋನಸ್‌ ಜೊತಗೆ 7 ಅಂಕ ಸೇರಿ ಒಂದೇ ರೈಡ್‌ನಲ್ಲಿ 8 ಅಂಕ ದೊರೆಯಿತು. ಸುಲಭ ಜಯದತ್ತ ಮುನ್ನುಗ್ಗುತ್ತಿದ್ದ ಬುಲ್ಸ್‌ಗೆ ಪ್ರೊ ಕಬಡ್ಡಿಯ (Pro Kabaddi League) ಈ ನಿಯಮ ಮುಳುವಾಗಿ ಪರಿಣಮಿಸಿತು. ಆದರೂ ಕೊನೆವರೆಗೂ ಹೋರಾಡಿದ ಬೆಂಗಳೂರು ಬುಲ್ಸ್ (Bengaluru Bulls) ತಂಡ 39-40ರಲ್ಲಿ ವೀರೋಚಿತ ಸೋಲು ಕಂಡಿತು. 1 ಅಂಕ ಗಳಿಸಿ 8ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್‌ 2ನೇ ಸ್ಥಾನಕ್ಕೇರಿತು. ಬೆಂಗಾಲ್‌ ಮೊದಲ ಬಾರಿಗೆ 4ನೇ ಸ್ಥಾನಕ್ಕೆ ಏರಿಕೆ ಕಂಡಿತು.

ಪವನ್‌ ಶೆರಾವತ್‌ರ (Pawan Sehrawat) 13 ಅಂಕಗಳ ಸಾಹಸ ಗೆಲುವಿಗೆ ಸಹಕಾರಿಯಾಗಲಿಲ್ಲ. ಪ್ರೊ ಕಬಡ್ಡಿಯ ನಿಯಮದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ಕೇಳಿಬಂದಿದೆ. ಇದೇ ವೇಳೆ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ 35-37ರಲ್ಲಿ ಸೋಲುಂಡಿತು.

ಏಷ್ಯನ್‌ ಫುಟ್ಬಾಲ್‌: ಡ್ರಾ ಆದ ಭಾರತ-ಇರಾನ್‌ ಪಂದ್ಯ

ಮುಂಬೈ: ಎಎಫ್‌ಸಿ ಮಹಿಳಾ ಏಷ್ಯನ್‌ ಫುಟ್ಬಾಲ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ಭಾರತ ಹಾಗೂ ಇರಾನ್‌ ನಡುವಿನ ಪಂದ್ಯ ಗೋಲು ರಹಿತ ಡ್ರಾಗೊಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳಿಂದಲೂ ಗೋಲು ಗಳಿಸಲು ಸಾಕಷ್ಟು ಪೈಪೋಟಿ ನಡೆದರೂ ನಿಗದಿತ ಸಮಯ ಹಾಗೂ ಹೆಚ್ಚುವರಿ ಸಮಯದಲ್ಲೂ ಯಾವುದೇ ಗೋಲು ದಾಖಲಾಗಲಿಲ್ಲ. ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡಿದ್ದು, ‘ಎ’ ಗುಂಪಿನಲ್ಲಿ ಭಾರತ 2ನೇ ಹಾಗೂ ಇರಾನ್‌ 3ನೇ ಸ್ಥಾನದಲ್ಲಿದೆ. ಭಾರತ ಭಾನುವಾರ ಚೈನೀಸ್‌ ತೈಪೆ ವಿರುದ್ಧ ಆಡಲಿದೆ.

ಇಂದಿನಿಂದ ಮಹಿಳಾ ಏಷ್ಯಾಕಪ್‌ ಹಾಕಿ

ಮಸ್ಕಟ್‌: ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಐತಿಹಾಸಿಕ 4ನೇ ಸ್ಥಾನ ಪಡೆದ ಭಾರತ ಮಹಿಳಾ ಹಾಕಿ ತಂಡ, ಶುಕ್ರವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಏಷ್ಯಾಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಮಲೇಷ್ಯಾ ಎದುರಾಗಲಿದೆ. ರಾಣಿ ರಾಂಪಾಲ್‌ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಗೋಲ್‌ ಕೀಪರ್‌ ಸವಿತಾ ಪೂನಿಯಾ ಮುನ್ನಡೆಸಲಿದ್ದಾರೆ. 

ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಢಗಳ 2 ಗುಂಪುಗಳಿವೆ. ಭಾರತ ‘ಎ’ ಗುಂಪಿನಲ್ಲಿದ್ದು ಜಪಾನ್‌, ಸಿಂಗಾಪುರ ಸಹ ಇದೇ ಗುಂಪಿನಲ್ಲಿವೆ. ಮತ್ತೊಂದು ಗುಂಪಿನಲ್ಲಿ ಚೀನಾ, ಇಂಡೋನೇಷ್ಯಾ, ದ.ಕೊರಿಯಾ, ಥಾಯ್ಲೆಂಡ್‌ ಸ್ಥಾನ ಪಡೆದಿವೆ. ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮೀಸ್‌ಗೇರಲಿವೆ. ಜೊತೆಗೆ 2022ರ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.

ಪಂದ್ಯ: ಸಂಜೆ 7.30ಕ್ಕೆ.

ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಪ್ರವೇಶಿಸಿದ ಪಿ.ವಿ.ಸಿಂಧು

ಲಖನೌ: ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು (PV Sindhu) ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಸಿಂಧು, ಅಮೆರಿಕದ ಲಾರೆನ್‌ ಲಾಮ್‌ ವಿರುದ್ಧ 21-16, 21-13 ನೇರ ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

ಅಂತಿಮ 8ರ ಸುತ್ತಿನಲ್ಲಿ ಸಿಂಧುಗೆ ಥಾಯ್ಲೆಂಡ್‌ನ ಸುಪನಿದಾ ಕೇಟೊಂಗ್‌ ಎದುರಾಗಲಿದ್ದಾರೆ, ಕಳೆದ ವಾರ ನಡೆದಿದ್ದ ಇಂಡಿಯಾ ಓಪನ್‌ನಲ್ಲಿ ಥಾಯ್‌ ಆಟಗಾರ್ತಿ ರನ್ನರ್‌-ಅಪ್‌ ಆಗಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್‌ ಕ್ವಾರ್ಟರ್‌ ಪ್ರವೇಶಿಸಿದ್ದಾರೆ.

Latest Videos
Follow Us:
Download App:
  • android
  • ios